ಬೆಳಗಾವಿ: ವಿಧಾನಸಭೆಯಲ್ಲಿ ಮೈಸೂರು ಅಭಿವೃದ್ಧಿ ಪ್ರಾಧಿಕಾರ ಮಸೂದೆಯನ್ನು ಮಂಡನೆ ಮಾಡಲಾಯಿತು. ಇದರ ಜೊತೆಗೆ ಕರ್ನಾಟಕ ಭೂ ಕಂದಾಯ (ಮೂರನೇ ತಿದ್ದುಪಡಿ) ಮಸೂದೆ, ಕರ್ನಾಟಕ ಕಾರ್ಮಿಕರ ಕಲ್ಯಾಣ ನಿಧಿ ಮಸೂದೆ, ಕರ್ನಾಟಕ (ಖನಿಜ ಹಕ್ಕುಗಳು ಮತ್ತು ಖನಿಜ ಹೊಂದಿರುವ ಭೂಮಿ) ತೆರಿಗೆ ವಿಧೇಯಕ ಅಂಗೀಕಾರವಾಯಿತು.
ಮೈಸೂರು ಅಭಿವೃದ್ಧಿ ಪ್ರಾಧಿಕಾರ ಮಸೂದೆ ಮಂಡನೆ:ಮುಡಾ ಬದಲು ಮೈಸೂರು ಅಭಿವೃದ್ಧಿ ಪ್ರಾಧಿಕಾರ ರಚಿಸುವ ಮೈಸೂರು ಅಭಿವೃದ್ಧಿ ಪ್ರಾಧಿಕಾರ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡನೆ ಮಾಡಲಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ವನ್ನು ಬಿಡಿಎ ಮಾದರಿಯಲ್ಲಿ ರಚಿಸಲು ತೀರ್ಮಾನಿಸಿದೆ.
ಆ ಮೂಲಕ ಪ್ರಸಕ್ತ ಇರುವ ಮುಡಾ ರದ್ದಾಗಲಿದೆ. ಮುಡಾದ ಎಲ್ಲಾ ಅಧಿಕಾರ, ಬಾಧ್ಯತೆ, ಹೊಣೆಗಾರಿಕೆ, ಆಸ್ತಿಗಳು ಮೈಸೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ವರ್ಗಾವಣೆಯಾಗಲಿದೆ. ಮುಡಾ ಇಷ್ಟು ದಿನ ನಗರಾಭಿವೃದ್ಧಿ ಇಲಾಖೆಯ ಸುಪರ್ದಿಯಲ್ಲಿತ್ತು. ಆದರೆ ಇನ್ನು ಮುಂದೆ ನಗರಾಭಿವೃದ್ಧಿ ಇಲಾಖೆಯಡಿ ಬಂದರೂ, ಬಿಡಿಎಯಂತೆ ಮೈಸೂರು ಅಭಿವೃದ್ಧಿ ಪ್ರಾಧಿಕಾರ ರಚಿಸಿ ಸ್ವತಂತ್ರ ತೀರ್ಮಾನ ಕೈಗೊಳ್ಳಲು ಅವಕಾಶ ನೀಡಲಾಗುವುದು. ಬಿಡಿಎಯಂತೆ ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಕಾರ್ಯವ್ಯಾಪ್ತಿ ವಿಸ್ತರಿಸಿ ಕೆಲ ಹೆಚ್ಚುವರಿ ಅಧಿಕಾರವನ್ನು ನೀಡಲಾಗಿದೆ. ಇಬ್ಬರು ಶಾಸಕರು ಪ್ರಾಧಿಕಾರದ ಸದಸ್ಯರಾಗಿರಲಿದ್ದಾರೆ.
ಕರ್ನಾಟಕ ಭೂ ಕಂದಾಯ (ಮೂರನೇ ತಿದ್ದುಪಡಿ) ಮಸೂದೆ ಅಂಗೀಕಾರ:ಕರ್ನಾಟಕ ಭೂ ಕಂದಾಯ (ಮೂರನೇ ತಿದ್ದುಪಡಿ) ಮಸೂದೆ 2024 ವಿಧಾನಸಭೆಯಲ್ಲಿ ಅಂಗೀಕಾರವಾಗಿದೆ. ಈ ಮಸೂದೆಯಲ್ಲಿ ಎಸಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಡಿಸಿಗೆ ಇರುವ ಭೂಕಂದಾಯ ಅಧಿಕಾರಗಳಲ್ಲಿ ಸಹಾಯಕ ಆಯುಕ್ತರಿಗೆ ಕೆಲ ಅಧಿಕಾರಗಳ ವರ್ಗಾವಣೆಗೆ ಅವಕಾಶ ನೀಡಲಾಗಿದೆ. ಕೈಗಾರಿಕೆಗಳಿಗೆ ಸ್ಥಾಪಿಸಲು 2 ಎಕರೆವರೆಗಿನ ಕೃಷಿ ಜಮೀನುಗಳಿಗೆ ಭೂಪರಿವರ್ತನೆಯಿಂದ ವಿನಾಯಿತಿಗೆ ಅವಕಾಶ ಕೊಡಲಾಗಿದೆ. ಭೂವ್ಯಾಜ್ಯ ಪ್ರಕರಣಗಳ ಆದೇಶಗಳಲ್ಲಿ ಅಪೀಲು ಹೋಗಲು ಕರ್ನಾಟಕ ಭೂಕಂದಾಯ ಅಪೀಲು ನ್ಯಾಯಾಧೀಕರಣ ರಚನೆಗೆ ಉದ್ದೇಶಿಸಲಾಗಿದೆ.
ಕರ್ನಾಟಕ ಕಾರ್ಮಿಕರ ಕಲ್ಯಾಣ ನಿಧಿ ಮಸೂದೆ ಅಂಗೀಕಾರ:ಕರ್ನಾಟಕ ಕಾರ್ಮಿಕರ ಕಲ್ಯಾಣ ನಿಧಿ (ತಿದ್ದುಪಡಿ) ವಿಧೇಯಕ 2024 ವಿಧಾನಸಭೆಯಲ್ಲಿ ಅಂಗೀಕೃತವಾಗಿದೆ. ಕಲ್ಯಾಣ ನಿಧಿಗೆ ವಂತಿಕೆ ರೂಪದಲ್ಲಿ ಪ್ರಸ್ತುತ ಕಾರ್ಮಿಕರ, ಮಾಲೀಕರ, ಸರ್ಕಾರದಿಂದ ಕ್ರಮ ಪ್ರಕಾರ 20:40:20 ಅನುಪಾತ ಇತ್ತು. ಅದನ್ನು ಬದಲಾಯಿಸಿ ಕಾರ್ಮಿಕ, ಮಾಲೀಕ ಹಾಗೂ ಸರ್ಕಾರದ ವಂತಿಕೆ ಪಾಲನ್ನು 50:100:50ಗೆ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಪ್ರಸಕ್ತ 42 ಕೊಟಿ ರೂ. ವಂತಿಕೆ ಸಂಗ್ರಹವಾಗುತ್ತಿದೆ. ಈ ಏರಿಕೆಯಿಂದ ವಾರ್ಷಿಕ 100 ಕೋಟಿ ರೂ. ಗೂ ಹೆಚ್ಚು ವಂತಿಕೆ ಸಂಗ್ರಹವಾಗುವ ಸಾಧ್ಯತೆ ಇದೆ. ಪ್ರತಿ ವರ್ಷ ಈ ವಂತಿಕೆ ಸಂಗ್ರಹ ಮಾಡಲಾಗುತ್ತದೆ.
ಕರ್ನಾಟಕ (ಖನಿಜ ಹಕ್ಕುಗಳು ಮತ್ತು ಖನಿಜ ಹೊಂದಿರುವ ಭೂಮಿ) ತೆರಿಗೆ ವಿಧೇಯಕ ಅಂಗೀಕಾರ:ಕರ್ನಾಟಕ (ಖನಿಜ ಹಕ್ಕುಗಳು ಮತ್ತು ಖನಿಜ ಹೊಂದಿರುವ ಭೂಮಿ) ತೆರಿಗೆ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರವಾಯಿತು. ಈ ವಿಧೇಯಕದಲ್ಲಿ ಗಣಿಗಾರಿಕೆ ಗುತ್ತಿಗೆ ಹೊಂದಿರುವವರು ಭೂಮಿಯಿಂದ ತೆಗೆಯುವ ಖನಿಜದ ಪ್ರಮಾಣವನ್ನು ಆಧರಿಸಿ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಪ್ರತಿ ಟನ್‌ಗೆ 20 ರೂಪಾಯಿಗಳಿಂದ (ಸುಣ್ಣಕ್ಕೆ) ಕಬ್ಬಿಣದ ಅದಿರಿಗೆ 100 ರೂಪಾಯಿವರೆಗೆ ತೆರಿಗೆ ಇರಲಿದೆ. ಇದರಲ್ಲಿ ಮಾಪನಾಂಕ ನಿರ್ಣಯಿಸಿದ ಉಂಡೆ ಅದಿರು (CLO), ಉಂಡೆ ಅದಿರು ಮತ್ತು ಎಲ್ಲಾ ದರ್ಜೆಗಳ ಖನಿಜಗಳು ಸೇರಿವೆ. ವಾರ್ಷಿಕವಾಗಿ ಇದರಿಂದ 4,700 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ಬರುವ ನಿರೀಕ್ಷೆ ಇದೆ.
ಇದನ್ನೂ ಓದಿ:ಹೆಚ್ಚುವರಿ ತೆರಿಗೆ ವಿಧಿಸುವ 'ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ತಿದ್ದುಪಡಿ' ವಿಧೇಯಕ ಅಂಗೀಕಾರ