ಮೈಸೂರು:''ವೇದ ಕಾಲದಿಂದ ಇಂದಿನವರೆಗೂ ಭಾರತೀಯರು ಎಲ್ಲಾ ಕ್ಷೇತ್ರಗಳಲ್ಲೂ ಅನುಪಮವಾದ ಜ್ಞಾನ ಗಳಿಸಿದ್ದಾರೆ. ಖಗೋಳ ವಿಜ್ಞಾನದಿಂದ ಭೂವಿಜ್ಞಾನ, ಗಣಿತ, ವೈದ್ಯಕೀಯ ಸೇರಿದಂತೆ ಇತರ ಹಲವು ಕ್ಷೇತ್ರಗಳಲ್ಲಿ ಭಾರತೀಯರ ಕೊಡುಗೆ ಇಡೀ ಜಗತ್ತಿಗೆ ತುಂಬಾ ಮಹತ್ವದ್ದಾಗಿದೆ'' ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ಇಂದು ಮೈಸೂರು ವಿಶ್ವವಿದ್ಯಾಲಯದ 104ನೇ ಘಟಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ''ನಮ್ಮ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಪ್ರದಾಯ ಬಹಳ ಪುರಾತನವಾಗಿದೆ. ಪ್ರಾಚೀನ ಕಾಲದಿಂದಲೂ ವಸುಧೈವ ಕುಟುಂಬಕಂ ತತ್ವಶಾಸ್ತ್ರ ಮತ್ತು ಧ್ಯಾನದ ಮೇಲೆ ಕೇಂದ್ರೀಕೃತವಾಗಿದೆ'' ಎಂದರು.
''ಘಟಿಕೋತ್ಸವದಲ್ಲಿ ಮಾಜಿ ಸಿಎಂ ಎಸ್.ಎಂ.ಕೃಷ್ಣ, ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್, ಪ್ರಾಧ್ಯಾಪಕ ಡಾ.ಭಾಷ್ಯಂ ಸ್ವಾಮೀಜಿ ಮತ್ತು ಎಂ.ಆರ್.ಸೀತಾರಾಮ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿಯಿತು. ಈ ಸಾಧಕರ ಸಾಧನೆ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಲಿ'' ಎಂದು ಆಶಯ ವ್ಯಕ್ತಪಡಿಸಿದರು.
''ನಮ್ಮ ಸಂಸ್ಕೃತಿ ಯಾವಾಗಲೂ ವಿಶ್ವ ಭ್ರಾತೃತ್ವ, ವಿಶ್ವ ಶಾಂತಿ, ಸಮಾನತೆ ಮತ್ತು ಸಾಮರಸ್ಯವನ್ನು ಪ್ರೇರೇಪಿಸುತ್ತದೆ. ಆಧುನಿಕ ಜ್ಞಾನವನ್ನು ಮೌಲ್ಯಗಳೊಂದಿಗೆ ಸಂಯೋಜಿಸುವಂತಹ ಶಿಕ್ಷಣ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಅವಶ್ಯಕತೆಯಿದೆ. ವೇದ- ವೇದಾಂಗದ ಹೊರತಾಗಿ, ತಕ್ಷಶಿಲಾ ಮತ್ತು ನಳಂದ ವಿಶ್ವವಿದ್ಯಾಲಯಗಳು ವಿಜ್ಞಾನ, ತಂತ್ರಜ್ಞಾನ, ಗಣಿತ, ಖಗೋಳಶಾಸ್ತ್ರ, ರಾಜ್ಯಶಾಸ್ತ್ರ, ನೀತಿಶಾಸ್ತ್ರ, ಅರ್ಥಶಾಸ್ತ್ರ, ವ್ಯಾಕರಣ ಇತ್ಯಾದಿ ಅನೇಕ ವಿಷಯಗಳಿಗೆ ಪ್ರಸಿದ್ಧವಾಗಿತ್ತು. ಈ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಲು ಪ್ರಪಂಚದಾದ್ಯಂತ ವಿದ್ಯಾರ್ಥಿಗಳು ಬರುತ್ತಿದ್ದರು. ಈ ವಿಶ್ವವಿದ್ಯಾಲಯದಲ್ಲಿ ಪ್ರಸಿದ್ದ ಭಾರತೀಯ ವಿದ್ವಾಂಸರಾದ ಚರಕ್, ಸುಶ್ರುತ, ಆರ್ಯಭಟ ಸೇರಿದಂತೆ ಮುಂತಾದವರು ಜ್ಞಾನವನ್ನು ಪಡೆದಿದ್ದಾರೆ. ಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ಅವರ ಮಹತ್ವದ ಕೊಡುಗೆಯಿಂದಾಗಿ ಅವರನ್ನು ವಿಶ್ವಗುರು ಎಂದು ಪರಿಗಣಿಸಲ್ಪಟ್ಟಿದ್ದಾರೆ'' ಎಂದು ಹೇಳಿದರು.