ಲಕ್ಷ್ಮಿ ಹೆಬ್ಬಾಳ್ಕರ್ ಪಂಚಮಸಾಲಿ ಅಲ್ಲ, ಬಣಜಿಗ ಬೆಳಗಾವಿ: ಬೆಳಗಾವಿ ಲೋಕಸಮರದಲ್ಲಿ ಪಂಚಮಸಾಲಿ-ಬಣಜಿಗ ವಿಚಾರ ಮುನ್ನೆಲೆಗೆ ಬಂದಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪಂಚಮಸಾಲಿ ಅಲ್ಲ, ಅವರು ಬಣಜಿಗ ಸಮಾಜಕ್ಕೆ ಸೇರಿದವರು ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿದರು.
ಬೆಳಗಾವಿಯಲ್ಲಿ 'ಈಟಿವಿ ಭಾರತ' ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಮದುವೆ ಆಗುವ ಮುನ್ನ ಲಕ್ಷ್ಮಿ ಪಂಚಮಸಾಲಿ ಸಮಾಜಕ್ಕೆ ಸೇರಿದ್ದರು. ಆದರೆ, ಬಣಜಿಗ ಸಮಾಜಕ್ಕೆ ಸೇರಿರುವ ರವೀಂದ್ರ ಹೆಬ್ಬಾಳ್ಕರ್‌ರನ್ನು ಮದುವೆಯಾದ ಬಳಿಕ ಪತಿಯ ಅಡ್ರೆಸ್ ಹೊಂದುತ್ತಾರೆ, ಅವರ ಜಾತಿಗೆ ಸೇರುತ್ತಾರೆ. ಮದುವೆಯಾದ ಬಳಿಕ ಲಕ್ಷ್ಮಿ ಹೆಬ್ಬಾಳ್ಕರ್ ಆಗಿದ್ದಾರೆ. ಹೀಗಾಗಿ ಅವರು ಬಣಜಿಗ ಸಮಾಜದವರು. ಬೆಳಗಾವಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಕೂಡ ಬಣಜಿಗ ಎಂದರು.
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಹೋರಾಟದ ವೇಳೆ ಲಕ್ಷ್ಮೀ ಹೆಬ್ಬಾಳ್ಕರ್ ನನಗೆ ಸವಾಲು ಹಾಕಿದ್ದರು. ಮೀಸಲಾತಿ ಕೊಡಿಸಿದರೆ ಬೆಳಗಾವಿ ಕುಂದಾ ಕೊಟ್ಟು ಸನ್ಮಾನ ಮಾಡುತ್ತೇನೆ ಎಂದಿದ್ದರು. ಬಳಿಕ ನಮ್ಮ ಸರ್ಕಾರ ಬಂದ ಮೂರೇ ತಿಂಗಳಲ್ಲಿ 2ಎ ಮೀಸಲಾತಿ ಕೊಡಿಸುತ್ತೇನೆ. ನಾನು ಮೀಸಲಾತಿ ಕೊಡಿಸಿದರೆ ಒಂದು ಜೋಡಿ ಚಿನ್ನದ ಬಳೆ ಕೊಟ್ಟು ಸನ್ಮಾನ ಮಾಡಬೇಕು ಎಂದಿದ್ದರು. ಈಗ ಸರ್ಕಾರವೂ ಬಂದಿದೆ, ಮಂತ್ರಿಯೂ ಆಗಿದ್ದಾರೆ. ಒಂದು ವರ್ಷ ಕಳೆದರೂ ಮೀಸಲಾತಿ ನೀಡಲು ಆಗಿಲ್ಲ ಎಂದು ಟೀಕಿಸಿದರು.
ಸಮಾಜದ ಬಗ್ಗೆ ನಿಮಗೆ ಏನಾದರೂ ಕಳಕಳಿ ಇದ್ದರೆ, ಪಂಚಮಸಾಲಿ ಕೋಟಾದಲ್ಲಿ ಮಂತ್ರಿ ಆಗಿರುವ ನೀವು 2ಎ ಮೀಸಲಾತಿ ಕೊಡಿಸಿ. ಮೀಸಲಾತಿ ಕೊಡಿಸಿದರೆ ನಿಮ್ಮ ಸವಾಲಿನಂತೆ ಒಂದು ಜೋಡಿ ಬಳೆ ಅಲ್ಲ, ಒಂದು ಕೆಜಿ ಬಂಗಾರದ ಆಭರಣಗಳು ಮತ್ತು ಕುಂದಾ ಕೊಟ್ಟು ಸಮಾಜದ ಹತ್ತಾರು ಸಾವಿರ ಜನರನ್ನು ಸೇರಿಸಿ ಸನ್ಮಾನ ಮಾಡುತ್ತೇನೆ. ಒಂದು ವೇಳೆ ಮೀಸಲಾತಿ ಕೊಡಿಸಲು ಆಗದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಹೋರಾಟದಲ್ಲಿ ಭಾಗಿಯಾಗಬೇಕು. ಮೀಸಲಾತಿ ಸಿಕ್ಕ ಬಳಿಕ ಮತ್ತೆ ಮಂತ್ರಿ ಆಗಲಿ ಎಂದು ನಿರಾಣಿ ಹೆಬ್ಬಾಳ್ಕರ್‌ಗೆ ಸವಾಲು ಹಾಕಿದರು.
ಜಗದೀಶ ಶೆಟ್ಟರ್ ಹೊರಗಿನವರು ಎನ್ನುತ್ತಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಮುರುಗೇಶ ನಿರಾಣಿ, ಲಕ್ಷ್ಮೀ ಹೆಬ್ಬಾಳ್ಕರ್ ಖಾನಾಪುರ ತಾಲ್ಲೂಕಿನ ಹಟ್ಟಿಹೊಳಿಯವರು. ಆದರೆ, ಚುನಾವಣೆಗೆ ನಿಂತಿದ್ದು ಮಾತ್ರ ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ. ಹಾಗಾಗಿ, ನೀವು ಹೊರಗಿನವರಾ, ಒಳಗಿನವರಾ ಎಂದು ಪ್ರಶ್ನಿಸಿದರು.
ಇನ್ನು ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಗುಲಬರ್ಗಾದ ವೀರೇಂದ್ರ ಪಾಟೀಲ್ ಅವರು ಬಾಗಲಕೋಟೆಯಿಂದ ಸ್ಪರ್ಧಿಸಿದ್ದರು. ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಕರ್ನಾಟಕದಿಂದ ಸ್ಪರ್ಧಿಸಿದ್ದರು. ಇವರೆಲ್ಲಾ ಎಲ್ಲಿಯವರು? ನಿಮ್ಮ ಪಕ್ಷದಲ್ಲೇ ಈ ರೀತಿ ಸಾವಿರಾರು ಉದಾಹರಣೆಗಳಿವೆ. ಚುನಾವಣೆಗೋಸ್ಕರ ಗಿಮಿಕ್ ಮಾಡಿ, ಶೆಟ್ಟರ್ ಅಡ್ರೆಸ್ ಕೇಳಿ, ಹೊರಗಿನವರು ಅಂತಾ ಹೇಳುತ್ತಿರುವುದು ತಪ್ಪಲ್ಲವೇ ಎಂದು ನಿರಾಣಿ ಕೇಳಿದರು.
ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಕ್ಯಾಬಿನೆಟ್ಗೆ ಹೋಗಿ ನಮ್ಮ ಬಿಜೆಪಿ ಮಂತ್ರಿಗಳಿಗಿಂತ ಹೆಚ್ಚು ಅನುದಾನ ತೆಗೆದುಕೊಂಡು ಬಂದಿದ್ದೀರಿ. ಆವಾಗ ನಿಮಗೆ ಎಲ್ಲಿ ಅಡ್ರೆಸ್ ಗೊತ್ತಿತ್ತು? ನೂರಕ್ಕೆ ನೂರರಷ್ಟು ಶೆಟ್ಟರ್ ಗೆದ್ದು, ಮಂತ್ರಿಯೂ ಆಗುತ್ತಾರೆ. ಆಗ ನಮಗಿಂತ ಮೊದಲು ಅವರ ಚೆಂಬರ್ನಲ್ಲಿ ನೀವೇ ಇರುತ್ತೀರಿ. ಹಾಗಾಗಿ, ಅಡ್ರೆಸ್ ಕೇಳುವುದು, ನೀವು ಸಮಾಜದವರಲ್ಲ, ಹೊರಗಿನವರು ಎನ್ನುವ ಗಿಮಿಕ್ ಸರಿಯಲ್ಲ. ನೇರವಾಗಿ ನಿಮ್ಮ ಪ್ರಣಾಳಿಕೆ ಮತ್ತು ನೀವು ಕೆಲಸ ಮಾಡಿದ್ದನ್ನು ಹೇಳಿ ಮತ ಕೇಳಿ. ಜಗದೀಶ ಶೆಟ್ಟರ್ ಅವರು ನಮ್ಮ ಪ್ರಣಾಳಿಕೆ ಪ್ರಕಾರ ಮತ ಕೇಳುತ್ತಾರೆ. ಬೆಳಗಾವಿಯಲ್ಲಿ ಅತೀ ಹೆಚ್ಚು ಶಿಕ್ಷಿತರು ಮತ್ತು ಪ್ರಜ್ಞಾವಂತರಿದ್ದು, ಅವರು ಅಳೆದೂ ತೂಗಿ ಮತ ಹಾಕುತ್ತಾರೆ. ಆದ್ದರಿಂದ ಮೋದಿಯವರ ಕೈ ಬಲಪಡಿಸಲು, ದೇಶದ ಸುಭದ್ರತೆಗೆ ಕಮಲದ ಚಿಹ್ನೆಗೆ ಮತ ನೀಡುವಂತೆ ನಾವು ಕೇಳಿಕೊಳ್ಳುತ್ತೇವೆ. ಪ್ರಜ್ಞಾವಂತರು ಯಾರಿಗೆ ಅಶೀರ್ವದಿಸುತ್ತಾರೋ ಅವ್ರು ಸೇವೆ ಮಾಡಲಿ ಎಂದು ನಿರಾಣಿ ಹೇಳಿದರು.
ಇದನ್ನೂ ಓದಿ:ಶೆಟ್ಟರ್-ಮೃಣಾಲ್ ಹೆಸರಿಗಷ್ಟೇ ಅಭ್ಯರ್ಥಿಗಳು: ಲಕ್ಷ್ಮಿ ಹೆಬ್ಬಾಳ್ಕರ್-ಜಾರಕಿಹೊಳಿ ಸಹೋದರರ ನಡುವೆ ಸ್ಪರ್ಧೆ - Belagavi Lok Sabha Election