ಸುಳ್ಯ(ದಕ್ಷಿಣ ಕನ್ನಡ):ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕೊಡಗು ಜಿಲ್ಲಾ ಗಡಿ ಭಾಗವಾದ ಕಡಮಕಲ್ಲು ಬಳಿಯ ಕೂಜಿಮಲೆ ರಬ್ಬರ್ ಎಸ್ಟೇಟ್ ಬಳಿ ನಕ್ಸಲರು ಕಾಣಿಸಿಕೊಂಡಿದ್ದಾರೆ ಎಂಬ ಮಾಹಿತಿ ಹಬ್ಬಿದೆ. ಸುಮಾರು 8 ಜನರಿರುವ ನಕ್ಸಲರ ತಂಡವೊಂದು ಶನಿವಾರ ಸಂಜೆ ಇಲ್ಲಿನ ಕೂಜಿಮಲೆ, ಕಲ್ಮುಕಾರು ಎಂಬಲ್ಲಿನ ಅಂಗಡಿಯೊಂದರಿಂದ ಸುಮಾರು 3,500 ಸಾವಿರ ರೂಪಾಯಿ ನಗದು ಪಾವತಿಸಿ ದಿನಸಿ ಖರೀದಿಸಿದ್ದಾರೆ ಎನ್ನಲಾಗಿದೆ.
ನಕ್ಸಲರೆಂಬ ಶಂಕೆ ಹಿನ್ನೆಲೆಯಲ್ಲಿ ಪೊಲೀಸರು, ಎಎನ್ಎಫ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಂಕಿತ ನಕ್ಸಲರ ತಂಡದಲ್ಲಿ ಆರು ಮಂದಿ ಪುರುಷರು ಹಾಗೂ ಇಬ್ಬರು ಮಹಿಳೆಯರು ಇದ್ದರು ಎನ್ನಲಾಗಿದ್ದು, ಸಶಸ್ತ್ರಧಾರಿಗಳಾಗಿದ್ದರು ಎಂಬ ಮಾಹಿತಿ ಸಾರ್ವಜನಿಕ ವಲಯದಿಂದ ಲಭ್ಯವಾಗಿದೆ.
ನಕ್ಸಲ್ ನಿಗ್ರಹ ದಳದಿಂದ ಕೂಂಬಿಂಗ್ ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಾಲೂರು ಗ್ರಾಮದ ಗಡಿ ಪ್ರದೇಶವಾದ ಕೂಜಿಮಲೆಯಲ್ಲಿ ಭಾನುವಾರ ಸಂಜೆ ಕಾಣಿಸಿಕೊಂಡ ಈ ನಕ್ಸಲರ ತಂಡವು ಬೇರೆ ಕಡೆ ಸಂಚರಿಸಿರಬಹುದು ಎಂದು ಊಹಿಸಲಾಗಿದೆ. ಈ ಮಾಹಿತಿಯಂತೆ ಕಾರ್ಕಳದಿಂದ ನಕ್ಸಲ್ ನಿಗ್ರಹ ದಳ (ಎಎನ್ಎಫ್) ತಂಡ ಆಗಮಿಸಿ, ಕೂಜಿಮಲೆ ಸಮೀಪದ ಮೂರು ಕಡೆಗಳಾದ ಬಾಳುಗೋಡಿನ ಉಪ್ಪುಕಳ, ಕೂಜಿಮಲೆ, ಕಡಮಕಲ್ಲು ಪ್ರದೇಶಕ್ಕೆ ತೆರಳಿ ಕೂಂಬಿಂಗ್ ಆರಂಭಿಸಿದ್ದಾರೆ.
ಸುಳ್ಯ ತಾಲೂಕಿನ ಗುತ್ತಿಗಾರು, ಕೊಲ್ಲಮೊಗರು, ಕಲ್ಮಕಾರು ಪ್ರದೇಶದವರೆಗೂ ಕೂಜಿಮಲೆ ರಬ್ಬರ್ ಎಸ್ಟೇಟ್ ವ್ಯಾಪಿಸಿದೆ. 2012ರಲ್ಲಿ ಕಾಲೂರು ಗ್ರಾಮದಲ್ಲಿ ನಕ್ಸಲರು ಪ್ರತ್ಯಕ್ಷಗೊಂಡಿದ್ದರು. ನಂತರ, 2018ರ ಫೆಬ್ರವರಿ ತಿಂಗಳಲ್ಲಿ ಇದೇ ವ್ಯಾಪ್ತಿಯ ಸಂಪಾಜೆ ಗುಡ್ಡೆಗದ್ದೆಯಲ್ಲೂ ನಕ್ಸಲರು ಕಾಣಿಸಿಕೊಂಡಿದ್ದರು. ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರತೀ ಬಾರಿಯೂ ಕೊಡಗು ಜಿಲ್ಲೆಯ ಗಡಿ ಪ್ರದೇಶದಲ್ಲಿ ನಕ್ಸಲರ ಚಲನವಲನಗಳು ಗೋಚರಿಸುತ್ತವೆ.
ಇದನ್ನೂ ಓದಿ:ಮೋಸ್ಟ್ ವಾಂಟೆಡ್ ನಕ್ಸಲ್ ಸುರೇಶ್ ಕೇರಳದಲ್ಲಿ ಪತ್ತೆ; ಚಿಕ್ಕಮಗಳೂರು ಪೊಲೀಸರ ವಶಕ್ಕೆ