ಮೈಸೂರು: ನಮ್ಮ ಶಿಕ್ಷಣ ಸಂಸ್ಥೆಗಳು ಭಾರತದ ಭವಿಷ್ಯದ ಪೀಳಿಗೆಗಾಗಿ ವಿಶ್ವ ದರ್ಜೆಯ ಕೌಶಲ್ಯ ಮತ್ತು ಜ್ಞಾನವನ್ನು ಒದಗಿಸುವ ಜೊತೆಗೆ ಉತ್ತಮ ಮಾರ್ಗದರ್ಶನವನ್ನು ಸಹ ನೀಡಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸಲಹೆ ನೀಡಿದರು.
ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ 19ನೇ ಘಟಿಕೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಭಾರತವನ್ನು ಜ್ಞಾನದ ಸೂಪರ್ ಪವರ್ ಮಾಡುವುದರಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ ಕಾರ್ಯ ಮಹತ್ವದ್ದಾಗಿದೆ. ನಮ್ಮ ಶಿಕ್ಷಣ ಸಂಸ್ಥೆಗಳು ಸಂಶೋಧನೆ ಮತ್ತು ನಾವೀನ್ಯತೆ ಕುರಿತು ವಿದ್ಯಾರ್ಥಿಗಳನ್ನು ಉತ್ತೇಜಿಸುವುದರಿಂದ ಇದನ್ನು ಸಾಧಿಸಬಹುದು ಎಂದು ಅಭಿಪ್ರಾಯಪಟ್ಟರು.
ಈ ಘಟಿಕೋತ್ಸವ ಸಮಾರಂಭದಲ್ಲಿ ಡಾ. ಎಚ್.ಸಿ. ಸತ್ಯನ್, ಕೆ.ಎಂ. ವೀರೇಶ್ ಮತ್ತು ಮೀರಾ ಶಿವಲಿಂಗಯ್ಯ ಅವರಿಗೆ ಗೌರವ ಡಾಕ್ಟರೇಟ್ ಪದವಿಗಳನ್ನು ನೀಡಿ ಸನ್ಮಾನಿಸಲಾಗಿದೆ. ದೇಶದ ಪ್ರಗತಿಗೆ ಕೊಡುಗೆ ನೀಡಿದ ಇಂಥ ಮಹಾನ್ ವ್ಯಕ್ತಿಗಳನ್ನು ವಿಶ್ವವಿದ್ಯಾಲಯ ಗುರುತಿಸಿರುವುದು ಸಂತೋಷದ ಸಂಗತಿ. ಡಾಕ್ಟರೇಟ್ ಸ್ವೀಕರಿಸಿದ ಗಣ್ಯರಿಗೆ ಅಭಿನಂದಿಸುತ್ತ, ಸಮಾಜ ಮತ್ತು ರಾಷ್ಟ್ರದ ಹಿತದೃಷ್ಟಿಯಿಂದ ಸಾಧಕರು ಹೀಗೆ ಕೆಲಸ ಮಾಡುವುದನ್ನು ಮುಂದುವರಿಸಬೇಕು ಎಂದರು.
ಪ್ರಾಚೀನ ಕಾಲದಿಂದ ಭಾರತ ವಿಜ್ಞಾನ, ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿ:ನಮ್ಮ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಪ್ರದಾಯವು ಪ್ರಾಚೀನ ಕಾಲದಿಂದಲೂ ವಸುಧೈವ ಕುಟುಂಬಕಂ" ತತ್ವಶಾಸ್ತ್ರ ಮತ್ತು ಧ್ಯಾನದ ಮೇಲೆ ಕೇಂದ್ರೀಕರಿಸುತ್ತದೆ. ವಿಶ್ವ ಸಹೋದರತ್ವ, ವಿಶ್ವ ಶಾಂತಿ, ಸಮಾನತೆ ಮತ್ತು ಸಾಮರಸ್ಯವನ್ನು ಕಲಿಸುತ್ತದೆ. ಪ್ರಾಚೀನ ಕಾಲದಿಂದಲೂ ಭಾರತವು ಜ್ಞಾನ, ವಿಜ್ಞಾನ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ನಮ್ಮ ಪ್ರಾಚೀನ ಶಿಕ್ಷಣ ವ್ಯವಸ್ಥೆಯು ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಯ ಮೇಲೆ ಕೇಂದ್ರೀಕೃತವಾಗಿತ್ತು. ಅದಕ್ಕಾಗಿ ನಾವು ವಿಶ್ವ ನಾಯಕರೆಂದು ಪರಿಗಣಿಸಲ್ಪಟ್ಟಿದ್ದೇವೆ. ನಮ್ಮ ಆರ್ಥಿಕತೆ ಪ್ರಬಲವಾಗಿತ್ತು. ಅದಕ್ಕಾಗಿ ದೇಶವನ್ನು ಚಿನ್ನದ ಹಕ್ಕಿ ಎಂದು ಕರೆಯಲಾಯಿತು ಎಂದು ಹೇಳಿದರು.
ಜೀವನದ ಯಶಸ್ಸಿನಲ್ಲಿ ಶಿಕ್ಷಣವು ದೊಡ್ಡ ಪಾತ್ರವನ್ನು ವಹಿಸುತ್ತದೆ. ಶಿಕ್ಷಣವು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಉಪಯುಕ್ತವಾಗಿದೆ. ಒಬ್ಬ ವ್ಯಕ್ತಿಯು ಶಿಕ್ಷಣ ಪಡೆದಾಗ ಅವನ ಅಭಿವೃದ್ಧಿಯು ಉತ್ತಮವಾಗಿರುತ್ತದೆ. ಶಿಕ್ಷಣವು ನಮಗೆ ಆಲೋಚನೆಗಳನ್ನು ವ್ಯಕ್ತಪಡಿಸುವ ಸಾಮರ್ಥ್ಯವನ್ನು ಒದಗಿಸುತ್ತದೆ ಎಂದು ತಿಳಿಸಿದರು.