ಮಂಗಳೂರು(ದಕ್ಷಿಣ ಕನ್ನಡ): ಪುಣ್ಯಕ್ಷೇತ್ರಗಳ ಬೀಡು ದಕ್ಷಿಣ ಕನ್ನಡ ಜಿಲ್ಲೆಯ ಹಲವು ದೇವಿ ದೇವಸ್ಥಾನಗಳಲ್ಲಿ ನವರಾತ್ರಿ ಉತ್ಸವ ವಿಜೃಂಭಣೆಯಿಂದ ನಡೆಯುತ್ತದೆ. ಅದರಲ್ಲೂ ಮಂಗಳೂರು ನಗರದಲ್ಲಿರುವ ಮಂಗಳಾದೇವಿ ದೇವಸ್ಥಾನದಲ್ಲಿ ನವರಾತ್ರಿ ಸಂಭ್ರಮದಿಂದ ನಡೆಯುತ್ತಿದೆ.
ಮಂಗಳಾದೇವಿ ಮಂಗಳೂರಿನ ಅಧಿದೇವತೆ. ನಾಥ ಪಂಥದ ಮತ್ಸ್ಯೇಂದ್ರನಾಥರು ಸ್ಥಾಪಿಸಿದ್ದಾರೆ ಎಂದು ಹೇಳಲಾಗುವ ದೇವಸ್ಥಾನಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಪ್ರತಿದಿನ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಅಷ್ಟೇ ಅಲ್ಲದೇ, ನವರಾತ್ರಿಯ ಸಂದರ್ಭದಲ್ಲಿ ವಿವಿಧೆಡೆಗಳಿಂದ ಸಹಸ್ರಾರು ಭಕ್ತರು ಬಂದು ದೇವರ ದರ್ಶನ ಪಡೆಯುತ್ತಾರೆ.
ಮಂಗಳಾದೇವಿ ದೇವಾಲಯದ ಇತಿಹಾಸ: ಭಾರತದ ಪ್ರಮುಖ ಕರಾವಳಿ ನಗರಗಳಲ್ಲೊಂದಾಗಿರುವ ಮಂಗಳೂರು, ಇತಿಹಾಸದ ಆರಂಭಕಾಲದಿಂದ ಬ್ರಿಟಿಷರ ಕೈಸೇರುವವರೆಗೆ (ಕ್ರಿ.ಶ.1799) ಒಂದು ಮುಖ್ಯ ಬಂದರು ಪಟ್ಟಣವಾಗಿತ್ತು. ಇಲ್ಲಿನ ಮಂಗಳಾದೇವಿ ದೇವಾಲಯದ ನಿರ್ಮಾಣ ಯಾವಾಗ ಆಯಿತೆಂಬುದು ಸ್ಪಷ್ಟವಿಲ್ಲ. ಕ್ರಿ.ಶ ಸುಮಾರು 10ನೇಯ ಶತಮಾನದಲ್ಲಿ ಅತ್ತಾವರದ ಬಲ್ಲಾಳರು ಇಲ್ಲಿ ಶಕ್ತಿದೇವತೆಯ ಆಲಯವೊಂದನ್ನು ನಿರ್ಮಿಸಿದರೆಂದೂ, ಈ ದೇವಾಲಯದ ಉದ್ಘಾಟನೆಯು ಮತ್ಸ್ಯೇಂದ್ರನಾಥನ ಶಿಷ್ಯರಾದ ಗೋರಖನಾಥನಿಂದ ನೆರವೇರಿತೆಂದೂ ಹೇಳಲಾಗುತ್ತದೆ.
ಆಳುಪ ಅರಸ ಎರಡನೆಯ ಕುಂದವರ್ಮನು ಕ್ರಿ.ಶ 968ರಲ್ಲಿ ಈ ದೇವಾಲಯವನ್ನು ಮರು ನಿರ್ಮಿಸಿದನು. ಅಂತೆಯೇ ಹದಿನೇಳನೆಯ ಶತಮಾನದಲ್ಲಿ ಬಿದನೂರಿನ (ಇಕ್ಕೇರಿ) ನಾಯಕನೊಬ್ಬನಿಂದ ಈ ದೇವಾಲಯ ಮತ್ತೆ ಪುನರುದ್ಧಾರಗೊಂಡಿತು. ಹೀಗೆ ಹಲವು ಬಾರಿ ಮಾರ್ಪಾಡು-ವಿಸ್ತರಣೆಗೊಳಗಾಗಿರುವ ದೇವಾಲಯದಲ್ಲಿ ಸಾಂಧಾರ ಗರ್ಭಗೃಹ, ಅರ್ಧಮಂಡಪ, ಇದಕ್ಕೆ ಹೊಂದಿದಂತೆ ದಕ್ಷಿಣದಲ್ಲಿ ಸ್ತಂಭಸಹಿತವಾದ ಸಭಾಮಂಟಪವಿದೆ. ದೇವಾಲಯದ ಸುತ್ತ ಮಹಾದ್ವಾರಸಹಿತವಾದ ಪ್ರಾಕಾರವಿದೆ.
ಪ್ರಾಕಾರದ ಒಳಗೋಡೆಗೆ ಹೊಂದಿದಂತೆ ನಾಲ್ಕೂ ಬದಿಗಳಲ್ಲಿ ಕೈಸಾಲೆಯಿದ್ದು, ಈಗ ಅದನ್ನು ಹಲವು ಕೋಣೆ-ಪಡಸಾಲೆಗಳನ್ನಾಗಿ ಮಾರ್ಪಾಡುಗೊಳಿಸಲಾಗಿದೆ. ಪ್ರಾಕಾರದ ದಕ್ಷಿಣದಲ್ಲಿರುವ ಮಹಾದ್ವಾರದ ಅಕ್ಕಪಕ್ಕದಲ್ಲಿ ಮೊಗಸಾಲೆಗಳೂ ಒಳಗೋಡೆಗೆ ಸೇರಿದಂತೆ ಕೈಸಾಲೆಗಳೂ ಇವೆ. ಕೈಸಾಲೆಯು ದೇವಾಲಯದ ವಿಶಾಲ ಪ್ರಾಂಗಣವನ್ನು ಸುತ್ತುವರೆದಿದೆ. ಗರ್ಭಗೃಹವನ್ನು ಹೊರತುಪಡಿಸಿ ದೇವಾಲಯದ ಉಳಿದ ಭಾಗಗಳು ಏರುವಿನ್ಯಾಸದಲ್ಲಿ ಸರಳವಾಗಿವೆ. ಗರ್ಭಗೃಹದಲ್ಲಿ ಸರಳ ಅಧಿಷ್ಠಾನದ ಮೇಲೆ ಅತ್ತಿಯಿದೆ.