ಕೊಪ್ಪಳ:ಕೊಪ್ಪಳ ಲೋಕಸಭಾ ಟಿಕೆಟ್ ಕೈ ತಪ್ಪಿದ್ದಕ್ಕೆ ಅಸಮಾಧಾನಗೊಂಡಿದ್ದ ಸಂಗಣ್ಣ ಕರಡಿ ಸಿಟ್ಟು ತಣ್ಣಗಾಗಿದೆ. ಬಿಜೆಪಿ ನಾಯಕರ ಮೇಲೆ ಭರವಸೆ ಇಟ್ಟುಕೊಂಡು ಇಂದಿನಿಂದ ಬಿಜೆಪಿ ಅಭ್ಯರ್ಥಿ ಬಸವರಾಜ ಕ್ಯಾವಟರ್ ಪರ ಪ್ರಚಾರಕ್ಕೆ ತೆರಳುವುದಾಗಿ ಹೇಳಿದ್ದಾರೆ.
ಈ ಕುರಿತು ಕೊಪ್ಪಳದ ಅವರ ನಿವಾಸದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಂಗಣ್ಣ, "ಬೆಂಗಳೂರಿನಲ್ಲಿ ಬಿಜೆಪಿ ವರಿಷ್ಠರ ಜೊತೆ ಮಾತನಾಡಿದ್ದೇನೆ. ನನಗೆ ಅಧಿಕಾರ ಬೇಕು ಎಂಬ ಭಾವನೆ ಹೊಂದಿಲ್ಲ. ನನಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ಕಾರ್ಯಕರ್ತರು ಅಸಮಾಧಾನಗೊಂಡಿದ್ದರು. ಆ ನಿಟ್ಟಿನಲ್ಲಿ ನಾನು ರಾಜ್ಯ ನಾಯಕರನ್ನು ಭೇಟಿ ಮಾಡಿ ಮಾತನಾಡಬೇಕಾಯಿತು. ರಾಜ್ಯಸಭಾ ಸದಸ್ಯತ್ವ ನೀಡಬೇಕೋ. ವಿಧಾನಪರಿಷತ್ ಸದಸ್ಯತ್ವ ನೀಡಬೇಕೋ ಎನ್ನುವ ಕುರಿತು ಎರಡು ಬಾರಿ ಮುಖಂಡರು ಸಭೆ ನಡೆಸಿದ್ದಾರೆ".
"ನಾಳೆ ರಾಜ್ಯಕ್ಕೆ ಅಮಿತ್ ಶಾ ಬರುತ್ತಿದ್ದಾರೆ. ಅವರೊಂದಿಗೆ ಈ ಕುರಿತು ಮಾತನಾಡುವುದಾಗಿ ರಾಜ್ಯ ನಾಯಕರು ಹೇಳಿದ್ದಾರೆ. ನನಗೆ ಅವರ ಮೇಲೆ ಭರವಸೆ ಇದೆ. ಭರವಸೆಯ ಮೇಲೆ ಜೀವನ ಇರಬೇಕು. ಹಾಗೊಂದು ವೇಳೆ ವರಿಷ್ಠರು ಸ್ಥಾನಮಾನ ನೀಡದಿದ್ದರೆ ಕಾರ್ಯಕರ್ತರು ಮತ್ತೆ ಅಸಮಾಧಾನ ಗೊಳ್ಳಬಾರದು ಎಂದು ಕಾರ್ಯಕರ್ತರಿಗೆ ಮನವಿ ಮಾಡಿಕೊಳ್ಳುತ್ತೇನೆ".
"ವಿಶ್ವ ಕಂಡ ಶ್ರೇಷ್ಠ ನಾಯಕ ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗಬೇಕು. ಈ ನಿಟ್ಟಿನಲ್ಲಿ ನಾನು ಸಂಪೂರ್ಣವಾಗಿ ಬಿಜೆಪಿ ಅಭ್ಯರ್ಥಿ ಪರವಾಗಿ ಕೆಲಸ ಮಾಡುತ್ತೇನೆ. ಇಂದು ಕುಷ್ಟಗಿಯಲ್ಲಿ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗಿಯಾಗಲಿದ್ದೇನೆ. ನಾನು ಪ್ರಚಾರ ಮಾಡುವುದನ್ನು ಎದೆಬಗೆದು ತೋರಿಸಲು ಆಗುವುದಿಲ್ಲ. ಟಿಕೆಟ್ ವಂಚಿತವಾದ ನಂತರ ಸಹಜವಾಗಿ ಕಾಂಗ್ರೆಸ್ ಪಕ್ಷದವರು ನನ್ನೊಂದಿಗೆ ಮಾತನಾಡಿದ್ದಾರೆ. ಆದರೆ, ನಾನು ಈಗ ಬಿಜೆಪಿಯಲ್ಲಿಯೇ ಇದ್ದು ಪ್ರಚಾರ ಮಾಡುತ್ತೇನೆ"ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಇದನ್ನೂ ಓದಿ:ನಾಳೆ ಚನ್ನಪಟ್ಟಣಕ್ಕೆ ಅಮಿತ್ ಶಾ: ಏ.4ಕ್ಕೆ ನಾಮಪತ್ರ ಸಲ್ಲಿಸುವೆ: ಡಾ. ಸಿ.ಎನ್ ಮಂಜುನಾಥ್ - Dr C N Manjunath