ದಾವಣಗೆರೆ:ಒಂದು ತಿಂಗಳು ಮಾಮೂಲಿ ಕೊಡದಿದ್ದಕ್ಕೆ ನನ್ನ ಪತಿಯನ್ನು ಪೊಲೀಸರು ಹೊಡೆದು ಸಾಯಿಸಿದ್ದಾರೆ ಎಂದು ಮೃತ ಆದಿಲ್ ಪತ್ನಿ ಹೀನಾಬಾನು ಚನ್ನಗಿರಿ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಚನ್ನಗಿರಿ ಪಟ್ಟಣದ ಟಿಪ್ಪು ನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಗಂಡ ಮಟ್ಕಾ ಆಡಿಸುತ್ತಿದ್ದದ್ದು ಸತ್ಯ. ಆದರೆ, ಪೊಲೀಸರು ಪ್ರತಿ ತಿಂಗಳು ಕಮಿಷನ್ ವಸೂಲು ಮಾಡುತ್ತಿದ್ದರು. ಒಂದು ತಿಂಗಳು ಕೊಡದೇ ಇದಿದ್ದಕ್ಕೆ ಸಿವಿಲ್ ಡ್ರೆಸ್‌ನಲ್ಲಿ ಬಂದು ಪೊಲೀಸರು ಕರೆದುಕೊಂಡು ಹೋದರು. ನಿನ್ನೆ ಸಂಜೆ ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀರಾ ಎಂದು ಕೇಳಿದರೆ ಹೇಳಲಿಲ್ಲ. ನನ್ನ ಗಂಡನಿಗೆ ಪೊಲೀಸರೇ ಹೊಡೆದಿದ್ದಾರೆ. ನನ್ನ ಗಂಡನ ಸಾವಿಗೆ ಪೊಲೀಸರೇ ಕಾರಣ ಎಂದು ದೂರಿದರು.
ಪೊಲೀಸರಿಂದ ನನ್ನ ಗಂಡ ಸಾಕಷ್ಟು ಕಿರುಕುಳ ಅನುಭವಿಸಿದ್ದಾನೆ. ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಥಳಿಸಿದ್ದಾರೆ. ಹೊಡೆದ ಮೇಲೆ ಮೂರ್ಛೆ ರೋಗ ಎಂದು ಸುಳ್ಳು ಹೇಳಿದ್ದಾರೆ. ಈಗ ನನ್ನ ಮಕ್ಕಳು, ನನಗೆ ಯಾರು ಗತಿ?. ಪೊಲೀಸರು ನನ್ನ ಗಂಡನ ಬದುಕಿಸಿ ಕೊಡ್ತಾರಾ?. ಇಡೀ ಮನೆ ಹುಡುಕಿದರೂ ಒಂದು ಗುಳಿಗೆ ಸಿಗಲ್ಲ. ನನ್ನ ಗಂಡನಿಗೆ ಯಾವುದೇ ರೋಗ ಇರಲಿಲ್ಲ ಎಂದು ಪತ್ನಿ ಹೀನಾಬಾನು ಹೇಳಿದರು.
ಮೃತ ಆದಿಲ್ ತಂದೆ ಖಲೀಮುಲ್ಲಾ ಪ್ರತಿಕ್ರಿಯಿಸಿ, ನನ್ನ ಮಗ ಲೋ ಬಿಪಿಯಿಂದ ಸಾವನಪ್ಪಿಲ್ಲ. ಪೊಲೀಸರೇ ಹೊಡೆದು ಸಾಯಿಸಿದ್ದಾರೆ ಎಂಬ ಅನುಮಾನ ಇದೆ. ಆದ ಕಾರಣ ತನಿಖೆ ನಡೆಸಿ ನಮಗೆ ನ್ಯಾಯ ದೊರಕಿಸಿಕೊಡಿ. ಬೆಳಗ್ಗೆ ನನಗೆ ಮಾತನಾಡುವ ಧೈರ್ಯ ಇರಲಿಲ್ಲ. ನನಗೆ ಬಿಪಿ ಇದೆ ಎಂದು ಹೇಳುವ ಬದಲು ನನ್ನ ಮಗನಿಗೆ ಲೋ ಬಿಪಿ ಇದೆ ಎಂದು ತಪ್ಪು ಹೇಳಿದ್ದೇನೆ. ನಾನು ನನ್ನ ಮಗನನ್ನು ಕಳೆದುಕೊಂಡಿದ್ದೇನೆ. ಈ ವಯಸ್ಸಲ್ಲಿ ನನಗೆ ದುಡಿಯೋಕೆ ಆಗುತ್ತಾ? ಸರ್ಕಾರ ನನಗೆ ಪರಿಹಾರ ಕೊಡಬೇಕು ಎಂದು ಮನವಿ ಮಾಡಿದ ಅವರು, ತಾವು ಗಾಬರಿಯಲ್ಲಿ ಬೆಳಗ್ಗೆ ಏನೇನೋ ಮಾತನಾಡಿದ್ದೇನೆ ಎಂದರು.