ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಬದನಗುಪ್ಪೆಯಲ್ಲಿ ಶ್ರೀಲಂಕಾದ ಖ್ಯಾತ ಮಾಜಿ ಕ್ರಿಕೆಟ್ ಆಟಗಾರ ಮುತ್ತಯ್ಯ ಮುರಳೀಧರನ್ ತಂಪು ಪಾನೀಯ ಮತ್ತು ಸಿಹಿತಿಂಡಿಗಳ ಉದ್ಯಮ ಆರಂಭಿಸುತ್ತಿದ್ದಾರೆ. ಹಂತಹಂತವಾಗಿ ಒಟ್ಟು 1,400 ಕೋಟಿ ರೂ. ಹೂಡಿಕೆ ಮಾಡಲಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಮಂಗಳವಾರ ತಮ್ಮನ್ನು ಇಲ್ಲಿ ಭೇಟಿಯಾದ ಮುತ್ತಯ್ಯ ಮುರಳೀಧರನ್ ಅವರೊಂದಿಗೆ ಸಚಿವರು ಈ ಸಂಬಂಧ ಮಾತುಕತೆ ನಡೆಸಿದರು. ಬಳಿಕ ಮಾತನಾಡಿದ ಸಚಿವರು, ಬದನಗುಪ್ಪೆಯಲ್ಲಿ ಮುರಳೀಧರನ್ ಅವರು 'ಮುತ್ತಯ್ಯ ಬ್ರಿವರೇಜಸ್ ಆ್ಯಂಡ್ ಕನ್ಫೆಕ್ಷನರೀಸ್' ಎನ್ನುವ ಬ್ರ್ಯಾಂಡ್ನಲ್ಲಿ ತಮ್ಮ ಉದ್ಯಮ ಆರಂಭಿಸುತ್ತಿದ್ದು, ಆರಂಭದಲ್ಲಿ 230 ಕೋಟಿ ರೂಪಾಯಿ ಹೂಡಿಕೆಗೆ ಯೋಜನೆ ರೂಪಿಸಲಾಗಿತ್ತು. ಇದೀಗ ಅದು ಸಾವಿರ ಕೋಟಿ ರೂ. ಮುಟ್ಟುತ್ತಿದೆ. ಮುಂದಿನ ದಿನಗಳಲ್ಲಿ 1,400 ಕೋಟಿ ಆಗಲಿದೆ ಎಂದು ಮುತ್ತಯ್ಯ ತಮಗೆ ತಿಳಿಸಿದ್ದಾರೆ ಎಂದು ವಿವರಿಸಿದರು.