ಈರುಳ್ಳಿ ದಲ್ಲಾಳಿಗಳ ಸಂಘದ ಅಧ್ಯಕ್ಷ ಬಸವಲಿಂಗಪ್ಪ (ETV Bharat) ದಾವಣಗೆರೆ : ಈ ಬಾರಿ ರೈತರಿಗೆ ಮಳೆರಾಯ ಕೈಕೊಟ್ಟಿದ್ದಾನೆ. ಈರುಳ್ಳಿ ಬೆಳೆದ ರೈತನಿಗೆ ಫಸಲು ಮಾತ್ರ ಕೈ ಸೇರಿಲ್ಲ. ಅದರಲ್ಲೂ ದಾವಣಗೆರೆಯ ಈರುಳ್ಳಿ ಮಾರುಕಟ್ಟೆಗೆ ಪ್ರತಿಬಾರಿ ಲೋಡ್ಗಟ್ಟಲೆ ಈರುಳ್ಳಿ ಬರುತ್ತಿತ್ತು. ಮಾರ್ಕೆಟ್ನಲ್ಲಿ ಲೋಕಲ್ ಈರುಳ್ಳಿ ಮುಂದೆ ನಾಸಿಕ್ ಈರುಳ್ಳಿ ಮಂಕಾಗಿರುತಿತ್ತು. ದುರಂತ ಎಂದರೆ ಈ ಬಾರಿ ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ಈರುಳ್ಳಿ ಮಾರುಕಟ್ಟೆಗೆ ಬಾರದ ಹಿನ್ನೆಲೆ ಮಹಾರಾಷ್ಟ್ರದ ನಾಸಿಕ್, ರಾಜ್ಯದ ವಿಜಯಪುರದ ಭಾಗದ ಈರುಳ್ಳಿ ಮಾರುಕಟ್ಟೆಯಲ್ಲಿ ದರ್ಬಾರ್ ಮುಂದುವರೆದಿದೆ.
''ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಭೀಕರ ಬರಗಾಲಕ್ಕೆ ಈರುಳ್ಳಿ ಬೆಳೆಗಾರರು ನಲುಗಿ ಹೋಗಿದ್ದಾರೆ. ಮಳೆ ಅಭಾವದಿಂದಾಗಿ ಈರುಳ್ಳಿ ಬೆಳೆ ಕುಂಠಿತವಾಗಿದೆ. ದಾವಣಗೆರೆ ಈರುಳ್ಳಿ ಮಾರುಕಟ್ಟೆಯಲ್ಲಿ ಸ್ಥಳೀಯ ಈರುಳ್ಳಿಗೆ ಬೇಡಿಕೆ ಇತ್ತು. ಆದರೆ, ಈ ಬಾರಿ ಬರಗಾಲ ಹಿನ್ನೆಲೆಯಲ್ಲಿ ರೈತರು ಈರುಳ್ಳಿ ಬೆಳೆಯಲು ಹಿಂದೇಟು ಹಾಕಿದ್ದಾರೆ. ಅಲ್ಲದೇ ಮಳೆ ಇಲ್ಲದ ಕಾರಣ ಈರುಳ್ಳಿ ಬೆಳೆಯಲ್ಲಿ ಕುಂಠಿತವಾಗಿತ್ತು. ಇದರ ಪರಿಣಾಮ ಈರುಳ್ಳಿ ಮಾರುಕಟ್ಟೆ ಮೇಲೆ ಬೀರಿದೆ.
ಒಂದು ಕಾಲದಲ್ಲಿ ಲೋಕಲ್ ಈರುಳ್ಳಿಗೆ ದಾವಣಗೆರೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇತ್ತು. ರೈತರಿಗೆ ಬರಗಾಲ ಎದುರಾಗಿದ್ದರಿಂದ ಬೆಳೆ ಬೆಳೆಯಲು ಮುಂದಾಗಿಲ್ಲ. ಹೀಗಾಗಿ ಫಸಲು ಮಾರುಕಟ್ಟೆಗೆ ತಲುಪಿಲ್ಲ. ಇದರಿಂದ ಲೋಕಲ್ ಈರುಳ್ಳಿ ಮಾರುಕಟ್ಟೆಯಲ್ಲಿ ಕಾಣಸಿಗದಂತಾಗಿದೆ. ಲೋಕಲ್ ಈರುಳ್ಳಿ ಸ್ಥಾನವನ್ನು ನಾಸಿಕ್ ಹಾಗೂ ವಿಜಯಪುರ ಜಿಲ್ಲೆಯ ಈರುಳ್ಳಿ ದಕ್ಕಿಸಿಕೊಂಡಿದೆ. ಈ ಬೆಳೆಗೆ ಭಾರಿ ಬೇಡಿಕೆ ಇದೆ'' ಎಂದು ಈರುಳ್ಳಿ ದಲ್ಲಾಳಿಗಳ ಸಂಘದ ಅಧ್ಯಕ್ಷ ಬಸವಲಿಂಗಪ್ಪ ಮಾಹಿತಿ ನೀಡಿದರು.
ದಾವಣಗೆರೆ, ಶಿವನಿ, ಚಿತ್ರದುರ್ಗ, ಅಜ್ಜಂಪುರ, ನಾಯಕನಹಟ್ಟಿ, ಚಳ್ಳಕೆರೆ, ಹರಪನಹಳ್ಳಿ ಕಡೆಯಿಂದ ಬರಬೇಕಿದ್ದ ಈರುಳ್ಳಿ ಮಾರುಕಟ್ಟೆಗೆ ಬಂದಿಲ್ಲವಂತೆ. ಇದೀಗ ಮಳೆ ಆಗಿದ್ದರಿಂದ ಇವಾಗ ಬಿತ್ತನೆ ಆರಂಭ ಮಾಡಿ ರೈತ ಫಸಲು ತೆಗೆದಾದ ಬಳಿಕ ಲೋಕಲ್ ಈರುಳ್ಳಿ ಮಾರುಕಟ್ಟೆಗೆ ಬರಲಿದೆ ಎಂದು ತಿಳಿಸಿದರು.
ಮಳೆ ಕೈಕೊಟ್ಟರೆ ಲೋಕಲ್ ಈರುಳ್ಳಿ ಮರೆತು ಕೊಳ್ಳಬೇಕಾಗಿದೆ :ದಾವಣಗೆರೆ ಮಾರುಕಟ್ಟೆಗೆ ಲೋಕಲ್ ಈರುಳ್ಳಿ ಜನವರಿ, ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಬರುತಿತ್ತು. ದಿನಕ್ಕೆ 25-30 ಲೋಡ್ಗಟ್ಟಲೇ ಈರುಳ್ಳಿಯನ್ನು ರೈತರು ತರುತ್ತಿದ್ದರು. ಬರಗಾಲ ಬಂದಿರುವ ಹಿನ್ನೆಲೆ ಲೋಕಲ್ ಈರುಳ್ಳಿ ಮಾರುಕಟ್ಟೆಗೆ ಬರುವುದು ಮುಗಿದಿದೆ. ಇದೀಗ ಮಳೆ ಬಿದ್ದಿದ್ದರಿಂದ ರೈತರು ಬಿತ್ತನೆ ಮಾಡಲಿದ್ದು, ಫಸಲು ದಸರಾ, ಗಣೇಶ ಹಬ್ಬಕ್ಕೆ ಬರಲಿದೆ. ಮಳೆ ಕೈಕೊಟ್ಟರೆ ಲೋಕಲ್ ಈರುಳ್ಳಿ ಮರೆತುಕೊಳ್ಳಬೇಕಾಗಿದೆ. ಮಳೆ ಇಲ್ಲದ ಕಾರಣ ರೈತರು ಈರುಳ್ಳಿ ಹಾಕಿಲ್ಲ. ನಾಸಿಕ್ ಹಾಗೂ ವಿಜಯಪುರ ಈರುಳ್ಳಿ ಮಾರುಕಟ್ಟೆಗೆ ಬರುತ್ತಿದೆ ಎಂದರು.
ನಾಸಿಕ್ ಈರುಳ್ಳಿಯ ಕೆಜಿ ದರ 22-23 ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಈರುಳ್ಳಿ ಬೆಲೆ ರೂ. 30 ಮಾಡಬಹುದು. ಚುನಾವಣೆ ಹಾಗೂ ಮತ ಎಣಿಕೆ ಕಾರ್ಯ ಮುಗಿದಾದ ಬಳಿಕ ವಿದೇಶಕ್ಕೆ ಈರುಳ್ಳಿ ರಫ್ತಿಗೆ ಹಸಿರು ನಿಶಾನೆ ತೋರಿದರೆ ಬೆಲೆ ಏರಿಕೆ ಆಗಬಹುದು. ಒಂದು ತಿಂಗಳಿಂದ ಲೋಕಲ್ ಈರುಳ್ಳಿ ಮಾರುಕಟ್ಟೆಯಲ್ಲಿಲ್ಲ. ಲೋಕಲ್ ಬದಲಿಗೆ ನಾಸೀಕ್ ಈರುಳ್ಳಿ ದರ್ಬಾರ್ ಇದೆ. ನಾಸಿಕ್ ಒಂದು ಕ್ವಿಂಟಾಲ್ಗೆ 2000- 2500 ಇದೆ. ವಿಜಯಪುರ ಈರುಳ್ಳಿಗೆ ಕೆಜಿಗೆ 18-20 ರೂಪಾಯಿ ದರ ಇದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ :ರೋಗಬಾಧೆಯಿಂದ ಕುಮಟಾದ ಸಿಹಿ ಈರುಳ್ಳಿ ಇಳುವರಿ ಕುಸಿತ; ಗಗನಕ್ಕೇರಿದ ಬೆಲೆ - Kumta Sweet Onion