ಮೈಸೂರು:ನಾಡಹಬ್ಬ ದಸರಾ ಮಹೋತ್ಸವದ ಜಂಬೂ ಸವಾರಿಯ ದಿನ ಅಂಬಾರಿಗೆ ಪುಷ್ಪಾರ್ಚನೆ ಸಲ್ಲಿಸಿ, ರಾಷ್ಟ್ರಗೀತೆ ಮೊಳಗುವಾಗ ಹಾರಿಸುವ 21 ಕುಶಾಲ ತೋಪುಗಳ ತಾಲೀಮಿಗೆ ಬಳಸುವ ಫಿರಂಗಿಗಳ ಡ್ರೈ ರನ್ ಆರಂಭಗೊಂಡಿದೆ. ಅರಮನೆ ಆವರಣದ ಆನೆ ಬಾಗಿಲಿನಲ್ಲಿ ಒಂದು ತಿಂಗಳ ಕಾಲ ಈ ತಾಲೀಮು ನಡೆಯಲಿದೆ.
ಫಿರಂಗಿಗಳ ಡ್ರೈ ರನ್ (ETV Bharat) ದಸರಾ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಯಂದು ಗಣ್ಯರು ಅಂಬಾರಿಗೆ ಪುಷ್ಪಾರ್ಚನೆ ಮಾಡುವಾಗ ರಾಷ್ಟ್ರಗೀತೆ ಹಾಡಲಾಗುತ್ತದೆ. ಈ ಸಂದರ್ಭದಲ್ಲಿ ಅರಮನೆಯ ಪಕ್ಕದ ಮಾರಮ್ಮ ದೇವಾಲಯದ ಪಾರ್ಕಿಂಗ್ ಪ್ರದೇಶದಲ್ಲಿ ರಾಜಪರಂಪರೆಯಂತೆ ಸಾಂಪ್ರದಾಯಿಕ 21 ಸುತ್ತು ಕುಶಾಲತೋಪು ಹಾರಿಸಲಾಗುತ್ತದೆ. ಇದಕ್ಕಾಗಿ ಪ್ರತಿದಿನ ನುರಿತ ಸಿಬ್ಬಂದಿ ತಾಲೀಮು ನಡೆಸುತ್ತಾರೆ.
ಸಿಎಆರ್ ಪೊಲೀಸ್ ತಂಡದ ಎಸಿಪಿ ನೇತೃತ್ವದಲ್ಲಿ, ಪ್ರತಿದಿನ ಎಎಸ್ಐ ಸಿದ್ದರಾಜು ಮುಂದಾಳತ್ವದಲ್ಲಿ ಅರಮನೆ ಆನೆ ಬಾಗಿಲಿನಲ್ಲಿರುವ 7 ಫಿರಂಗಿಗಳ ಮೂಲಕ ಕುಶಾಲತೋಪು ಸಿಡಿಸುವ ತಾಲೀಮು ನಡೆಯಲಿದೆ. ಮೂರು ಬಾರಿ ಸಿಡಿಮದ್ದು ಸಿಡಿಸುವ ತಾಲೀಮು ಇದಾಗಿದೆ. ಒಂದೊಂದು ಫಿರಂಗಿಗೂ ಐವರು ಸಿಎಆರ್ ಪೊಲೀಸರು ಕಾರ್ಯ ನಿರ್ವಹಿಸಲಿದ್ದಾರೆ.
ಮೂರು ಬಾರಿ ಸಿಡಿಮದ್ದು ಸಿಡಿಸಿ ತಾಲೀಮು:ಸೆ.25ರ ಬಳಿಕ ಮೂರು ಬಾರಿ ಗಜಪಡೆ, ಅಶ್ವಪಡೆ ಮುಂದೆ ಸಿಡಿಮದ್ದು ಸಿಡಿಸಿ ತಾಲೀಮು ನಡೆಸಲು ನಿರ್ಧರಿಸಲಾಗಿದೆ. ಮೊದಲ ತಾಲೀಮಿನಲ್ಲಿ ಒಂದು ಸುತ್ತಿನ ಸಿಡಿಮದ್ದು ಸಿಡಿತದ ಬಳಿಕ ಕೆಲ ನಿಮಿಷ ವಿಶ್ರಾಂತಿ ನೀಡಿ, ಎರಡನೇ ಸುತ್ತಿನ ಸಿಡಿಮದ್ದು ತಾಲೀಮು ನಡೆಸಲಾಗುತ್ತದೆ. ಆನೆ, ಕುದುರೆಗಳ ವರ್ತನೆಯನ್ನು ಪರಿಶೀಲಿಸಿ ಮೂರನೇ ಸುತ್ತಿನ ತಾಲೀಮು ನಡೆಯಲಿದೆ. ಎರಡನೇ ತಾಲೀಮಿನಲ್ಲಿ ಪ್ರತಿ ಸುತ್ತು ಕುಶಾಲತೋಪು ಸಿಡಿಸುವ ಸಮಯಾವಕಾಶದಲ್ಲಿ ಕಡಿತ ಮಾಡಲಾಗುತ್ತದೆ. ಮೂರನೇ ತಾಲೀಮಿನಲ್ಲಿ ಒಂದೇ ನಿಮಿಷದೊಳಗೆ ಮೂರು ಸುತ್ತಿನ ಸಿಡಿಮದ್ದು ಸಿಡಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫಿರಂಗಿಗಳ ಡ್ರೈ ರನ್ (ETV Bharat) ಸಿಡಿಮದ್ದು ತಯಾರಿ ಹೇಗೆ?:ಕುಶಾಲತೋಪು ಸಿಡಿಸಲು ಬಳಸುವ ಸಿಡಿಮದ್ದು ತಯಾರಿಕೆ ಪ್ರಕ್ರಿಯೆಗೂ ಚಾಲನೆ ದೊರೆತಿದೆ. ಯಾವ ಗನ್ ಪೌಡರ್ನಲ್ಲಿ ಸಿಡಿಮದ್ದು ತಯಾರಿಸಬೇಕು ಎಂದು ಪರಿಶೀಲಿಸಲಾಗುತ್ತಿದೆ. 2-3 ಬಗೆಯ ಗನ್ ಪೌಡರ್ ತಂದು ಪರಿಶೀಲಿಸಿ, ಯಾವುದನ್ನು ಬಳಸಿದರೆ ಉತ್ತಮ ಶಬ್ದ ಹೊರಬರುತ್ತದೆ ಎಂದು ಪರಿಶೀಲಿಸಿ, ಆಯ್ಕೆ ಮಾಡಲಾಗುತ್ತದೆ. 1.75 ಕೆ.ಜಿಯಿಂದ 2.50 ಕೆ.ಜಿವರೆಗೂ ಗನ್ ಪೌಡರ್ ಬಳಸಿ ಸಿಡಿಮದ್ದು ತಯಾರಿಸಲಾಗುತ್ತದೆ. ಜಂಬೂ ಸವಾರಿ ದಿನ ಗನ್ ಪೌಡರ್ ಸಾಮರ್ಥ್ಯ ಹೆಚ್ಚಳ ಮಾಡಲಾಗುತ್ತದೆ.
ಮೈಸೂರು ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಕಳೆದ ಗುರುವಾರ ಫಿರಂಗಿಗೆ ಪೂಜೆ ಸಲ್ಲಿಸಿ ಸಿಡಿಮದ್ದು ಸಿಡಿಸುವ ತಾಲೀಮಿಗೆ ಚಾಲನೆ ನೀಡಿದ್ದರು. ''ಪ್ರತಿನಿತ್ಯ ಸಿಎಆರ್ ಸಿಬ್ಬಂದಿ ಈ ತಾಲೀಮಿನಲ್ಲಿ ಭಾಗವಹಿಸಲಿದ್ದಾರೆ. ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು, ಗಜಪಡೆಗೆ ಸಿಡಿಮದ್ದು ತಾಲೀಮು ಹಾಗೂ ಜಂಬೂ ಸವಾರಿ ದಿನ ಕುಶಾಲತೋಪು ಸಿಡಿಸುವ ತಾಲೀಮು ನಡೆಸಲಾಗುವುದು'' ಎಂದು 'ಈಟಿವಿ ಭಾರತ'ಕ್ಕೆ ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಮಾಹಿತಿ ನೀಡಿದರು.
ಇದನ್ನೂ ಓದಿ:ಉಡುಪಿ: ಶ್ರೀ ವಿದ್ಯೇಶತೀರ್ಥರಿಗೆ ಸಪ್ತತಿ ಅಭಿನಂದನೋತ್ಸವ, ಭಾಗವತ ಭಾಸ್ಕರ ಪ್ರಶಸ್ತಿ ಪ್ರದಾನ - CHATURMASYA VRATA