ಬೆಂಗಳೂರು: ಅಲ್-ಖೈದಾದ ಸಂಚಿನ ಭಾಗವಾಗಿ ಬಾಂಗ್ಲಾದೇಶಿ ಪ್ರಜೆಗಳಿಂದ ಅಕ್ರಮ ಚಟುವಟಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ಅನೇಕ ಸ್ಥಳಗಳಲ್ಲಿ ಸೋಮವಾರ ಎನ್ಐಎ ಅಧಿಕಾರಿಗಳು ಏಕಕಾಲದಲ್ಲಿ ಶೋಧ ನಡೆಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಪಶ್ಚಿಮ ಬಂಗಾಳ, ಬಿಹಾರ, ತ್ರಿಪುರಾ ಮತ್ತು ಅಸ್ಸಾಂ ರಾಜ್ಯಗಳ 9 ಸ್ಥಳಗಳಲ್ಲಿ ದಾಳಿ ನಡೆಸಿರುವ ಎನ್ಐಎ ಅಧಿಕಾರಿಗಳು ಬಾಂಗ್ಲಾದೇಶ ಮೂಲದ ಅಲ್-ಖೈದಾ ನೆಟ್‌ವರ್ಕ್ ಬೆಂಬಲಿಸುವ ಮತ್ತು ಆರ್ಥಿಕ ನೆರವು ನೀಡುತ್ತಿದ್ದ ಶಂಕಿತ ವ್ಯಕ್ತಿಗಳನ್ನು ವಶಕ್ಕೆ ಪಡೆದಿದ್ದಾರೆ.
ಶೋಧದ ಸಂದರ್ಭದಲ್ಲಿ ಭಯೋತ್ಪಾದಕ ನಿಧಿ ಚಟುವಟಿಕೆಗಳಿಗೆ ಸಂಬಂಧಿಸಿದ ಬ್ಯಾಂಕ್ ವಹಿವಾಟಿನ ದಾಖಲೆಗಳು, ಮೊಬೈಲ್ ಫೋನ್‌ಗಳು, ಡಿಜಿಟಲ್ ಸಾಧನಗಳು ಮತ್ತು ಇತರ ಪುರಾವೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎನ್ಐಎ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ: 2023ರಲ್ಲಿ ಬಾಂಗ್ಲಾದೇಶ ಮೂಲದ ಅಲ್-ಖೈದಾ ಕಾರ್ಯಕರ್ತರು ಭಾರತವನ್ನು ಅಸ್ಥಿರಗೊಳಿಸುವ ಉದ್ದೇಶದ ಭಾಗವಾಗಿ ಪಿತೂರಿ ನಡೆಸುತ್ತಿರುವುದರ ಕುರಿತು ಎನ್ಐಎ ಪ್ರಕರಣ ದಾಖಲಿಸಿಕೊಂಡಿತ್ತು. ಕಳೆದ ವರ್ಷ ನವೆಂಬರ್‌ನಲ್ಲಿ ಬಾಂಗ್ಲಾದೇಶಿ ಪ್ರಜೆಗಳಾದ ಮೊಹಮ್ಮದ್ ಸೋಜಿಬ್ಮಿಯಾನ್, ಮುನ್ನಾ ಖಾಲಿದ್ ಅನ್ಸಾರಿ ಅಲಿಯಾಸ್ ಮುನ್ನಾ ಖಾನ್, ಅಜರುಲ್ ಇಸ್ಲಾಂ ಅಲಿಯಾಸ್ ಜಹಾಂಗೀರ್ ಅಥವಾ ಆಕಾಶ್ ಖಾನ್, ಅಬ್ದುಲ್ ಲತೀಫ್ ಅಲಿಯಾಸ್ ಮೊಮಿನುಲ್ ಅನ್ಸಾರಿ ಹಾಗೂ ಭಾರತೀಯ ಪ್ರಜೆ ಫರೀದ್ ವಿರುದ್ಧ ಎನ್ಐಎ ಅಧಿಕಾರಿಗಳು ಚಾರ್ಜ್ ಶೀಟ್ ಸಲ್ಲಿಸಿದ್ದರು.
ತಮ್ಮ ಚಟುವಟಿಕೆಗಳನ್ನು ಗೌಪ್ಯವಾಗಿ ನಡೆಸಲು ನಕಲಿ ದಾಖಲೆಗಳನ್ನು ಸಂಗ್ರಹಿಸಿದ್ದ ಆರೋಪಿಗಳು ಭಾರತದಲ್ಲಿನ ದುರ್ಬಲ ಮುಸ್ಲಿಂ ಯುವಕರನ್ನು ಒಗ್ಗೂಡಿಸಿ ಅಲ್-ಖೈದಾದ ಹಿಂಸಾತ್ಮಕ ಸಿದ್ಧಾಂತದೆಡೆಗೆ ಅವರನ್ನು ಪ್ರೇರೇಪಿಸುವಲ್ಲಿ ಸಕ್ರಿಯವಾಗಿದ್ದರು. ಮತ್ತು ಹಣ ಸಂಗ್ರಹಿಸಿ ಅಲ್-ಖೈದಾಕ್ಕೆ ವರ್ಗಾಯಿಸುತ್ತಿದ್ದರು ಎಂದು ಎನ್ಐಎ ತನಿಖೆ ವೇಳೆ ತಿಳಿದು ಬಂದಿತ್ತು ಎಂದು ಎನ್ನಲಾಗ್ತಿದೆ.
ಇದನ್ನೂ ಓದಿ:ರಾಜ್ಯದ ಹಲವೆಡೆ ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ, ದಾಖಲೆಗಳ ಪರಿಶೀಲನೆ