ಮೈಸೂರು:ಹೈದರಾಬಾದ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ಇತ್ತೀಚೆಗೆ ನಡೆದ 42ನೇ ಅಖಿಲ ಭಾರತ ಪೊಲೀಸ್ ಈಕ್ವೆಸ್ಟ್ರಿಯನ್ ಚಾಂಪಿಯನ್‌ಶಿಪ್ ಮತ್ತು ಮೌಂಟೆಡ್ ಪೊಲೀಸ್ ಡ್ಯೂಟಿ ಮೀಟ್ನಲ್ಲಿ ಮೈಸೂರು ಕಮಾಂಡೆಂಟ್ಗೆ ಪ್ರಶಸ್ತಿ ಒಲಿದು ಬಂದಿದೆ. ಕರ್ನಾಟಕ ಪೊಲೀಸ್ ತಂಡ ಪ್ರತಿನಿಧಿಸಿದ್ದ ಮೈಸೂರಿನ ಕರ್ನಾಟಕ ಸಶಸ್ತ್ರ ಮೀಸಲು ಪಡೆಯ (ಕೆಎಆರ್ಪಿ) ಮೌಂಟೆಡ್ ಪೊಲೀಸ್ ಕಮಾಂಡೆಂಟ್ ಶೈಲೇಂದ್ರ ವಿ ಅವರು ವೈಯಕ್ತಿಕವಾಗಿ ಕಿಂಗ್ಸ್ ಪವರ್ ಕುದುರೆಯ ಹ್ಯಾಕ್ಸ್ ವಿಭಾಗದಲ್ಲಿ ಚಿನ್ನದ ಪದಕ ಪಡೆದು ಸಾಧನೆ ಮಾಡಿದ್ದಾರೆ.
ದೇಶದ ವಿವಿಧ ಕೇಂದ್ರ ಪೊಲೀಸ್ ಸಂಸ್ಥೆಗಳು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಮತ್ತು ರಾಜ್ಯ ಪೊಲೀಸ್ ಪಡೆಗಳ 22 ತಂಡಗಳು ಈ ಮೀಟ್ನಲ್ಲಿ ಭಾಗವಹಿಸಿದ್ದವು. ಈ ಕ್ರೀಡಾಕೂಟದಲ್ಲಿ 605 ಪುರುಷ ಹಾಗೂ 14 ಮಹಿಳಾ ಪೊಲೀಸ್ ರೈಡರ್ಗಳು ಡ್ರೆಸ್ಸೇಜ್, ಟೆಂಟ್ ಪೆಗ್ಗಿಂಗ್, ಶೋ ಜಂಪಿಂಗ್, ಮೆಡ್ಲೆ ರಿಲೇ, ಹ್ಯಾಕ್ಸ್, ಮೆಂಟಲ್ ಹಜಾರ್ಡ್ ಟೆಸ್ಟ್ ಇತ್ಯಾದಿ ವಿಭಾಗಗಳಲ್ಲಿ 311 ಕುದುರೆಗಳೊಂದಿಗೆ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಿದರು. ಈಕ್ವೆಸ್ಟ್ರಿಯನ್ ಚಾಂಪಿಯನ್‌ಶಿಪ್ ತೀರ್ಪುಗಾರರಾಗಿ ಮಾಜಿ ಡಿಜಿಪಿಗಳು, ಸೇನೆ ಸೇರಿದಂತೆ ಪೊಲೀಸ್ ಇಲಾಖೆಯ ನಿವೃತ್ತ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
42ನೇ ಅಖಿಲ ಭಾರತ ಪೊಲೀಸ್ ಈಕ್ವೆಸ್ಟ್ರಿಯನ್ ಚಾಂಪಿಯನ್‌ಶಿಪ್ ಮತ್ತು ಮೌಂಟೆಡ್ ಪೊಲೀಸ್ ಡ್ಯೂಟಿ ಮೀಟ್ ನಲ್ಲಿ ಪ್ರಶಸ್ತಿ ಪಡೆದಿರುವ ಶೈಲೇಂದ್ರ ಅವರಿಗೆ ನಗರ ಪೊಲೀಸ್ ಕಮಿಷನರ್ ರಮೇಶ್ ಬನೋತ್ ಅವರು ತಮ್ಮ ಕಚೇರಿಯಲ್ಲಿ ಸನ್ಮಾನ ಮಾಡುವ ಮೂಲಕ ಗೌರವಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮೈಸೂರು ಮೌಂಟೆಡ್ ಪೊಲೀಸ್ ತಂಡವನ್ನು ಪ್ರತಿನಿಧಿಸಿದ್ದ ಶೈಲೇಂದ್ರ ಅವರು ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದಿರುವುದು ಹೆಮ್ಮೆಯ ವಿಷಯ. 12 ವರ್ಷಗಳ ನಂತರ ಈಕ್ವೆಸ್ಟ್ರಿಯನ್ ಮೀಟ್ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ಬಂದಿದೆ. ಈ ಪದಕ ತಂದುಕೊಡುವಲ್ಲಿ ಕಮಾಂಡೆಂಟ್ ಶೈಲೇಂದ್ರ ಅವರು ಯಶಸ್ವಿಯಾಗಿದ್ದಾರೆ. ಅವರ ಈ ಸಾಧನೆಗೆ ಅಭಿನಂದನೆ ಸಲ್ಲಿಸುವೆ ಎಂದು ಅವರು ತಿಳಿಸಿದರು.
42ನೇ ಅಖಿಲ ಭಾರತ ಪೊಲೀಸ್ ಈಕ್ವೆಸ್ಟ್ರಿಯನ್ ಚಾಂಪಿಯನ್‌ಶಿಪ್ ಮತ್ತು ಮೌಂಟೆಡ್ ಪೊಲೀಸ್ ಡ್ಯೂಟಿ ಮೀಟ್, ನಮ್ಮ ಪೊಲೀಸ್ ಸಿಬ್ಬಂದಿಗೆ ಸಾಮರ್ಥ್ಯ ಮತ್ತು ಪ್ರಾವೀಣ್ಯತೆ ಕೌಶಲ್ಯಗಳನ್ನು ಪ್ರದರ್ಶನ ಮಾಡುವುದಕ್ಕೆ ಸಹಕಾರಿ ಆಗಿದೆ. ಈಕ್ವೆಸ್ಟ್ರಿಯನ್ ಮೀಟ್ ಪೊಲೀಸ್ ಕ್ರೀಡಾಪಟುಗಳಲ್ಲಿ ಪರಸ್ಪರ ಗೌರವ, ಸಹಕಾರವನ್ನು ಬೆಳೆಸುವುದಕ್ಕೆ ಉತ್ತೇಜನ ನೀಡುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂಓದಿ:ಇನ್ಮುಂದೆ ವರ್ಗಾವಣೆಯಾಗುವ ಪೊಲೀಸರಿಗೆ ಡಿಸಿಪಿಯಿಂದ ಎನ್ಒಸಿ ಕಡ್ಡಾಯ