ಗಂಗಾವತಿ:''ದೇಶದ ಅಭಿವೃದ್ಧಿ ವಿಚಾರ, ಸಮರ್ಥ ನಾಯಕ, ವಿಶ್ವವನ್ನೇ ಮುನ್ನಡೆಸುವ ಸಾಮರ್ಥ್ಯ ಇರುವ ಪ್ರಧಾನಿ ನರೇಂದ್ರ ಮೊದಿ ಅವರ ವಿಚಾರ ಬಂದಾಗ ಹೊಂದಾಣಿಕೆ ಮಾಡಿಕೊಳ್ಳುವ ಅನಿವಾರ್ಯತೆ ಎದುರಾದರೆ ನನ್ನ ಮೊದಲ ಆಯ್ಕೆ ಬಿಜೆಪಿಯೇ ಆಗಿರುತ್ತದೆ. ಆದ್ರೆ, ಕಾಂಗ್ರೆಸ್ ಪಕ್ಷ ಅಲ್ಲವೇ ಅಲ್ಲ'' ಎಂದು ಗಂಗಾವತಿ ಶಾಸಕ, ಕೆಆರ್ಪಿಪಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ''ಮೋದಿಯಂತಹ ನಾಯಕನ ನಾಯಕತ್ವ ದೇಶಕ್ಕೆ ಬೇಕಿದೆ. ಉತ್ತಮ ಕೆಲಸ ಮಾಡುವ ಯಾವುದೇ ವ್ಯಕ್ತಿ ಇದ್ದರೂ ಅವರನ್ನು ಮೆಚ್ಚಬೇಕಾದ್ದದ್ದು ನಮ್ಮ ಧರ್ಮ. ಭಾರತೀಯರಾಗಿರುವ ನಾವು ಮೋದಿಯನ್ನು ಪ್ರಶಂಸಿಸಬೇಕು, ಅಭಿನಂದಿಸಬೇಕು. ಹೀಗಾಗಿ ದೇಶದ ವಿಚಾರ ಬಂದಾಗ ಬಿಜೆಪಿಯವರು ಮುಂದೆ ಬಂದು ಹೊಂದಾಣಿಕೆಯ ಪ್ರಸ್ತಾಪವಿಟ್ಟರೆ ಅದಕ್ಕೆ ನಾನು ಸ್ಪಂದಿಸುತ್ತೇನೆ. ಹೊಂದಾಣಿಕೆ ಆಗುವುದಾದರೆ ಕೇವಲ ಬಿಜೆಪಿಯೊಂದಿಗೆ ಮಾತ್ರ. ಕಾಂಗ್ರೆಸ್ ಪಕ್ಷದ ವಿಚಾರದಲ್ಲಿ ಈ ವಿಷಯವೇ ಅಪ್ರಸ್ತುತ'' ಎಂದು ಅವರು ತಿಳಿಸಿದರು.
''ಇಡೀ ದೇಶದ ಜನ ಮತ್ತೊಮ್ಮೆ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾಗಬೇಕು ಎಂಬ ವಿಚಾರ ಹೊಂದಿದ್ದಾರೆ. ಹೀಗಾಗಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಪಾಲುದಾರಿಕೆಯಾಗಬೇಕು ಎಂದು ಬಿಜೆಪಿ ಬಯಸಿದರೆ ನನ್ನ ಮೊದಲ ಆಯ್ಕೆ ಬಿಜೆಪಿಗೆ ಇರುತ್ತದೆ. ನನ್ನ ಸಂಬಂಧ ಏನಿದ್ದರೂ ನನ್ನ ಮಾತೃಪಕ್ಷ ಬಿಜೆಪಿಯೊಂದಿಗೆ ಮಾತ್ರ'' ಎಂದರು.
''ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರದಲ್ಲಿ ನನ್ನ ಪಕ್ಷದಿಂದ ಅಭ್ಯರ್ಥಿಗಳನ್ನು ಹಾಕುವಷ್ಟು ಶಕ್ತಿ ನನಗಿಲ್ಲ. ಅದಕ್ಕೆ ಸಮಯವೂ ಇಲ್ಲ. ಹೀಗಾಗಿ ನಾನು ಮೊದಲಿನಿಂದಲೂ ನನ್ನದು ಒಂದೇ ನಿಲುವು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನನ್ನ ಪಕ್ಷದಿಂದ ಐದಾರು ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಹಾಕುತ್ತೇನೆ. ಹಾಕಿರುವ ಕ್ಷೇತ್ರದಲ್ಲಿ ನನ್ನ ಶಕ್ತಿ ಮೀರಿ ನನ್ನ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲು ಯತ್ನ ಮಾಡುತ್ತೇನೆ. ದೇಶದಲ್ಲಿ ತಿರುಪತಿ ಮತ್ತು ಅಯೋಧ್ಯೆ ಹೇಗೆ ಪ್ರಮುಖ ಧಾರ್ಮಿಕ ತಾಣಗಳಾಗಿವೆಯೋ ಹಾಗೆ ಅಂಜನಾದ್ರಿಯನ್ನೂ ಮೂರನೇ ಅತಿದೊಡ್ಡ ಪವಿತ್ರ ಧಾರ್ಮಿಕ ತಾಣವನ್ನಾಗಿಸುವ ಉದ್ದೇಶ ಇದೆ'' ಎಂದು ವಿವರಿಸಿದರು.