ಹುಬ್ಬಳ್ಳಿ:ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ನಡೆದ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣದ ತನಿಖೆಯನ್ನು ಆದಷ್ಟು ಬೇಗ ಪೂರ್ಣಗೊಳಿಸುತ್ತೇವೆ. ಅಲ್ಲದೇ ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತೇವೆ ಎಂದು ನಗರ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ್ ಹೇಳಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ನೇಹಾ ಹಿರೇಮಠ ಕೊಲೆಗೆ ಸಂಬಂಧಿಸಿದಂತೆ ಅವಳಿನಗರದಲ್ಲಿ ಸಾಕಷ್ಟು ಪ್ರತಿಭಟನೆ, ಹೋರಾಟ ನಡೆದಿವೆ. ಅಲ್ಲದೇ ಬಹುತೇಕ ಪ್ರಮುಖರು ಮನವಿ ಮಾಡಿ ಕೂಡಲೇ ತನಿಖೆ ಪೂರ್ಣಗೊಳಿಸಿ ಎಂದು ಮನವಿ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಆದಷ್ಟು ಶೀಘ್ರವಾಗಿ ತನಿಖೆ ಪೂರ್ಣಗೊಳಿಸುತ್ತೇವೆ ಎಂದರು.
ಕೊಲೆಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಈಗಲೇ ಎಲ್ಲವನ್ನೂ ಬಹಿರಂಗ ಪಡಿಸಲು ಆಗಲ್ಲ. ಅಲ್ಲದೇ ನಾವು ಪ್ರೀತಿ, ಪ್ರೇಮದ ವಿಚಾರದ ಬಗ್ಗೆ ತನಿಖೆ ನಡೆಸುತ್ತಿಲ್ಲ. ಕೊಲೆಯ ಬಗ್ಗೆ ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲಾಗುತ್ತದೆ. ಯಾವುದೇ ಸಂದರ್ಭದಲ್ಲಿ ಕೂಡ ಮಹಿಳೆಯರು ವಿಚಲಿತರಾಗದೇ ಧೈರ್ಯವಾಗಿರಬೇಕು. ಅವಳಿನಗರದಲ್ಲಿ ಮತ್ತಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸುವ ಮೂಲಕ ಭದ್ರತೆ ನೀಡಲಾಗುತ್ತದೆ ಎಂದು ಅಭಯ ನೀಡಿದರು.
ಕಾನೂನು ಸುವ್ಯವಸ್ಥೆ ಬಲಪಡಿಸಲು ಮನವಿ: ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ನಡೆಯುತ್ತಿರುವ ಕಾನೂನುಬಾಹಿರ ಕೃತ್ಯಗಳಿಗೆ ಕಡಿವಾಣ ಇಲ್ಲವಾಗಿದೆ. ಹಾಡಹಗಲೇ ವಿದ್ಯಾರ್ಥಿನಿಯೋರ್ವಳ ಬರ್ಬರ ಕೊಲೆಯಾಗಿರುವುದನ್ನು ಖಂಡಿಸಿ ಕೂಡಲೇ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಹುಬ್ಬಳ್ಳಿಯ ಸದ್ಭಾವ ವೇದಿಕೆಯಿಂದ ಪೊಲೀಸ್ ಕಮಿಷನರ್ಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಕೆಎಲ್ಇ ಮುಖ್ಯಸ್ಥ ಶಂಕರಣ್ಣ ಮುನವಳ್ಳಿ, ಸ್ವರ್ಣಾ ಗ್ರೂಪ್ ಆಫ್ ಕಂಪನಿಯ ಮಾಲೀಕರಾದ ವಿ.ಎಸ್.ವಿ ಪ್ರಸಾದ ಹಾಗೂ ಭವರಲಾಲ್ ಆರ್ಯ ಸೇರಿದಂತೆ ಅನೇಕ ಕಾರ್ಯಕರ್ತರಿದ್ದರು.
ನೇಹಾ ಕೊಲೆಗೆ ನ್ಯಾಯ ಕೊಡಿಸಿ:ನೇಹಾ ಹಿರೇಮಠ ಕೊಲೆಯ ಪ್ರಕರಣ ಖಂಡಿಸಿ ಜಯ ಕರ್ನಾಟಕ ಸಂಘಟನೆಯಿಂದ ಚೆನ್ನಮ್ಮ ವೃತ್ತದ ಬಳಿ ಪ್ರತಿಭಟನೆ ನಡೆಸಲಾಯಿತು. ನೇಹಾ ಹಿರೇಮಠ ಕೊಲೆ ಮಾಡಿರುವ ಆರೋಪಿಗೆ ಕೂಡಲೇ ಗಲ್ಲು ಶಿಕ್ಷೆ ವಿಧಿಸಬೇಕು. ಅಲ್ಲದೇ ರಾಜ್ಯದಲ್ಲಿ ಹೆಣ್ಣುಮಕ್ಕಳಿಗೆ ಭದ್ರತೆ ನೀಡುವ ಕಾರ್ಯವನ್ನು ಮಾಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ನೂರಾರು ಮಹಿಳೆಯರು ಹಾಗೂ ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಯತ್ನಾಳಗೆ ಕಣ್ಣೀರಿನ ಉತ್ತರ ಕೊಟ್ಟ ದಿಂಗಾಲೇಶ್ವರ ಸ್ವಾಮೀಜಿ: ನೇಹಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ದಿಂಗಾಲೇಶ್ವರ ಸ್ವಾಮೀಜಿ, ''ದೇಶದಲ್ಲಿ ಸರ್ಕಾರ, ಕಾನೂನು, ಸ್ತ್ರೀ ಕುಲ ತಲೆ ತಗ್ಗಿಸುವ ಘಟನೆ ಇದು. ಒಂದು ಕಡೆ ಆ ಮಗು ತೀರಿಹೋಗಿದೆ. ಅದು ಹಾಡಹಗಲೇ ಅದು ಪ್ರತಿಷ್ಠಿತ ಕಾಲೇಜ್‌ನಲ್ಲಿ ನಡೆದಿದೆ. ವಿದ್ಯಾರ್ಥಿಗಳ ಮುಂದೆ ಕೊಲೆಯಾಗಿದೆ. ಇದು ನಾಡಿನ ಕುಲ ಕೋಟಿ ತಲೆತಗ್ಗಿಸುವ ಕೆಲಸ. ಅಲ್ಲಿರೋ ಯಾರೂ ಅವಳ ರಕ್ಷಣೆ ಮಾಡಿಲ್ಲ. ಕುಟುಂಬ ಬಹಳ ನೊಂದಿದೆ, ನಾವು ನೊಂದಿದ್ದೇವೆಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.