ಬೆಳಗಾವಿ:ಜಾಗತಿಕ ಲಿಂಗಾಯತ ಮಹಾಸಭೆ ವತಿಯಿಂದ ರಾಷ್ಟ್ರೀಯ ಲಿಂಗಾಯತ ಪ್ರಥಮ ಮಹಿಳಾ ಸಮಾವೇಶವನ್ನು ಇದೇ ಜನವರಿ 27, 28ರಂದು ಬೆಳಗಾವಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಹಾಸಭೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್ ಎಮ್ ಜಾಮದಾರ್ ತಿಳಿಸಿದರು.
ಇಂದು ಬೆಳಗಾವಿ ನಗರದಲ್ಲಿರುವ ಜಾಗತಿಕ ಲಿಂಗಾಯತ ಮಹಾಸಭೆ ಕೇಂದ್ರ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮದ ತತ್ವ ಸಿದ್ಧಾಂತ ಹಾಗೂ ಆಚರಣೆಗಳನ್ನು ಗಟ್ಟಿಯಾಗಿ ನೆಲೆಗೊಳಿಸುವುದು ಮತ್ತು ಲಿಂಗಾಯತ ಮಹಿಳೆಯರು ಹೆಚ್ಚೆಚ್ಚು ಸಾಮಾಜಿಕ, ಧಾರ್ಮಿಕ, ರಾಜಕೀಯ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ವಿಚಾರಗೋಷ್ಠಿಗಳನ್ನು ಹಮ್ಮಿಕೊಂಡಿದ್ದೇವೆ. ಕರ್ನಾಟಕ ಮತ್ತು ಮಹಾರಾಷ್ಟ್ರದ 5 ಸಾವಿರ ಮಹಾಸಭೆ ಪ್ರತಿನಿಧಿಗಳು, ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.
ತೋಂಟದ ಸಿದ್ಧರಾಮ ಸ್ವಾಮೀಜಿಯಿಂದ ಕಾರ್ಯಕ್ರಮ ಉದ್ಘಾಟನೆ: ಮಹಾಸಭೆ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ ಮಾತನಾಡಿ, ಸಮಾವೇಶದ ಸರ್ವಾಧ್ಯಕ್ಷರಾಗಿ ಕೂಡಲಸಂಗಮ ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಡಾ ಗಂಗಾ ಮಾತಾಜಿ ಅವರನ್ನು ಆಯ್ಕೆ ಮಾಡಲಾಗಿದೆ. 27ರಂದು ಬೆಳಿಗ್ಗೆ 11 ಗಂಟೆಗೆ ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಆರ್ಎನ್ ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನ ಆವರಣದಲ್ಲಿ ನಡೆಯುವ ಕಾರ್ಯಕ್ರಮವನ್ನು ಗದಗ-ಡಂಬಳ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.
ಅಥಣಿ ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ, ಬೀದರ ಲಿಂಗಾಯತ ಮಹಾಮಠದ ಡಾ. ಅಕ್ಕ ಅನ್ನಪೂರ್ಣ ತಾಯಿ ನೇತೃತ್ವ ವಹಿಸಲಿದ್ದಾರೆ. ಅತ್ತಿವೇರಿ ಬಸವಧಾಮದ ಬಸವೇಶ್ವರಿ ತಾಯಿ ಆಶಯ ನುಡಿಗಳನ್ನಾಡುವರು. ಇದಕ್ಕೂ ಮೊದಲು ಶ್ರೀನಗರ ಉದ್ಯಾನದಿಂದ ಸರ್ವಾಧ್ಯಕ್ಷರ ಮತ್ತು ವಚನದ ಕಟ್ಟುಗಳ ಮೆರವಣಿಗೆಯು ಆರಂಭವಾಗಿ ಶಿವಬಸವ ನಗರ ಲಿಂಗಾಯತ ಭವನ, ಕೆಇಬಿ ಮಾರ್ಗವಾಗಿ ಆರ್ಎನ್ ಶೆಟ್ಟಿ ಪಾಲಿಟೆಕ್ನಿಕ್ ಆವರಣದಲ್ಲಿರುವ ಶರಣೆ ನೀಲಾಂಬಿಕಾ ಮಹಾದ್ವಾರದ ಮೂಲಕ ಸಭಾಭವನ ತಲುಪಲಿದೆ ಎಂದು ಮಾಹಿತಿ ನೀಡಿದರು.