ಬೆಂಗಳೂರು : ಬೋಜನ ವಿರಾಮದ ಬಳಿಕ ಸದನ ಆರಂಭವಾಗುತ್ತಿದ್ದಂತೆ ಮೂಡಾ ಹಗರಣದ ಸಂಬಂಧ ನಿಲುವಳಿ ಸೂಚನೆ ಮಂಡಿಸಲು ಅವಕಾಶ ನೀಡಬೇಕು ಎಂದು ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಪುನರ್ ಪರಿಶೀಲಿಸುವಂತೆ ಸಭಾಪತಿಗೆ ಮನವಿ ಮಾಡಿದರು.
ಈ ಬಗ್ಗೆ ಪ್ರಸ್ತಾಪಿಸಿದ ಸಭಾಪತಿ ಬಸವರಾಜ ಹೊರಟ್ಟಿ ಅವರು ನಿಲುವಳಿ ಸೂಚನೆ ತಿರಸ್ಕರಿಸಿದ್ದು, ಈ ಬಗ್ಗೆ ರೂಲಿಂಗ್ ನೀಡಲಾಗಿದೆ. ಈ ಬಗ್ಗೆ ಯಾರು ಮಾತನಾಡಕೂಡದು ಎಂದರು. ಬಿಜೆಪಿ ಸದಸ್ಯ ರವಿಕುಮಾರ್ ಮಾತನಾಡಿ, ಸಿಎಂ ಕುಟುಂಬವು ಅಕ್ರಮವಾಗಿ 14 ನಿವೇಶನಗಳನ್ನ ಪಡೆದುಕೊಂಡಿದ್ದು, ಈ ಬಗ್ಗೆ ಚರ್ಚೆಗೆ ನಿಲುವಳಿ ಸೂಚನೆ ಮಂಡನೆಗೆ ಅನುಮತಿ ನೀಡುವ ಬಗ್ಗೆ ಪುನರ್ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.
ನಿಲುವಳಿ ಸೂಚನೆ ಬಗ್ಗೆ ಈಗಾಗಲೇ ತಿರಸ್ಕೃತ ಮಾಡಲಾಗಿದೆ. ಈ ಬಗ್ಗೆ ಚರ್ಚೆಗೆ ಅವಕಾಶವಿಲ್ಲ ಎಂದು ಸಭಾಪತಿ ಹೇಳುತ್ತಿದ್ದಂತೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಸಿಎಂ ಅವರು ಕಾನೂನುಬಾಹಿರವಾಗಿ ಪತ್ನಿಗೆ 14 ನಿವೇಶನ ಹಂಚಿಕೆ ಮಾಡಿದ್ದಾರೆ. ಈ ಬಗ್ಗೆ ಚರ್ಚೆಯಾಗಬೇಕು ಎಂದು ಪಟ್ಟು ಹಿಡಿದರು.
ನಿಲುವಳಿ ಸೂಚನೆ ಮಂಡನೆ ಸಭಾಪತಿ ಪೀಠದಿಂದ ತಿರಸ್ಕೃತವಾಗಿದ್ದರೂ ಹಲವು ಬಾರಿ ಪುನರ್ ಪರಿಶೀಲಿಸಿ ನಿಲುವಳಿ ಮಂಡನೆಗೆ ಅವಕಾಶ ನೀಡಿದ ಉದಾಹರಣೆಗಳು ಈ ಸದನದಲ್ಲಿದೆ ಎಂದು ಸಿ ಟಿ ರವಿ ಹೇಳಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗೃಹ ಸಚಿವ ಪರಮೇಶ್ವರ್, ಸಭಾಪತಿಯವರು ಈ ಬಗ್ಗೆ ರೂಲಿಂಗ್ ನೀಡಿದರೂ ನಿಲುವಳಿ ಸೂಚನೆ ಮಂಡನೆಗೆ ಪಟ್ಟು ಹಿಡಿದಿರುವುದು ಸರಿಯಲ್ಲ ಎಂದರು.