ಕರ್ನಾಟಕ

karnataka

ETV Bharat / state

ಬಂಡವಾಳ ಹೂಡಿಕೆ, ಉದ್ಯೋಗ ಸೃಷ್ಟಿಗೆ ನೂತನ ಜವಳಿ ನೀತಿ ಜಾರಿ - NEW TEXTILE POLICY

ಬಂಡವಾಳ ಹೂಡಿಕೆ, ಉದ್ಯೋಗ ಸೃಷ್ಟಿಗೆ ನೂತನ ಜವಳಿ ನೀತಿ ಜಾರಿಗೆ ತರುವ ಬಗ್ಗೆ ವಿಧಾನಸಭೆ ಕಲಾಪದಲ್ಲಿ ಸಚಿವರು ಮಾಹಿತಿ ನೀಡಿದರು.

Session
ವಿಧಾನಸಭೆ ಕಲಾಪ (ETV Bharat)

By ETV Bharat Karnataka Team

Published : 7 hours ago

ಬೆಳಗಾವಿ:ನೂತನ ಜವಳಿ ನೀತಿ ಸಿದ್ಧಪಡಿಸಲು ಖಾಸಗಿ ಕಂಪನಿಯನ್ನು ನೇಮಕ ಮಾಡಲಾಗಿದೆ. ಜವಳಿ ನೀತಿಯ ಕರಡು ಸಿದ್ಧಪಡಿಸಲು ಪೂರ್ವಭಾವಿ ಕ್ರಮ ಕೈಗೊಳ್ಳಲಾಗಿದೆ ಎಂದು ಜವಳಿ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ.

ಬೆಳಗಾವಿ ದಕ್ಷಿಣ ವಿಧಾನಸಭೆ ಕ್ಷೇತ್ರದ ಶಾಸಕರಾದ ಅಭಯ ಪಾಟೀಲ ಅವರ ಗಮನ ಸೆಳೆಯುವ ಸೂಚನೆ ವಿಷಯಕ್ಕೆ ಜವಳಿ ಸಚಿವರ ಪರವಾಗಿ ಉತ್ತರಿಸಿದ ಪ್ರಿಯಾಂಕ ಖರ್ಗೆ ಅವರು, ''ರಾಜ್ಯದಲ್ಲಿ ಜವಳಿ ಉದ್ಯಮ ಹಾಗೂ ನೇಕಾರರಿಗೆ ಪ್ರೋತ್ಸಾಹ ನೀಡಲು, ಬಂಡವಾಳ ಹೂಡಿಕೆ ಹಾಗೂ ಉದ್ಯೋಗ ಸೃಷ್ಟಿಗೆ 2024-29ರ ಅವಧಿಗೆ ನೂತನ ಜವಳಿ ನೀತಿ ಜಾರಿಗೆ ತರಲಾಗುವುದು. ಈ ಬಗ್ಗೆ ಉನ್ನತ ಮಟ್ಟದ ತಜ್ಞರ ಸಮಿತಿಯು ಆಗಸ್ಟ್‌ನಲ್ಲಿ ಸಭೆ ಸೇರಿ ನೀತಿ ತಯಾರಿಸಲು ಟರ್ಮ್ಸ್‌ ಆಫ್‌ ರೆಪರೆನ್ಸ್‌ ನಿಗದಿಪಡಿಸಿದೆ'' ಎಂದು ತಿಳಿಸಿದರು.

''2024-29ರ ಅವಧಿಗೆ 10 ಸಾವಿರ ಕೋಟಿ ರೂ.ಗಳ ಬಂಡವಾಳ ಹೂಡಿಕೆ ಹಾಗೂ ಎರಡು ಲಕ್ಷ ಉದ್ಯೋಗ ಸೃಷ್ಟಿಯ ಗುರಿಯೊಂದಿಗೆ ಹೊಸ ಜವಳಿ ನೀತಿ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಜವಳಿ ನೀತಿಯ ಅವಧಿಯಲ್ಲಿ ಸಿದ್ಧ ಉಡುಪು, ಜವಳಿ ಘಟಕಗಳಿಗೆ ಉತ್ತೇಜನ ನೀಡಲು ಸಾಲಾಧಾರಿತ ಬಂಡವಾಳ ಸಹಾಯಧನ, ಬಡ್ಡಿ ಸಹಾಯಧನ, ವಿದ್ಯುಚ್ಛಕ್ತಿ ಮರುಪಾವತಿ ಸಹಾಯಧನ, ವೇತನ ಸಹಾಯಧನ, ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಸಹಾಯಧನ, ಮುದ್ರಾಂಕ ಶುಲ್ಕ ವಿನಾಯಿತಿ ಮತ್ತು ನೋಂದಣಿ ಶುಲ್ಕ ವಿನಾಯಿತಿ ನೀಡಲಾಗುತ್ತಿದೆ'' ಎಂದು ವಿವರಿಸಿದರು.

ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್‌ ವಿತರಣೆ:''ನಾಲ್ಕನೇ ಕೈಮಗ್ಗ ಜನಗಣತಿಯ ಪ್ರಕಾರ ರಾಜ್ಯದಲ್ಲಿ 54,791 ಕೈಮಗ್ಗ ನೇಕಾರರನ್ನು ಗುರುತಿಸಿ ನೇಕಾರರ ಸೇವಾ ಕೇಂದ್ರದ ಮೂಲಕ 47,883 ಕೈಮಗ್ಗ ನೇಕಾರರಿಗೆ ಪೆಹಚಾನ್‌ ಕಾರ್ಡ್‌ಗಳನ್ನು ಹಾಗೂ 1,17,099 ವಿದ್ಯುತ್‌ ಮಗ್ಗ ನೇಕಾರರು, ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್‌ಗಳನ್ನು ವಿತರಿಸಲಾಗಿದೆ'' ಎಂದು ಮಾಹಿತಿ ನೀಡಿದರು.

''ನೇಕಾರರು ಆರ್ಥಿಕ ಹೊರೆ ಮತ್ತು ಇತರೆ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಜವಳಿ ಇಲಾಖೆ ಹಲವು ಸೌಲಭ್ಯಗಳನ್ನು ಒದಗಿಸುತ್ತಿದೆ. ಕೈಮಗ್ಗ ಮತ್ತು ವಿದ್ಯುತ್‌ ಮಗ್ಗ ನೇಕಾರರಿಗೆ ನೇಕಾರರ ಸಮ್ಮಾನ್‌ ಯೋಜನೆಯಲ್ಲಿ ವಾರ್ಷಿಕ ತಲಾ 5 ಸಾವಿರ ರೂ. ಆರ್ಥಿಕ ನೆರವು, ನೇಕಾರರ ಮಕ್ಕಳ ವ್ಯಾಸಂಗಕ್ಕೆ ವಿದ್ಯಾರ್ಥಿ ವೇತನ, ಕೈಮಗ್ಗ ಉಪಕರಣ ಖರೀದಿಗೆ ಘಟಕ ವೆಚ್ಚದಲ್ಲಿ ಪ್ರತಿಶತ 50ರಷ್ಟು ಸಹಾಯಧನ ನೆರವು, ಕಚ್ಚಾ ನೂಲು ಖರೀದಿ ಮೇಲೆ ಪ್ರತಿ ಕೆಜಿಗೆ 15 ರೂ. ಸಹಾಯಧನ ನೀಡಲಾಗುತ್ತಿದೆ'' ಎಂದು ಹೇಳಿದರು.

ಇದನ್ನೂ ಓದಿ:ಆನೆ ಕಾರ್ಯ ಪಡೆ ಹಾಗೂ ಕ್ಷಿಪ್ರ ಸ್ಪಂದನ ತಂಡಗಳ ರಚನೆ: ಸಚಿವ ಈಶ್ವರ ಖಂಡ್ರೆ

ಬಡ್ಡಿ ಸಹಾಯಧನ:''ನೇಕಾರರು ನೇಕಾರಿಗೆ ಉದ್ದೇಶಕ್ಕೆ ಎನ್​ಹೆಚ್‌ಡಿಸಿ ವತಿಯಿಂದ ಪ್ರತಿಶತ 15ರಷ್ಟು ಸಹಾಯಧನದೊಂದಿಗೆ ರೇಷ್ಮೆ, ಹತ್ತಿ, ಉಣ್ಣೆ ಮತ್ತು ಲೆನಿನ್‌ ನೂಲನ್ನು ನೀಡಲಾಗುತ್ತಿದೆ. ನೇಕಾರಿಕೆ ಉದ್ದೇಶಕ್ಕೆ ಸಹಕಾರಿ ಬ್ಯಾಂಕುಗಳಿಂದ ಪಡೆಯುವ ಸಾಲಕ್ಕೆ ಶೂನ್ಯ ಹಾಗೂ ಶೇ.1ರ ಬಡ್ಡಿ ದರದಲ್ಲಿ 2 ಲಕ್ಷ ರೂ.ವರೆಗೆ, ಶೇ.3ರ ಬಡ್ಡಿ ದರದಲ್ಲಿ 5 ಲಕ್ಷ ರೂ.ವರೆಗೆ ಪಡೆಯುವ ಸಾಲಕ್ಕೆ ಬಡ್ಡಿ ಸಹಾಯಧನ ನೀಡಲಾಗುತ್ತದೆ'' ಎಂದು ತಿಳಿಸಿದರು.

''ಕೈಮಗ್ಗ ನೇಕಾರರಿಗೆ ಮಾರುಕಟ್ಟೆ ಒದಗಿಸಲು ರಾಷ್ಟ್ರೀಯ ಕೈಮಗ್ಗ ಮೇಳ, ರಾಜ್ಯಮಟ್ಟದ ಕೈಮಗ್ಗ ಮೇಳ, ಜಿಲ್ಲಾಮಟ್ಟದ ಕೈಮಗ್ಗ ಮೇಳ ಆಯೋಜಿಸಲಾಗುತ್ತಿದೆ. ಮಿನಿ ಪವರ್‌ಲೂಮ್‌ ಪಾರ್ಕ್‌ ಸ್ಥಾಪನೆಗೆ ಹಾಗೂ ಪ್ರೊಸೆಸಿಂಗ್‌ ಘಟಕ ಸ್ಥಾಪನೆಗೆ ಸಹಾಯ ಧನ ವಿತರಿಸಲಾಗುತ್ತಿದೆ. ಹತ್ತು ಅಶ್ವಶಕ್ತಿವರೆಗಿನ ವಿದ್ಯುತ್‌ ಮಗ್ಗ ಹಾಗೂ ಮಗ್ಗಪೂರ್ವ ಘಟಕಗಳಿಗೆ ಉಚಿತವಾಗಿ ವಿದ್ಯುತ್‌ ಪೂರೈಕೆ ಮಾಡಲಾಗುತ್ತಿದೆ. 10.1 ಅಶ್ವಶಕ್ತಿಯಿಂದ 20 ಅ‍ಶ್ವಶಕ್ತಿ ಸಾಮರ್ಥ್ಯದ ವಿದ್ಯುತ್‌ ಮಗ್ಗಗಳು ಬಳಸಿದ ಒಟ್ಟು ಯೂನಿಟ್‌ಗೆ ಪ್ರತಿ ಯೂನಿಟ್‌ಗೆ 1.25 ರೂ. ಮಾತ್ರ ಸಂಗ್ರಹ ಮಾಡಲಿದ್ದು, ಉಳಿದ ಹಣವನ್ನು ಸರ್ಕಾರ ಭರಿಸಲಿದೆ. 150 ಅಶ್ವಶಕ್ತಿವರೆಗಿನ ವಿದ್ಯುತ್‌ ಸಂಪರ್ಕ ಹೊಂದಿರುವ ರೇಪಿಯರ್‌ ಮತ್ತು ಲಾಳಿರಹಿತ ವಿದ್ಯುತ್‌ ಮಗ್ಗ ಘಟಕಗಳಿಗೆ ಪ್ರತಿಶತ 50ರಷ್ಟು ವಿದ್ಯುತ್‌ ಸಹಾಯಧನ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ:ಮುದ್ರಾಂಕ ಇಲಾಖೆಯಲ್ಲಿ ಸರ್ಕಾರಕ್ಕೆ ಬರಬೇಕಾದ ಕೋಟ್ಯಂತರ ರೂ. ವರಮಾನ ವಂಚನೆ:

ABOUT THE AUTHOR

...view details