ಕರ್ನಾಟಕ

karnataka

ETV Bharat / state

ನೇಹಾ ಕೊಲೆ ಪ್ರಕರಣ ಸಿಐಡಿಗೆ ವಹಿಸುತ್ತೇವೆ, ಸ್ಪೆಷಲ್​ ಕೋರ್ಟ್​ ಮೂಲಕ ತ್ವರಿತ ವಿಚಾರಣೆ : ಸಿಎಂ ಸಿದ್ದರಾಮಯ್ಯ - Neha murder case

ನೇಹಾ ಕೊಲೆ ಪ್ರಕರಣವನ್ನು ಸಿಐಡಿಗೆ ವಹಿಸುತ್ತೇವೆ ಮತ್ತು ಇದಕ್ಕಾಗಿ ತ್ವರಿತ ನ್ಯಾಯಾಲಯ ಸ್ಥಾಪಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

By ETV Bharat Karnataka Team

Published : Apr 22, 2024, 2:00 PM IST

Updated : Apr 22, 2024, 5:39 PM IST

COD  SHIVAMOGGA  CM SIDDARAMAIAH  LOK SABHA ELECTION 2024
ಸಿಎಂ ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯ ಹೇಳಿಕೆ

ಶಿವಮೊಗ್ಗ:ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣದ ತನಿಖೆಯನ್ನು ಕರ್ನಾಟಕ ರಾಜ್ಯ ಸರ್ಕಾರವು ಸಿಐಡಿ ತನಿಖೆಗೆ ವಹಿಸಿದೆ. ನೇಹಾ ಕೊಲೆ ಪ್ರಕರಣದ ಬಗ್ಗೆ ಸಿಐಡಿ ತ‌ನಿಖೆ ನಡೆಸಲು ಆದೇಶ ಮಾಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ್ದಾರೆ.

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಮಾಹಿತಿ ನೀಡಿದರು. ''ಈ ಪ್ರಕರಣದಲ್ಲಿ ಇನ್ನೂ ನಾಲ್ವರು ಆರೋಪಿಗಳಿದ್ದಾರೆ ಎಂದು ನೇಹಾ ತಂದೆ ಹೇಳುತ್ತಿದ್ದಾರೆ. ಹೀಗಾಗಿ ಸಿಐಡಿ ತನಿಖೆಗೆ ವಹಿಸಲಾಗಿದೆ. ಅಲ್ಲದೆ, ಪ್ರಕರಣದ ತನಿಖೆಗೆ ವಿಶೇಷ ಕೋರ್ಟ್ ರಚನೆ ಮಾಡಲಾಗುವುದು. ಪ್ರಕರಣದ ಚಾರ್ಜ್ ಶೀಟ್ ಬೇಗ ಸಲ್ಲಿಸಬೇಕೆಂದು ತಿಳಿಸಲಾಗಿದೆ. ಇತರೆ ಕಾರಣದಿಂದ ನಾನು ನೇಹಾ ಮನೆಗೆ ಭೇಟಿ ನೀಡಲು ಸಾಧ್ಯವಾಗಿಲ್ಲ. ಕೊಲೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ನಮ್ಮ ಸಚಿವರು, ಕಾರ್ಯಕರ್ತರು ನೇಹಾ ಮನೆಗೆ ಹೋಗಿದ್ದಾರೆ'' ಎಂದರು.

ಕೇಂದ್ರ ಸರ್ಕಾರಕ್ಕೆ ಬರ ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್ ಸೂಚನೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ, ''ಬರ ಪರಿಹಾರ ನೀಡುವಂತೆ ನಾವು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದೆವು. ನಾವು ಮನವಿ ಕೊಟ್ಟು 7 ತಿಂಗಳು ಆಗಿದೆ.‌ ವರದಿ ಕೊಟ್ಟ 1 ತಿಂಗಳೊಳಗೆ ಪರಿಹಾರ ಕೊಡಬೇಕು ಅಂತಿದೆ. ಅಕ್ಟೋಬರ್ ಕೊನೆಯ ವಾರದಲ್ಲಿ ವರದಿ ನೀಡಿದ್ದೆವು. ರಾಜ್ಯದ ನಮ್ಮ ಖಜಾನೆಯಿಂದ ರೈತರಿಗೆ ಎರಡು ಸಾವಿರ ಪರಿಹಾರ ಕೊಟ್ಟಿದ್ದೇವೆ. ಕುಡಿಯುವ ನೀರಿಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತಿದ್ದೇವೆ'' ಎಂದರು.

ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದೂಗಳ ಆಸ್ತಿಯನ್ನು ಸಮಾನ ಹಂಚಿಕೆ ಮಾಡುತ್ತಾರೆ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯನ್ನು ಸಿಎಂ ಸಿದ್ದರಾಮಯ್ಯ ಖಂಡಿಸಿದರು. ''ಪ್ರಧಾನಮಂತ್ರಿಯಾದವರು ಇಷ್ಟು ಕೆಳಮಟ್ಟದಲ್ಲಿ ಮಾತನಾಡಬಾರದಿತ್ತು. ಅವರ ಸ್ಥಾನಕ್ಕೆ ಅಗೌರವ ತೋರುವ ರೀತಿ ಮಾತನಾಡಿದ್ದಾರೆ. ಎಲ್ಲಾ ಸಮುದಾಯಕ್ಕೆ ಅವರು ಪ್ರಧಾನಮಂತ್ರಿಗಳು. ಸಮಾನವಾಗಿ ಆಸ್ತಿ ಹಂಚಿಕೆ ಆಗಬೇಕು. ಅಧಿಕಾರ ಸಂಪತ್ತು‌ ಸಮಾನ ಹಂಚಿಕೆ ಆಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ದೇಶದಲ್ಲಿ ಅಧಿಕಾರ ಹಂಚಿಕೆ ಆಗಬೇಕು. ಒಬ್ಬರ ಕೈಯಲ್ಲಿ ಸಂಪತ್ತು ಇರಬಾರದು'' ಎಂದು ಹೇಳಿದರು.

ಸ್ವಾಮೀಜಿಗೆ ಕಾಂಗ್ರೆಸ್​ ಬೆಂಬಲಿಸಲು ಹೇಳಿದ್ದೇವೆ: ''ಶಿರಹಟ್ಟಿಯ ಫಕೀರೇಶ್ವರ ಮಠ ಜಾತ್ಯತೀತ ಮಠ. ದಿಂಗಾಲೇಶ್ವರ ಸ್ವಾಮೀಜಿಗಳಿಗೆ ತಮ್ಮ ನಾಮಪತ್ರ ವಾಪಸ್​ ತೆಗೆದುಕೊಂಡು ಕಾಂಗ್ರೆಸ್ ಬೆಂಬಲಿಸಲು ಹೇಳಿದ್ದೇನೆ. ಅವರು ವಾಪಸ್​ ತೆಗೆದುಕೊಳ್ಳುವ ವಿಶ್ವಾಸ ಇದೆ'' ಎಂದು ಸಿಎಂ ಹೇಳಿದರು.

ಈಶ್ವರಪ್ಪ ಸ್ಪರ್ಧೆಯಿಂದ ನಮಗೆ ಸಮಸ್ಯೆ ಆಗಲ್ಲ: ''ರಾಜ್ಯದಲ್ಲಿ ನಾವು 20 ಸೀಟು ಗೆಲ್ಲುತ್ತೇವೆ. ನಮ್ಮ ಶಕ್ತಿ ಮೇಲೆ ಶಿವಮೊಗ್ಗ ಕ್ಷೇತ್ರವನ್ನು ಸಹ ಗೆಲ್ಲುತ್ತೇವೆ. ಈಶ್ವರಪ್ಪ ಸ್ಪರ್ಧೆಯಿಂದ ನಮಗೆ ಏನೂ ಸಮಸ್ಯೆ ಆಗಲ್ಲ'' ಎಂದು ಸಿಎಂ ತಿಳಿಸಿದರು.

''ನಮ್ಮ ಹಳ್ಳಿಯಲ್ಲಿ ಗಾದೆ ಇದೆ. ನಿಮ್ಮ ಕೈಗೆ ಏನು ಕೊಟ್ಟರು ಅಂದ್ರೆ ಖಾಲಿ ಚೊಂಬು‌ ಅಂತಾರೆ. ಈ ದೇಶದ ಪ್ರಧಾನಿ‌ ನಮ್ಮ ಬರ ಪರಿಹಾರದ ಹಣ ಕೊಡಲಿಲ್ಲ. ಕಪ್ಪು ಹಣ ತಂದು 15 ಲಕ್ಷ ಹಾಕ್ತೀವಿ ಅಂದ್ರು, ಕೊಟ್ಟರಾ? . ಉದ್ಯೋಗ ಕೊಡ್ತೀವಿ ಅಂದ್ರು ಕೊಟ್ರಾ? ಖಾಲಿ ಚೊಂಬು, ಚಿಪ್ಪು ಕೊಟ್ಟಿದ್ದಾರೆ. ಅದಕ್ಕಾಗಿಯೇ ನಾವು ಜಾಹೀರಾತು ‌ಕೊಟ್ಡಿದ್ದೇವೆ'' ಎಂದು ಸಿಎಂ ಪ್ರತಿಕ್ರಿಯಿಸಿದರು.

''ಹೆಣ್ಣು ಮಕ್ಕಳಿಗೆ ಎರಡು ಸಾವಿರ ಕೊಟ್ಡಿದ್ದೇವೆ. ಬಸ್​​ನಲ್ಲಿ ಉಚಿತವಾಗಿ ಕರೆದುಕೊಂಡು ಹೋಗಿದ್ದೇವೆ. ಇದು ಡೇಂಜರಾ, ಸಮಾಜ ಒಡೆಯುವುದು ಡೇಂಜರ್. ನಾವು ಡೇಂಜರ್ ಅಲ್ಲ. ಈ ದೇಶಕ್ಕೆ ಬಿಜೆಪಿ ಡೇಂಜರ್, ಕಾಂಗ್ರೆಸ್​​ನವರಲ್ಲ'' ಎಂದರು.

ಬಿಜೆಪಿಯಲ್ಲಿ ಯಾರೂ ಶ್ರೀಮಂತರಿಲ್ವಾ? ಯಾರ ಮೇಲೆಯೂ ಯಾಕೆ ರೇಡ್ ಮಾಡಲ್ಲ ಎಂದು ಪ್ರಶ್ನಿಸಿದ ಸಿಎಂ, ''ಯಡಿಯೂರಪ್ಪ, ವಿಜಯೇಂದ್ರ ಭ್ರಷ್ಟಾಚಾರ ಮಾಡಿಲ್ವಾ? ಅಶೋಕ್, ಶೋಭಾ ಕರಂದ್ಲಾಜೆ ಭ್ರಷ್ಟಾಚಾರ ಮಾಡಿಲ್ವಾ? ಅವರ ಮೇಲೆ ರೇಡ್ ಮಾಡಲಿ. ನಮ್ಮವರ ಮೇಲೆಯೂ ಕಾನೂನು ಪ್ರಕಾರ ರೇಡ್ ಮಾಡಲಿ. ಯಾರು ಟ್ಯಾಕ್ಸ್‌ ಕಟ್ಟಿಲ್ಲ, ಕಾನೂನು ಪ್ರಕಾರ ಆಸ್ತಿ ಸಂಪಾದನೆ ಮಾಡಿಲ್ಲವೋ ಅವರ ಮೇಲೆ ಕ್ರಮ ಕೈಗೊಳ್ಳಲಿ'' ಎಂದು ಹೇಳಿದರು.

ಇದನ್ನೂ ಓದಿ:ನೇಹಾ ಕೊಲೆ ಪ್ರಕರಣ ರಾಜಕೀಯ ಆಗಬಾರದಿತ್ತು, ಕಾನೂನು ಎಲ್ಲರಿಗೂ ಒಂದೇ: ಗೃಹ ಸಚಿವ ಡಾ. ಜಿ. ಪರಮೇಶ್ವರ್ - Neha Murder Case

Last Updated : Apr 22, 2024, 5:39 PM IST

ABOUT THE AUTHOR

...view details