ಬೆಂಗಳೂರು:ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮುಸ್ತಫಾ ಪೈಚಾರ್‌ಗೆ ಆಶ್ರಯ ನೀಡಿದ್ದ ಇಬ್ಬರು ಆರೋಪಿಗಳಾದ ಮನ್ಸೂರ್ ಪಾಷಾ ಹಾಗೂ ರಿಯಾಜ್ ಹೆಚ್.ವೈ. ಎಂಬವರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಇಂದು ಚಾರ್ಜ್ಶೀಟ್ ಸಲ್ಲಿಸಿತು.
2022ರ ಜುಲೈ 26ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಮೇಲೆ ಇಬ್ಬರು ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಪ್ರವೀಣ್ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಮಾರ್ಗಮಧ್ಯೆ ಮೃತಪಟ್ಟಿದ್ದರು. ಕೃತ್ಯದ ಕುರಿತು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಅದೇ ವರ್ಷ ಆಗಸ್ಟ್ 4ರಂದು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದ ಎನ್ಐಎ ತನಿಖೆಗಿಳಿದಿತ್ತು.
ಎನ್ಐಎ ಅಧಿಕಾರಿಗಳು ತಲೆಮರೆಸಿಕೊಂಡಿದ್ದ ಪ್ರಕರಣದ ಪ್ರಮುಖ ಸಂಚುಕೋರ ಹಾಗೂ ರಾಜ್ಯದಲ್ಲಿ ಪಿಎಫ್‌ಐ ಸಂಘಟನೆಯ ಮಾಸ್ಟರ್ ಟ್ರೈನರ್ ಆಗಿದ್ದ ಆರೋಪಿ ಮುಸ್ತಫಾ ಪೈಚಾರ್ ಹಾಗೂ ಆತನಿಗೆ ನೆರವು ನೀಡಿದ್ದ ಮನ್ಸೂರ್ ಪಾಷಾನನ್ನು ಮೇ 10ರಂದು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಬಂಧಿಸಿದ್ದರು.