ಬೆಂಗಳೂರು:''ನಕ್ಸಲರಿಗೆ ಶರಣಾಗಲು ಕರೆ ನೀಡಿದ್ದು, ಕೆಲ ಇಲಾಖೆಯವರು ಸಂಪರ್ಕಿಸಿ ಶರಣಾಗತಿಗೆ ಯತ್ನಿಸುತ್ತಿದ್ದಾರೆ'' ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದರು.
ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ಡಿಜಿಪಿ ಪ್ರಣಬ್ ಮೊಹಂತಿ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ''ನಕ್ಸಲರು ಶರಣಾಗುವ ವಿಚಾರ ಸಂಬಂಧ ಮಾಡುವುದಕ್ಕೆ ಅವರು ಬಂದಿದ್ದರು. ನಾನು ಕೆಲವು ಸೂಚನೆ ಕೊಟ್ಟಿದೇನೆ. ನಾವು ಶರಣಾಗತಿ ಮಾಡಿಸಿಕೊಳ್ಳುವುದೇ ಉತ್ತಮ. ಅವರು ಗುಂಡು ಹಾರಿಸುತ್ತಾರೆ, ನಮ್ಮವರು ಗುಂಡು ಹಾರಿಸುತ್ತಾರೆ. ಅದನ್ನೆಲ್ಲ ಬದಿಗಿಟ್ಟು ಸರೆಂಡರ್ ಆಗುವುದಕ್ಕೆ ಹೇಳುತ್ತಿದ್ದೇವೆ. ನಾವು ಈಗಾಗಲೇ ಓಪನ್ ಕಾಲ್ ಕೊಟ್ಟಿದ್ದೇವೆ. ಕೆಲವು ಇಲಾಖೆಯವರು ಸಹ ಬೇರೆ ಬೇರೆ ರೀತಿಯಲ್ಲಿ ಸಂಪರ್ಕ ಮಾಡಿ, ಶರಣಾಗಿ ಅಂತ ಹೇಳುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ'' ಎಂದು ತಿಳಿಸಿದರು.
''ಕಲಬುರಗಿ ಜೈಲಿನಲ್ಲಿ ಅವ್ಯವಸ್ಥೆಯ ವಿಚಾರವಾಗಿ ಮಾತನಾಡಿ, ''ಸಂಬಂಧಪಟ್ಟವರ ಜೊತೆ ಮಾತನಾಡುತ್ತೇನೆ. ಅದು ನಿಜ ಆಗಿದ್ದರೆ, ಜೈಲರ್, ಅಧಿಕಾರಿಗಳ ತಪ್ಪಿದ್ದರೆ ಅವರ ಮೇಲೆ ಕ್ರಮ ಆಗುತ್ತದೆ. ವಿಚಾರಣೆ ಮಾಡಿ ಅಗತ್ಯ ಕ್ರಮ ತೆಗೆದುಕೊಳ್ಳಲು ಹೇಳುತ್ತೇನೆ. ಎಲ್ಲ ತನಿಖೆ ಮಾಡಿಸುತ್ತೇನೆ'' ಎಂದರು.
ಗೃಹ ಸಚಿವ ಜಿ.ಪರಮೇಶ್ವರ್ (ETV Bharat) ಹೆಚ್ಚಿನ ಮಾಹಿತಿ ಮುನಿಯಪ್ಪಗೆ ಗೊತ್ತಿರಬಹುದು:ರಾಜ್ಯದಲ್ಲಿ ಅಧಿಕಾರ ಹಂಚಿಕೆ ಒಪ್ಪಂದ ಆಗಿರುವುದು ನಿಜ ಎಂಬ ಸಚಿವ ಕೆ. ಹೆಚ್. ಮುನಿಯಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ''ಅದು ಎಲ್ಲೆಲಿಂದ ಮಾಹಿತಿ ತೆಗೆದುಕೊಂಡು ಮಾತನಾಡುತ್ತಾರೆ ಅಂತ ನನಗೆ ಗೊತ್ತಿಲ್ಲ. ನನಗಿಂತ ಹೆಚ್ಚಿನ ಮಾಹಿತಿ ಮುನಿಯಪ್ಪಗೆ ಗೊತ್ತಿರಬಹುದು. ಅಂತಿಮವಾಗಿ ಪಕ್ಷದ ವರಿಷ್ಠರು, ಹೈಕಮಾಂಡ್ ನಾಯಕರು ನಿರ್ಧಾರ ಮಾಡುತ್ತಾರೆ'' ಎಂದು ತಿಳಿಸಿದರು.
3,000 ರೂ.ಗೆ ಮುಡಾ ನಿವೇಶನ ಹಂಚಿಕೆ ಅಕ್ರಮ ಆರೋಪ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ''ನನಗೆ ಗೊತ್ತಿಲ್ಲ. ಲೋಕಾಯುಕ್ತ ತನಿಖೆ ಮಾಡುತ್ತಿದ್ದಾರೆ. ಇ.ಡಿ ಅವರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಇ.ಡಿ ಕೂಡ ಲೋಕಾಯುಕ್ತಕ್ಕೆ ಪತ್ರ ಬರೆದಿದೆ. ಈ ಮಧ್ಯೆ ಏನೋ ಬಂದಿದೆ ಅಂತ ನಾವು ಮಾತನಾಡುವುದು ಸೂಕ್ತವಲ್ಲ. ನಾವು ಪ್ರತಿಕ್ರಿಯೆ ನೀಡುವುದು ಸೂಕ್ತವಲ್ಲ. ತನಿಖೆ ಮಾಡುವವರು ಗಮನಹರಿಸುತ್ತಾರೆ'' ಎಂದರು.
ಚಳಿಗಾಲ ಅಧಿವೇಶನ:ಬೆಳಗಾವಿ ಚಳಿಗಾಲ ಅಧಿವೇಶನ ವಿಚಾರವಾಗಿ ಮಾತನಾಡಿ, ''ಉತ್ತರ ಕರ್ನಾಟಕ ಭಾಗದ ಜನರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ, ಬಗೆಹರಿಸುವುದು ನಮ್ಮ ಉದ್ದೇಶ. ಬಿಜೆಪಿಯವರು ಹೋರಾಟ ಮಾಡಲಿ, ಬೇಡ ಎನ್ನುವುದಿಲ್ಲ. ಆದರೆ, ಆ ಭಾಗದ ಜನರ ಸಮಸ್ಯೆ ಕುರಿತು ಹೆಚ್ಚಿನ ಚರ್ಚೆ ಆಗಲಿ'' ಎಂದು ಹೇಳಿದರು.
ಇದನ್ನೂ ಓದಿ:ಇಂದು ಚಾಮರಾಜನಗರಕ್ಕೆ ಮುಖ್ಯಮಂತ್ರಿ: ದಿನವಿಡೀ ವಿವಿಧ ಕಾರ್ಯಕ್ರಮದಲ್ಲಿ ಭಾಗಿ