ಬೆಂಗಳೂರು: ನ್ಯಾಯಕ್ಕಾಗಿ ನ್ಯಾಯಾಲಯಗಳಿಗೆ ಓಡಾಡುವ ಬದಲಿಗೆ ಜನರ ಮನೆ ಬಾಗಿಲಿಗೆ ನ್ಯಾಯವನ್ನು ಕೊಂಡೊಯ್ಯುವ ಉದ್ದೇಶದಿಂದ ಗ್ರಾಮ ನ್ಯಾಯಾಲಯದಂತಹ ವಿನೂತನ ಪರಿಕಲ್ಪನೆ ಜಾರಿಗೆ ಮುಂದಾಗಿರುವ ರಾಜ್ಯ ಸರ್ಕಾರ, "ಕಾನೂನು ಮತ್ತು ನೀತಿ-2023" ರೂಪಿಸಿದೆ. ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ 'ಕಾನೂನು ಮತ್ತು ನೀತಿ-2023' ಪ್ರಸ್ತಾವನೆಗೆ ಗುರುವಾರ ಸಚಿವ ಸಂಪುಟ ಅನುಮೋದನೆ ನೀಡಿದೆ.
ತ್ವರಿತ ನ್ಯಾಯ ಒದಗಿಸುವುದು, ಆ ಮೂಲಕ ವ್ಯಾಜ್ಯಮುಕ್ತ ಗ್ರಾಮ ನಿರ್ಮಾಣದ ಜತೆಗೆ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವ, ಹೊಸ ತಾಲೂಕುಗಳಲ್ಲಿ ನ್ಯಾಯಾಲಯಗಳ ಸ್ಥಾಪನೆ, ನ್ಯಾಯಾಂಗದ ಮೂಲಸೌಕರ್ಯ ನವೀಕರಣ, ಆಧುನೀಕರಣ ಮತ್ತು ತಂತ್ರಜ್ಞಾನ ಬಳಕೆ, 'ನಾಗರಿಕ ಸ್ನೇಹಿ' ಆಡಳಿತ ಸಹಿತ ಹಲವು ಪೂರಕ ಕ್ರಮಗಳನ್ನು ಕೈಗೊಳ್ಳಲು ಸರ್ಕಾರದ ಉದ್ದೇಶವಾಗಿದೆ. ಇನ್ನು ಮುಂದೆ ಸಣ್ಣ ಪುಟ್ಟ ವ್ಯಾಜ್ಯಗಳೆಲ್ಲ ನಿಮ್ಮೂರಿನ ಕಟ್ಟೆ ಪಂಚಾಯತ್‌ಗಳಲ್ಲೇ ಇತ್ಯರ್ಥವಾಗಲಿವೆ.
ಆರೋಪಿ, ಸಾಕ್ಷಿಗಳ ಹೆಸರನ್ನು ಬಹಿರಂಗವಾಗಿ ಕೂಗುವ ವ್ಯವಸ್ಥೆ ರದ್ದುಗೊಳಿಸುವುದು, ಅಗತ್ಯವಿಲ್ಲದಾದ ಸಮಯದಲ್ಲಿ ವಿಚಾರಣೆ ಆರೋಪಿಗಳಿಗೆ ಕುಳಿತುಕೊಳ್ಳಲು ಡಾಕ್‌ನಲ್ಲಿ ಸೌಲಭ್ಯ, ಎಲ್ಲ ಹೊಸ ತಾಲೂಕುಗಳಲ್ಲಿ ನ್ಯಾಯಾಲಯ ಸ್ಥಾಪನೆ, ಆಧುನಿಕ ಸಂವಹನದ ವಿಧಾನದ ಮೂಲಕ ಸಮನ್ಸ್ ಜಾರಿ, ಹಳತಾದ ಕಾನೂನು ರದ್ದು, ಮಾದರಿ ನ್ಯಾಯಾಲಯಗಳ ಸ್ಥಾಪನೆ, ಕಾನೂನು ಶಿಕ್ಷಣ ನಿರ್ದೇಶನಾಲಯಗಳ ಸ್ಥಾಪನೆ ಹೀಗೆ ಹತ್ತು ಹಲವು ಸುಧಾರಣಾ ಕ್ರಮಗಳು ನೀತಿಯಲ್ಲಿ ಪ್ರಸ್ತಾಪವಾಗಿದೆ.
ಕಾನೂನು ಮತ್ತು ನೀತಿ ಅಡಿ ನ್ಯಾಯಿಕ ಮೂಲಸೌಕರ್ಯ ನವೀಕರಣಕ್ಕಾಗಿಯೇ ಸರಕಾರವು ಸುಮಾರು 2 ಸಾವಿರ ಕೋಟಿ ರೂ. ಹೂಡಿಕೆ ಮಾಡುವ ಇಚ್ಛಾಶಕ್ತಿ ವ್ಯಕ್ತಪಡಿಸಿದೆ. ಇದರಲ್ಲಿ ವಕೀಲರು, ಅಭಿಯೋಜಕರು, ಕಕ್ಷಿದಾರರಿಗೆ ಮೂಲಸೌಲಭ್ಯ ಕಲ್ಪಿಸುವುದು, ಸಂಧಾನ, ಮಾತುಕತೆ ಮತ್ತಿತರ ಪರ್ಯಾಯ ವಿವಾದ ಪರಿಹಾರ ವ್ಯವಸ್ಥೆಗಳನ್ನು ನಿರ್ವಹಿಸಲು ಹೆಚ್ಚುವರಿ ಮೂಲಸೌಕರ್ಯ ಸೃಷ್ಟಿಸುವುದು, ತಂತ್ರಜ್ಞಾನಗಳ ಅಳವಡಿಕೆ ಮತ್ತಿತರ ಅಂಶಗಳು ಒಳಗೊಂಡಿವೆ.
ಪ್ರಕರಣಗಳ ತ್ವರಿತ ವಿಲೇವಾರಿ ಸೇವೆಗಾಗಿ ತಂತ್ರಜ್ಞಾನವನ್ನು ತರಬೇಕಾಗಿದೆ. ವಿವಿಧ ಉದ್ದೇಶಗಳಿಗಾಗಿ ನ್ಯಾಯಾಲಯಗಳಿಗೆ ಭೇಟಿ ನೀಡುವ ಎಲ್ಲ ಮಧ್ಯಸ್ಥಗಾರರು, ವಿಶೇಷವಾಗಿ ವಿಕಲಚೇತನರು, ಮಹಿಳೆಯರು ಮತ್ತು ವೃದ್ಧರಿಗೆ ಅನುಕೂಲವಾಗುವಂತೆ ನ್ಯಾಯಾಲಯದ ಆವರಣದಲ್ಲಿ ಸೂಕ್ತ ವಾತಾವರಣವನ್ನು ನಿರ್ಮಿಸಬೇಕಾಗುವುದು. ಅವರನ್ನು ಗೌರವದಿಂದ ನಡೆಸಿಕೊಳ್ಳಲಾಗುತ್ತದೆಂಬ ಭಾವನೆಯು ಅವರಲಿ ಮೂಡಬೇಕು. ನ್ಯಾಯಾಲಯಗಳನ್ನು ಪ್ರವೇಶಿಸಲು ಇಳಿಜಾರು (Ramps) ಮತ್ತು ಗಾಲಿಕುರ್ಚಿಗಳನ್ನು ಒದಗಿಸಬೇಕಾಗುವುದು, ಯಾವುದೇ ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಲು ಅಭಿಯೋಜನಾ (prosecution) ವಿಭಾಗವು ಆಧುನಿಕ ತಂತ್ರಜ್ಞಾನದೊಂದಿಗೆ ಸನ್ನದ್ಧವಾಗಿರಬೇಕು. ಸಮಾಜದಲ್ಲಿ ಕಾನೂನಿನ ಗೌರವವನ್ನು ಕಾಪಾಡಲು ಅಪರಾಧ ಎಸಗಿದವರನ್ನು ನ್ಯಾಯಾಂಗದ ಮುಂದೆ ತರಬೇಕು.
ಮಾನವ ಹಕ್ಕು ಉಲ್ಲಂಘನೆ ಸಂತ್ರಸ್ತರ ಪ್ರಕರಣದಲ್ಲಿ ಅಗತ್ಯ ನೆರವು ನೀಡಲು ಸಂಸ್ಥೆಗಳ ಸ್ಥಾಪನೆ, ವ್ಯಾಜ್ಯ ನಿರ್ವಹಿಸುವ ಸರ್ಕಾರದ ನೀತಿಯಲ್ಲಿ ಮಾದರಿ ಬದಲಾವಣೆ ಮಾಡಿಕೊಳ್ಳುವುದು, ಬಾಕಿ ಇರುವ ಪ್ರಕರಣ ವಿಲೇವಾರಿ ಮಾಡಲು ವಿಶೇಷ ಕ್ರಮ, ಸರಳ ಭಾಷೆಯಲ್ಲಿ ಕಾನೂನು ರಚನೆ ಮತ್ತು ಪ್ರಕಟಣೆ, ಮಹಿಳೆಯರು, ಹದಿಹರೆಯದವರ, ಹಿರಿಯರ ಅಗತ್ಯತೆ ಪೂರೈಸುವುದು, ಇಲಾಖೆಗಳು ಕಾನೂನು, ಹೊಸ ನಿಯಮಗಳನ್ನು ಪಾಲಿಸುವಂತೆ ಮಾಡಲು ಕ್ರಮ, ವೃತ್ತಿನಿರತರಿಗೆ ಕೆಲಸ ಮಾಡಲು ಅನುಕೂಲಕರ ವಾತಾವರಣ ಕಲ್ಪಿಸುವುದು, ಕಾರಾಗೃಹಗಳಲ್ಲಿ ಕಾನೂನು ನೆರವು ಸೌಲಭ್ಯ, ಅಪರಾಧಕ್ಕಾಗಿ ಸೂಚಿಸಲಾದ ಗರಿಷ್ಠ ಶಿಕ್ಷೆಗಿಂತ ಹೆಚ್ಚು ಅವಧಿ ಬಂಧನದಲ್ಲಿರುವ ವ್ಯಕ್ತಿಗಳ ಬಿಡುಗಡೆ, ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧ, ಅವಧಿ ಮೀರಿದ ಕಾನೂನು ರದ್ದುಗೊಳಿಸುವುದು, ಕರ್ನಾಟಕ ಆಡಳಿತಾತ್ಮಕ (ಕಾರ್ಯ ನಿರ್ವಹಣೆ) ಅಧಿನಿಯಮ, ಎಲ್ಲ ಕಂದಾಯ ವಿಭಾಗಗಳಲ್ಲಿ ಎಲ್ಲ ಆಧುನಿಕ ಸೌಲಭ್ಯ ಇರುವ ವಿಧಿವಿಜ್ಞಾನ ಸಂಸ್ಥೆ ಸ್ಥಾಪನೆ ಮಾಡುವ ಉದ್ದೇಶವನ್ನು ನೀತಿಯಲ್ಲಿ ಸಾರಲಾಗಿದೆ.