ದಸರಾ ವೈಭವ: ಅರಮನೆಯ ರಾಜವಂಶಸ್ಥರ ನವರಾತ್ರಿ ಧಾರ್ಮಿಕ ಕಾರ್ಯಕ್ರಮಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.. - MYSURU DASARA 2024 - MYSURU DASARA 2024
ಮೈಸೂರಿನಲ್ಲಿ ದಸರಾ ಸಂಭ್ರಮ ಜೋರಾಗಿಯೇ ನಡೆಯುತ್ತದೆ. ಹಬ್ಬದ ಹಿನ್ನೆಲೆ ಅರಮನೆಯ ರಾಜವಂಶಸ್ಥರಿಂದ ನಡೆಯುವ ನವರಾತ್ರಿ ಧಾರ್ಮಿಕ ಕಾರ್ಯಕ್ರಮಗಳ ಕುರಿತು ಸಂಪೂರ್ಣ ಮಾಹಿತಿ ತಿಳಿಯಲು ಈ ಸ್ಟೋರಿಯನ್ನು ಓದಿ...
ಅಲಂಕಾರಗೊಂಡ ಮೈಸೂರಿನ ಅಂಬಾವಿಲಾಸ ಅರಮನೆ ಮತ್ತು ಸಿಂಹಾಸನದ ಮೇಲೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (ETV Bharat)
ಮೈಸೂರು:ನಾಡಹಬ್ಬ ದಸರಾ ಹಬ್ಬವನ್ನು ಸರ್ಕಾರ ಅದ್ಧೂರಿಯಾಗಿ ನಾಡ ಅಧಿದೇವತೆ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿಗೆ ಪುಷಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದೆ. ಇತ್ತಕಡೆ ಅರಮನೆಯಲ್ಲಿ ರಾಜವಂಶಸ್ಥರು ತಮ್ಮ ಸಂಪ್ರದಾಯದಂತೆ ಶರನ್ನವರಾತ್ರಿಯನ್ನು ಅರಮನೆಯಲ್ಲಿ ಸಂಪ್ರಾದಾಯದಂತೆ ಇಂದಿಗೂ ನಡೆಸಿಕೊಂಡು ಬರುತ್ತಿದ್ದಾರೆ.
ನವರಾತ್ರಿಯ ಮೊದಲ ದಿನದಿಂದ ವಿಜಯ ದಶಮಿಯವರೆಗೆ ಹತ್ತು ದಿನಗಳವರೆಗೆ ರಾಜ ಪಾರಂಪರೆಯಂತೆ ನವರಾತ್ರಿಯನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಅದರಲ್ಲಿ ನವರಾತ್ರಿಯ ಮೊದಲ ದಿನದಿಂದ ಪಟ್ಟದ ಹಸು, ಪಟ್ಟದ ಆನೆ, ಪಟ್ಟದ ಕುದುರೆ ಹಾಗೂ ಇತರ ರಾಜ ಪಾರಂಪರೆಯ ರಾಜರು ಉಪಯೋಗಿಸುತ್ತಿದ್ದ ಆಯುಧಗಳಿಗೆ ಪೂಜೆ ಸಲ್ಲಿಸುತ್ತಾರೆ. ಜೊತೆಗೆ ರತ್ನ ಖಚಿತ ಸಿಂಹಾಸನದಲ್ಲಿ ರಾಜವಂಶಸ್ಥರು ಖಾಸಗಿ ದರ್ಬಾರ್ ನಡೆಸಿ ನವರಾತ್ರಿಯನ್ನ ಆಚರಿಸುತ್ತಾರೆ. ಜೊತೆಗೆ ನವರಾತ್ರಿಯ 9ನೇ ದಿನ ಆಯುಧ ಪೂಜೆ ಹತ್ತನೇ ದಿನ ವಿಜಯ ದಶಮಿಯನ್ನು ಆಚರಿಸುವುದು ಸಂಪ್ರದಾಯ. ಹಾಗಾದರೆ, ರಾಜ ಪಾರಂಪರೆಯಲ್ಲಿ ನಡೆಯುವ ಶರನ್ನವರಾತ್ರಿಯ ಧಾರ್ಮಿಕ ಕಾರ್ಯಗಳ ಸಂಪೂರ್ಣ ವಿವರ ಇಲ್ಲಿದೆ ನೋಡಿ.
ಅಲಂಕಾರಗೊಂಡ ಮೈಸೂರಿನ ಅಂಬಾವಿಲಾಸ ಅರಮನೆ (ETV Bharat)
ಶರನ್ನವರಾತ್ರಿಯ ಮೊದಲ ದಿನ ಅರಮನೆಯಲ್ಲಿನ ಧಾರ್ಮಿಕ ಕಾರ್ಯಗಳೇನು?:
ಸಿಂಹಾಸನಕ್ಕೆ ಸಿಂಹದ ತಲೆ ಜೋಡಣೆ:ಬೆಳಗ್ಗೆ 4.30ಕ್ಕೆ ರಾಜವಂಶಾಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಎಣ್ಣೆಶಾಸ್ತ್ರ ನೆರವೇರಲಿದೆ. ಬೆಳಗ್ಗೆ 5.45 ರಿಂದ 6.10 ರೊಳಗೆ ದರ್ಬಾರ್ ಹಾಲ್ನಲ್ಲಿ ಜೋಡಣೆ ಮಾಡಿರುವ ಸಿಂಹಾಸನಕ್ಕೆ ಸಿಂಹದ ತಲೆ ಜೋಡಣೆ ಬೆಳಗ್ಗೆ 7.45 ರಿಂದ 8.45 ರವರೆಗೆ ಅರಮನೆಯ ಚಾಮಂಡಿ ತೊಟ್ಟಿಯಲ್ಲಿ ಯದುವೀರ್ ಅವರಿಗೆ ಕಂಕಣ ಧಾರಣೆ. 10:30ಕ್ಕೆ ಸವಾರಿತೊಟ್ಟಿಗೆ ಪಟ್ಟದ ಆನೆ, ಪಟ್ಟದ ಕುದುರೆ ಪಟ್ಟದ ಹಸುವಿನೊಂದಿಗೆ ದೇವರನ್ನು ಕೋಡಿ ಸೋಮೇಶ್ವರ ದೇವಾಲಯದ ಬಳಿಯಿಂದ ತರಲಾಗುತ್ತದೆ.
ಸಿಂಹಾಸನದ ಮೇಲೆ ಕುಳಿತಿರುವ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (ETV Bharat)
ದರ್ಬಾರ್ ಉತ್ಸವ:ಆ ನಂತರ ದರ್ಬಾರ್ ಹಾಲ್ನಲ್ಲಿ ಖಾಸಗಿ ದರ್ಬಾರ್ ಆರಂಭವಾಗಲಿದೆ. 11 ಗಂಟೆಗೆ ಕಳಸ ಪೂಜೆ ಸಿಂಹಾಸನ ಪೂಜೆ ನೆರವೇರಲಿದೆ. ಬಳಿಕ 11.35 ರಿಂದ 12.05 ರವರೆಗೆ ಯದುವೀರ್ ಸಿಂಹಾಸನ ಏರಿ ದರ್ಬಾರ್ ನಡೆಸಲಿದ್ದಾರೆ. ಮಧ್ಯಾಹ್ನ 1:05 ರಿಂದ 1:35 ರೊಳಗೆ ಚಾಮುಂಡೇಶ್ವರಿ ಮೂರ್ತಿಯನ್ನು ಚಾಮುಂಡಿ ತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ತರಲಾಗುತ್ತದೆ. ಆ ಬಲಿಕ ಕೆಲ ಧಾರ್ಮಿಕ ಕಾರ್ಯ ನಡೆದ ನಂತರ ಮೊದಲ ದಿನದ ದರ್ಬಾರ್ ಉತ್ಸವ ಪೂರ್ಣಗೊಳ್ಳಲಿದೆ.
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಂದ ನಡೆದ ಧಾರ್ಮಿಕ ಕಾರ್ಯಕ್ರಮ (ETV Bharat)
ಅ.9ಕ್ಕೆ ಸರಸ್ವತಿ ಪೂಜೆ:ಅ.9 ರಂದು ಬೆಳಗ್ಗೆ 10:05 ರಿಂದ 10:35 ರವರೆಗೆ ಸರಸ್ವತಿ ಪೂಜೆ ನಡೆಯಲಿದೆ. ಈ ವೇಳೆ, ಅರಮನೆಯಲ್ಲಿರುವ ಸಂಗೀತ ಪರಿಕರಗಳು ಅಮೂಲ್ಯ ಕೃತಿ ಸೇರಿದಂತೆ ವಿವಿಧ ವಸ್ತುಗಳನ್ನು ಶಾಸ್ತ್ರೋಕ್ತವಾಗಿ ಪೂಜಿಸಲಾಗತ್ತದೆ.
ಅ.11ಕ್ಕೆ ಸಂಪ್ರದಾಯಕ ಆಯುಧ ಪೂಜೆ:ದುರ್ಗಷ್ಠಮಿ ಪೂಜಾ ಕೈಂಕರ್ಯದಲ್ಲಿ ರಾಜವಂಶಸ್ಥರು ಪಾಲ್ಗೋಳ್ಳಲಿದ್ದಾರೆ. ಅಂದು ಬೆಳಗ್ಗೆ 6 ಗಂಟೆಗೆ ಚಾಮುಂಡಿತೊಟ್ಟಿಯಲ್ಲಿ ಚಂಡಿಹೋಮ ಆರಂಭವಾಗಲಿದೆ. ಈ ವೇಳೆ, ಆನೆ ಬಾಗಿಲ ಬಳಿ ಪಟ್ಟದ ಹಸುವಿನ ಆಗಮನವಾಗಲಿದೆ. ಬೆಳಗ್ಗೆ 6:40ರಿಂದ 7:10 ರವರೆಗೆ ಕಲ್ಯಾಣ ಮಂಟಪದಿಂದ ಆನೆ ಬಾಗಿಲಿನ ಮೂಲಕ ಆಯುಧವನ್ನು ಕೋಡಿ ಸೋಮೇಶ್ವರ ದೇವಾಲಯದ ಬಳಿ ಕೊಂಡೊಯ್ಯಲಾಗುತ್ತದೆ.
ಸಿಂಹಾಸನದ ಮೇಲೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (ETV Bharat)
7:30 ರಿಂದ 8 ಗಂಟೆವರೆಗೆ ಅವುಗಳನ್ನು ಕಲ್ಯಾಣ ಮಂಟಪಕ್ಕೆ ಅದನ್ನು ವಾಪಸ್ ತರಲಾಗುತ್ತದೆ. ನಂತರ ಬೆಳಗ್ಗೆ 9:05ಕ್ಕೆ ಚಂಡಿಹೋಮದ ಪೂರ್ಣಾಹುತಿ ನಡೆಯಲಿದೆ. ಮಧ್ಯಾಹ್ನ 12.20ರಿಂದ 12:45 ರವರೆಗೆ ಕಲ್ಯಾಣ ಮಂಟಪದ ಬಳಿ ಆಯುಧ ಪೂಜೆ ನೆರವೇರಲಿದೆ. ಸಂಜೆ ಖಾಸಗಿ ದರ್ಬಾರ್ ಪೂರ್ಣಗೊಂಡ ಬಳಿಕ ಸಿಂಹದ ತಲೆ ವಿಸರ್ಜನೆ ಮಾಡಲಾಗುತ್ತದೆ. ಬಳಿಕ ದಫ್ತರ್ ಪೂಜೆಯನ್ನು ಅಂಬಾವಿಲಾಸ ಅರಮನೆಯಲ್ಲಿ ನಡೆಸಲಾಗುತ್ತದೆ. ಬಳಿಕ ದೇವರ ದರ್ಶನವನ್ನ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್ ಪಡೆಯಲಿದ್ದಾರೆ.
ಸಿಂಹಾಸನ (ETV Bharat)
ಅ.12ಕ್ಕೆ ವಿಜಯದಶಮಿ:ಅ.12 ರಂದು ಬೆಳಗ್ಗೆ 9:45 ಕ್ಕೆ ಪಟ್ಟದ ಆನೆ ಕುದುರೆ ಪಟ್ಟದ ಹಸುವಿನೊಂದಿಗೆ ದೇವರನ್ನು ತರುವ ಕಾರ್ಯ ನಡೆಯಲಿದೆ. 10:15ಕ್ಕೆ ಉತ್ತರ ಪೂಜೆ 11:20 ರಿಂದ 11:45 ರವರೆಗೆ ವಿಜಯಯಾತ್ರೆ ಶಮಿಪೂಜೆ ಹಾಗೂ ಇನ್ನಿತರ ಪೂಜಾ ಕಾರ್ಯಗಳು ಜರುಗಲಿದೆ. ಆ ಬಳಿಕ ನವರಾತ್ರಿ ಉತ್ಸವದಲ್ಲಿ ರಾಜವಂಶಾಸ್ಥರು ನಡೆಸುವ ಧಾರ್ಮಿಕ ಕಾರ್ಯ ಪೂರ್ಣಗೊಂಡಂತಾಗುತ್ತದೆ. ಬಳಿಕ ಸರ್ಕಾರದ ಜಂಬೂಸವಾರಿ ಮೆರವಣಿಗೆಗೆ ಚಾಲನೆ ದೊರೆಯಲ್ಲಿದೆ.