ಬೆಂಗಳೂರು: 2025ರ ಜನವರಿ ಎರಡನೇ ವಾರದಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಮೆರಿಕ ಕಾನ್ಸುಲೇಟ್ ಕಚೇರಿ ಆರಂಭವಾಗಲಿದ್ದು, ಇನ್ಮುಂದೆ ವೀಸಾ ಪ್ರಕ್ರಿಯೆ ಮತ್ತಷ್ಟು ಸುಲಭವಾಗಲಿದೆ. ನಗರದಲ್ಲಿ ಕಾನ್ಸುಲೇಟ್ ಆರಂಭಿಸುವ ಕುರಿತು ಭಾರತದಲ್ಲಿರುವ ಅಮೆರಿಕ ರಾಯಭಾರಿ ಎರಿಕ್ ಗರ್ಸೆಟ್ಟಿ ಘೋಷಿಸಿದ್ದು, ಇದೊಂದು ಐತಿಹಾಸಿಕ ಹೆಜ್ಜೆಯಾಗಲಿದೆ ಎಂದು ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ತಿಳಿಸಿದರು.
ಬೆಂಗಳೂರಿನಲ್ಲಿ ಅಮೆರಿಕ ಕಾನ್ಸುಲೇಟ್ ಕಚೇರಿ ತೆರೆಯುವುದು ನಗರದ ಜನರ ದೀರ್ಘಕಾಲದ ಬೇಡಿಕೆ. 2019ರಿಂದಲೂ ಕಚೇರಿ ಆರಂಭಿಸುವಂತೆ ಮನವಿ ಮಾಡಲಾಗುತ್ತಿತ್ತು. ಭಾರತದ ಐಟಿ ಆದಾಯದಲ್ಲಿ ಬೆಂಗಳೂರಿನ ಕೊಡುಗೆ ಶೇ 40ರಷ್ಟಿದ್ದು, ಲಕ್ಷಾಂತರ ಟೆಕ್ ಉದ್ಯೋಗಿಗಳು ವಾಸವಿದ್ದಾರೆ. ಆದರೆ, ಅಮೆರಿಕ ವೀಸಾ ಸಂಬಂಧಿತ ಸೇವೆಗಳು ಬಂದಾಗ ಬೆಂಗಳೂರಿಗರು ನೆರೆಯ ಹೈದರಾಬಾದ್ ಅಥವಾ ಚೆನ್ನೈಗೆ ತೆರಳಬೇಕಿತ್ತು.
ಭಾರತ ಅಮೆರಿಕ ಸಂಬಂಧದಲ್ಲಿ ಬೆಂಗಳೂರು ನಿರ್ಣಾಯಕ ಪಾತ್ರ ಹೊಂದಿದ್ದು, ಇಲ್ಲಿ ಕಾಲ್ಸುಲೇಟ್ ಕಚೇರಿ ತೆಗೆಯುವ ಅಗತ್ಯತೆಯ ಕುರಿತು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರಿಗೆ ನವೆಂಬರ್ 2019ರಲ್ಲಿ ಪತ್ರ ಬರೆಯಲಾಗಿತ್ತು ಎಂದು ಇದೇ ವೇಳೆ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.