ವಿಜಯಪುರ: ನನ್ನನ್ನು ಲಿಂಗಾಯತ ವಿರೋಧಿ ಎನ್ನುವವರ ನಾಲಿಗೆ ಕತ್ತರಿಸಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಖಾರವಾಗಿ ಮಾತನಾಡಿದ್ದಾರೆ. ವಿಜಯಪುರ ರೈಲು ನಿಲ್ದಾಣದಲ್ಲಿ ’ಒಂದು ನಿಲ್ದಾಣ ಒಂದು ಪ್ರಾಡಕ್ಟ್’ ಯೋಜನೆ ಕಾರ್ಯಕ್ರಮ ಉದ್ಘಾಟನೆ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಾನು 30 ವರ್ಷದ ರಾಜಕಾರಣದಲ್ಲಿ ಯಾವುತ್ತೂ ಜಾತಿ ರಾಜಕಾರಣ ಮಾಡಿಲ್ಲ. ಎಲ್ಲ ಜನರು ನಮ್ಮವರು ಎಂದು ಹಗಲು ರಾತ್ರಿ ಕೆಲಸ ಮಾಡಿದ್ದೇನೆ. ಕೆಲವರು ಮಾಧ್ಯಮಗಳ ಮೂಲಕ ನಾನು ಲಿಂಗಾಯತ ವಿರೋಧಿ ಎನ್ನುತ್ತಿದ್ದಾರೆ. ನನ್ನನ್ನು ಲಿಂಗಾಯತ ವಿರೋಧಿ ಎಂದವರ ನಾಲಿಗೆ ಕತ್ತರಿಸಬೇಕು, ದೇವರೇ ಅವರ ನಾಲಿಗೆಯನ್ನ ಕತ್ತರಿಸಲಿ ಎಂದು ಆಕ್ರೋಶ ಭರಿತವಾಗಿ ಮಾತನಾಡಿದರು. ನಾನು ಲಿಂಗಾಯತ ವಿರೋಧಿಯಲ್ಲಾ, ನನಗೆ ಎಲ್ಲರೂ ಬೇಕು. ಒಂದು ಸಮಾಜವನ್ನು ಮಾತ್ರ ಹಿಡಿದುಕೊಂಡು ಹೋದರೆ ರಾಜಕಾರಣ ಮಾಡಲಾಗಲ್ಲಾ, ಎಲ್ಲ ಸಮಾಜದವರ ಸಹಾಯ ಸಹಕಾರವೂ ಬೇಕು ಎಂದರು.
ನಂತರ ತಮ್ಮ ಆರೋಗ್ಯದ ವಿಚಾರವಾಗಿ ಪ್ರತಿಕ್ರಿಯಿಸಿ, ನನ್ನ ಆರೋಗ್ಯದ ಕುರಿತು ಕೆಲ ನಮ್ಮವರೇ ಸುಖಾಸುಮ್ಮನೆ ವದಂತಿ ಹರಡುತ್ತಿದ್ದಾರೆ. ನಾನು ಬದುಕುವುದಿಲ್ಲ, ಆಸ್ಪತ್ರೆಯಲ್ಲಿದ್ದೇನೆ ಎಂದಿದ್ದಾರೆ. ಎಲ್ಲರಿಗೂ ಅನಾರೋಗ್ಯವಾದಂತೆ ಜ್ವರ ಬಂದಂತೆ ನನಗೂ ಜ್ವರ ಬಂದಿತ್ತು. ನನ್ನ ಆರೋಗ್ಯದ ಬಗ್ಗೆ ಹೈಕಮಾಂಡ್ಗೂ ದೂರು ಕೊಟ್ಟಿದ್ದಾರೆ. ಅವರನ್ನು ದೇವರೇ ನೋಡಿಕೊಳ್ಳುತ್ತಾನೆ. ನನ್ನ ಆರೋಗ್ಯ ಕೆಟ್ಟಿಲ್ಲ, ಬಹಳ ಸದೃಡವಾಗಿದ್ದೇನೆ. ನನ್ನ ಜೀವನದಲ್ಲಿ ರಾಜಕೀಯ ಮಾಡಿದವರಿಗೂ ವಿರೋಧ ಮಾಡಿಲ್ಲ. ನನ್ನ ಆರೋಗ್ಯದ ಬಗ್ಗೆ ಯಾರು ಏನೂ ಬೇಕಾದರೂ ಅಂದುಕೊಳ್ಳಲಿ, ನಾನು ಮಾತ್ರ ಪಕ್ಷದ ನಿರ್ಧಾರಕ್ಕೆ ಬದ್ದನಾಗಿದ್ದೇನೆ. ಮೂರು ಬಾರಿ ವಿಜಯಪುರ ಸಂಸದನಾಗಿ ಉತ್ತಮ ಕೆಲಸ ಮಾಡಿದ್ದೇನೆ. ಇಂದು ಅಥವಾ ನಾಳೆ ಲೋಕಸಭಾ ಟಿಕೆಟ್ ಫೈನಲ್ ಆಗುತ್ತದೆ. ನನ್ನನ್ನು ಬಿಟ್ಟು ಬೇರೆ ಯಾರಿಗೂ ಟಿಕೆಟ್ ನೀಡಲ್ಲ ಎಂದು ಪಕ್ಷವೇ ಸ್ಪಷ್ಟಪಡಿಸಿದೆ ಎಂದು ತಿಳಿಸುವ ಮೂಲಕ ಈ ಬಾರಿ ತಮಗೆ ಟಿಕೆಟ್ ಫಿಕ್ಸ್ ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದರು.