ಕರ್ನಾಟಕ

karnataka

ETV Bharat / state

ಕೊಲೆ ಪ್ರಕರಣದಲ್ಲಿ ನಟ ದರ್ಶನ್​ ಪೊಲೀಸ್​ ವಶಕ್ಕೆ: ಕೇಸ್​ ಬಗ್ಗೆ ಬೆಂಗಳೂರು ಪೊಲೀಸ್​​​​​​​​ ಕಮಿಷನರ್​ ಹೇಳಿದ್ದಿಷ್ಟು! - Actor Darshan - ACTOR DARSHAN

ವ್ಯಕ್ತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್​ ಅವರನ್ನು ಕಾಮಾಕ್ಷಿಪಾಳ್ಯ ಠಾಣಾ ಪೊಲೀಸ​ರು ವಶಕ್ಕೆ ಪಡೆದಿದ್ದಾರೆ. ಹತ್ಯೆಯಾದ ರೇಣುಕಾಸ್ವಾಮಿ ನಟಿಯೊಬ್ಬರಿಗೆ ಅಶ್ಲೀಲ ಕಮೆಂಟ್​ಗಳನ್ನು ಮಾಡುತ್ತಿದ್ದ ಎಂಬ ಪ್ರಾಥಮಿಕ‌ ಮಾಹಿತಿ ದೊರೆತಿದೆ. ಈ ಹಿನ್ನೆಲೆ ಹೆಚ್ಚಿನ ವಿಚಾರಣೆಗೆ ನಟ ಸೇರಿ 10 ಜನರನ್ನು ವಶಕ್ಕೆ ಪಡೆದು ಪ್ರಶ್ನೆ ಮಾಡಲಾಗುತ್ತಿದೆ ಎಂದು ಬೆಂಗಳೂರು ಪೊಲೀಸ್​ ಆಯುಕ್ತ ದಯಾನಂದ್ ತಿಳಿಸಿದ್ದಾರೆ.

ACTOR DARSHAN IN POLICE CUSTODY
ಕೊಲೆ ಪ್ರಕರಣದಲ್ಲಿ ನಟ ದರ್ಶನ್​ ಪೊಲೀಸ್​ ವಶಕ್ಕೆ (ETV Bharat)

By ETV Bharat Karnataka Team

Published : Jun 11, 2024, 11:13 AM IST

Updated : Jun 11, 2024, 12:50 PM IST

ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ (ETV Bharat)

ಬೆಂಗಳೂರು:ವ್ಯಕ್ತಿಯೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರ ನಟ ದರ್ಶನ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬ ಯುವಕನ ಹತ್ಯೆ ಆರೋಪಕ್ಕೆ ಸಂಬಂಧಿಸಿದಂತೆ ದರ್ಶನ ಸೇರಿ ಅವರ 10 ಜನ ಸಹವರ್ತಿಗಳನ್ನು ವಶಕ್ಕೆ ಪಡೆಯಲಾಗಿದೆ. ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಎಲ್ಲರನ್ನು ಬೆಂಗಳೂರಿಗೆ ಕರೆತಂದಿರುವುದಾಗಿ ಪೊಲೀಸ್​ ಮೂಲಗಳು ತಿಳಿಸಿವೆ.

ಕಾಮಾಕ್ಷಿಪಾಳ್ಯದ ಮೋರಿಯಲ್ಲಿ ರೇಣುಕಾಸ್ವಾಮಿ ಮೃತದೇಹ ಪತ್ತೆಯಾಗಿದ್ದು, ಶವವನ್ನು ಗಮನಿಸಿದ ಸ್ಥಳೀಯರು, ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು, ಮೃತನ ವಿವರ ಹಾಗೂ ಆತ ಹತ್ಯೆಯಾಗಿರುವುದನ್ನು ಖಚಿತಪಡಿಸಿಕೊಂಡಿದ್ದರು.

ಪ್ರಕರಣದ ಪ್ರಾರಂಭಿಕ ತನಿಖೆಯಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಹಣದ ವಿಚಾರವಾಗಿ ಹತ್ಯೆ ಮಾಡಿರುವುದಾಗಿ ಹೇಳಿದ್ದರು. ನಂತರ ಹೆಚ್ಚಿನ ವಿಚಾರಣೆ ನಡೆಸಿದಾಗ ಕೆಲವು ಮಾಹಿತಿಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪೊಲೀಸರು ದರ್ಶನ್ ಸೇರಿ ಹಲವರನ್ನು ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಬೆಂಗಳೂರು ಪೊಲೀಸ್​ ಕಮಿಷನರ್​ ಹೇಳಿದ್ದಿಷ್ಟು:ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದ ಹತ್ಯೆ ಪ್ರಕರಣದ ಆರೋಪದಡಿ ಕನ್ನಡದ ಓರ್ವ ನಟನನ್ನ ವಶಕ್ಕೆ ಪಡೆಯಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಸ್ಪಷ್ಟನೆ ನೀಡಿದ್ದಾರೆ.

ಜೂನ್ 9ರಂದು ಅಪರಿಚಿತ ಶವ ಪತ್ತೆಯಾಗಿತ್ತು. ಮೃತದೇಹದ ಮೇಲಿದ್ದ ಗಾಯಗಳನ್ನ ಗಮನಿಸಿ ಹತ್ಯೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ನಂತರ ತಾಂತ್ರಿಕ ಅಂಶಗಳ ಆಧಾರದಲ್ಲಿ ಮೃತನ ವಿವರ ಕಲೆಹಾಕಲಾಗಿತ್ತು. ಮೃತ ವ್ಯಕ್ತಿ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ (33) ಎಂಬುದು ತಿಳಿದು ಬಂದಿತ್ತು. ಆತ ಮೆಡಿಕಲ್​ ಶಾಪ್​ವೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ತನಿಖೆಯ ವೇಳೆ ನಟ ಹಾಗೂ ಆತನ ಸಹಚರರ ಸಹಿತ 10 ಜನರನ್ನ ವಶಕ್ಕೆ ಪಡೆಯಲಾಗಿದೆ. ಹತ್ಯೆಯಾದ ವ್ಯಕ್ತಿ ನಟಿಯೊಬ್ಬರಿಗೆ ಅಶ್ಲೀಲ ಕಮೆಂಟ್​ಗಳನ್ನು ಮಾಡುತ್ತಿದ್ದ ಎಂಬ ಪ್ರಾಥಮಿಕ‌ ಮಾಹಿತಿ ದೊರೆತಿದೆ. ಹೆಚ್ಚಿನ ವಿಚಾರಣೆ ಮುಂದುವರೆದಿದೆ ಎಂದು ದಯಾನಂದ್ ಸ್ಪಷ್ಟನೆ ನೀಡಿದ್ದಾರೆ.

ಮೃತ ರೇಣುಕಾಸ್ವಾಮಿ (33) (ETV Bharat)

ನಟ ದರ್ಶನ್, ವಿನಯ್, ಕಿರಣ್, ಮಧು, ಲಕ್ಷ್ಮಣ್, ಆನಂದ್, ರಾಘವೇಂದ್ರ ಸೇರಿದಂತೆ 10 ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಇದೀಗ ವಿಚಾರಣೆ ನಡೆಸಿದ್ದಾರೆ. ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್, ಎಸಿಪಿ ಚಂದನ್ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಅವರ ಸ್ನೇಹಿತೆ ಪವಿತ್ರಾ ಗೌಡರನ್ನು ಸಹ ಪೊಲೀಸರು ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಕರೆತಂದಿದ್ದಾರೆ.

ಸೆಕ್ಯೂರಿಟಿ ಗಾರ್ಡ್​​ ದೂರು:ದಿನಾಂಕ 9 ರಂದು ಸುಮ್ಮನಹಳ್ಳಿಯಲ್ಲಿ ಗಸ್ತು ಮಾಡುವ ವೇಳೆ ಮೋರಿ ಪಕ್ಕದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಬಿದ್ದಿರುವುದು ಕಂಡು ಬಂದಿತ್ತು. ಮೃತದೇಹದ ಮೇಲೆ ಗಾಯದ ಗುರುತುಗಳಿದ್ದವು. ಈ ಕುರಿತು ಮಾಹಿತಿ ನೀಡಿದೆನು ಎಂದು ಅಪಾರ್ಟ್​ಮೆಂಟ್​ವೊಂದರ ಸೆಕ್ಯೂರಿಟಿ ಗಾರ್ಡ್ ಪೊಲೀಸರಿಗೆ ನೀಡಿದ​ ದೂರಿನಲ್ಲಿ ತಿಳಿಸಿದ್ದಾರೆ.

ಪಟ್ಟಣಗೆರೆಯ ಶೆಡ್​​ಹೌಸ್​​ನಲ್ಲಿ ರೇಣುಕಾಸ್ವಾಮಿ ಕೊಲೆಯಾಗಿದ್ದು, ಬಳಿಕ ಶವವನ್ನು ಮೋರಿ ಪಕ್ಕದಲ್ಲಿ ಎಸೆಯಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇದನ್ನು ಓದಿ:ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಮಗನನ್ನ ಹತ್ಯೆ ಮಾಡಿದ ತಂದೆಯ ಬಂಧನ - Father Killing Son

Last Updated : Jun 11, 2024, 12:50 PM IST

ABOUT THE AUTHOR

...view details