ನೆಲಮಂಗಲ(ಬೆಂಗಳೂರು):ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿ ಅಂತಹ ಮನೆಗಳಿಗೆ ಎಂಟ್ರಿ ಕೊಟ್ಟು ಕ್ಷಣಾರ್ಧದಲ್ಲೇ ಚಿನ್ನಾಭರಣ ದೋಚಿ ಎಸ್ಕೇಪ್ ಆಗುತ್ತಿದ್ದ ಕುಖ್ಯಾತ ಕಳ್ಳನೊಬ್ಬನನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ ಪೊಲೀಸರು ಬಂಧಿಸಿದ್ದಾರೆ.
ನೆಲಮಂಗಲ ಪಟ್ಟಣದಲ್ಲಿ ನಡೆದಂತಹ ಮನೆಕಳ್ಳತನ ಪ್ರಕರಣದ ತನಿಖೆ ಜಾಡು ಹಿಡಿದ ನೆಲಮಂಗಲ ಟೌನ್ ಇನ್ಸ್ಪೆಕ್ಟರ್ SD ಶಶಿಧರ್ ಹಾಗೂ ತಂಡ ಕೋಲಾರದ ಬಂಗಾರಪೇಟೆ ಮೂಲದ 39 ವರ್ಷದ ಸೈಯದ್ ಅಹಮದ್ ಬಿನ್ ಅಬ್ದುಲ್ ಜಬ್ಬಾರ್ ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಬಳಿಕ ಈತನಿಂದ 25 ಲಕ್ಷ ರೂಪಾಯಿ ಮೌಲ್ಯದ 531 ಗ್ರಾಂ ಚಿನ್ನದ ಒಡವೆಗಳನ್ನು ವಶಪಡಿಸಿಕೊಂಡು ಬೆಂಗಳೂರು ಗ್ರಾಮಾಂತರ SP ಮಲ್ಲಿಕಾರ್ಜುನ ಬಾಲದಂಡಿ ಹಾಗೂ ನೆಲಮಂಗಲ ಉಪವಿಭಾಗದ ಡಿವೈಎಸ್ಪಿ ಜಗದೀಶ್, ಇನ್ಸ್ಪೆಕ್ಟರ್ SD ಶಶಿಧರ್ ಮತ್ತು ತಂಡ ವಾರಸುದಾರರಿಗೆ ಹಿಂತಿರುಗಿಸಿದರು.
ಕಳ್ಳತನವಾದ ಅಭರಣಗಳನ್ನು ಹಿಂಪಡೆದ ಶ್ವೇತ ಎಂಬುವರು ಮಾತನಾಡಿ, 'ನಾವೆಲ್ಲರೂ ಮಗಳ ಡ್ಯಾನ್ಸ್ ಕಾರ್ಯಕ್ರಮ ನೋಡಲು ಹೋಗಿದ್ದೆವು. ನಂತರ ಮನೆಗೆ ವಾಪಸ್ ಬಂದು ನೋಡಿದಾಗ ಕಳ್ಳ ಮನೆಯ ಬೀಗ ಒಡೆದು ಲಾಕರ್ ಮುರಿದು ಮನೆಯಲ್ಲಿದ್ದ ಚಿನ್ನ ಕದ್ದು ಪರಾರಿಯಾಗಿದ್ದ. ತಕ್ಷಣ ನಾವು ಇನ್ಸ್ಪೆಕ್ಟರ್ ಶಶಿಧರ್ ಅವರಿಗೆ ಮಾಹಿತಿ ನೀಡಿದ್ದೆವು. ಸ್ಥಳಕ್ಕೆ ಬಂದ ಇನ್ಸ್ಪೆಕ್ಟರ್ ಶಶಿಧರ್ ಅವರು ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡರು. ಉತ್ತಮ ಕಾರ್ಯಾಚರಣೆ ನಡೆಸಿ ಆ ಕಳ್ಳನನ್ನು ಪತ್ತೆ ಮಾಡಿ ಆತ ಕದ್ದಿದ್ದ ನಮ್ಮ ಒಡವೆಗಳನ್ನು ನಮಗೆ ಹಿಂತಿರುಗಿಸಿದ್ದಾರೆ. ತುಂಬಾ ಸಂತೋಷವಾಗಿದೆ. ಇನ್ಸ್ಪೆಕ್ಟರ್ ಶಶಿಧರ್ ಹಾಗೂ ತಂಡಕ್ಕೆ ಧನ್ಯವಾದ ಅರ್ಪಿಸುತ್ತೇವೆ' ಎಂದರು.