ಮೈಸೂರು:ನನಗೆ ಹೈಕಮಾಂಡ್ ಟಿಕೆಟ್ ಕೊಡುತ್ತಾರೆ ಎಂಬ ವಿಶ್ವಾಸ ಇದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿರುವ ಸಂಸದ ಪ್ರತಾಪ್ ಸಿಂಹ, 'ನನಗೆ ಈ ಕ್ಷಣಕ್ಕೂ ಕೂಡ ವಿಶ್ವಾಸ ಇದೆ. ಖಂಡಿತ ನಾನು 10 ವರ್ಷಗಳಲ್ಲಿ ಮಾಡಿರುವಂತಹ ಕೆಲಸ, ಕಾರ್ಯಕರ್ತರ ಜೊತೆ ಇರುವಂಥದ್ದು, ಸಂಘಟನೆ ಮತ್ತು ಸಿದ್ಧಾಂತಕ್ಕೆ ನಾನು ನಿಂತಿರುವ ರೀತಿ ಪರಿಗಣಿಸಿ ನನಗೆ ಟಿಕೆಟ್ ಕೊಡುತ್ತಾರೆ ಎಂಬ ವಿಶ್ವಾಸ ಇದೆ. ನಮಗೆ ಟಿಕೆಟ್ ನೀಡುವಾಗ ನಾವು ಮಾಡಿರುವಂತಹ ಕೆಲಸಗಳನ್ನು ಪರಿಗಣನೆಗೆ ತೆಗೆದುಕೊಂಡು ಟಿಕೆಟ್ ಕೊಡಬೇಕಾಗುತ್ತದೆ' ಎಂದರು.
ನನಗೆ ನಿಶ್ಚಿತವಾಗಿಯೂ ನಮ್ಮ ಕೇಂದ್ರದ ಹೈಕಮಾಂಡ್ ಟಿಕೆಟ್ ನೀಡುತ್ತದೆ ಎಂಬ ವಿಶ್ವಾಸ ಇದೆ. ಒಂದು ವೇಳೆ ಟಿಕೆಟ್ ನೀಡದಿದ್ದರೂ ಕೂಡ ನಾನು ನನ್ನ ಕಾರ್ಯಕರ್ತರಿಗಾಗಿ, ಪಕ್ಷಕ್ಕಾಗಿ ದುಡಿಯುತ್ತೇನೆ. ಒಂದು ವೇಳೆ ಯದುವೀರ್ ಅವರಿಗೆ ಟಿಕೆಟ್ ನೀಡಿದರೂ ನಾನು ತುಂಬು ಹೃದಯದಿಂದ ಶ್ಲಾಘನೆ ಮಾಡುತ್ತೇನೆ ಎಂದು ತಿಳಿಸಿದರು.
ನಿಜವಾಗಿಯೂ ಯದುವೀರ್ ಅವರಿಗೆ ಟಿಕೆಟ್ ಕೊಡುವುದಾದರೆ ಸ್ವಾಗತ. ಅರಮನೆಯಲ್ಲಿ ಇರುವ ರಾಜರು ಪ್ರಜೆಗಳ ರೀತಿ ಬದುಕಲು ಬಂದರೆ ಅದನ್ನು ಶ್ಲಾಘಿಸಬೇಕಾಗುತ್ತದೆ. ಇದರಿಂದ ತುಂಬಾ ಅನುಕೂಲಗಳಿವೆ ಎಂದರು. ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬೀದಿಗಳಿದು ಹೋರಾಟಕ್ಕೆ ಮುಂದಾದರೇ ಸಂತೋಷ. ನಮ್ಮ ಮಹಾರಾಜರ ಮನವೊಲಿಸಿ ರಾಜಕೀಯಕ್ಕೆ ತಂದ ನಮ್ಮ ಮುಖಂಡರಿಗೂ ಧನ್ಯವಾದ ಎಂದು ಪ್ರತಾಪ್ ಸಿಂಹ ನುಡಿದರು. ನನಗೆ ಟಿಕೆಟ್ ಸಿಗದೆ ಇದ್ದರು, ಪಕ್ಷದ ಕಾರ್ಯಕರ್ತನಾಗಿ ದುಡಿಯಲು ಸಿದ್ಧನಿದ್ದೇನೆ. ನಾನು ಎಂದಿಗೂ ಪಲಾಯನವಾದಿಯಲ್ಲ, ಎಲ್ಲಿಗೂ ಓಡಿ ಹೋಗುವುದಿಲ್ಲ. ನಾನು ಜನರ ಮಧ್ಯೆಯೇ ಇರುತ್ತೇನೆ, ಮುಂದೆ ಯಾರೂ ಎಂಪಿ ಆಗಿರುತ್ತಾರೆಯೋ ಗೊತ್ತಿಲ್ಲ, ನಾನು ನಿಮ್ಮ ಜೊತೆ ಇರುತ್ತೇನೆ ಎಂದು ಪ್ರತಾಪ್ ಸಿಂಹ ತಮಗೆ ಟಿಕೆಟ್ ಸಿಗುವುದೇ ಎಂಬ ವಿಷಯವಾಗಿ ಪ್ರತಿಕ್ರಿಯಿಸಿದರು.
'ನಾನು ಭಾರತೀಯ ಜನತಾ ಪಕ್ಷದಲ್ಲಿರುವಂತಹ 25 ಸಂಸದರಲ್ಲಿ ನಾನು ಯಾರಿಗೆ ಕಡಿಮೆ ಇದ್ದೇನೆ?. ಪ್ರಧಾನಿ ನರೇಂದ್ರ ಮೋದಿ ಬಗ್ಗೆ ತಾತ್ಸಾರ ಮಾಡಿದಾಗ ಅವರ ವಿರುದ್ಧ ಖಡಾಖಂಡಿತವಾಗಿ ಮಾತನಾಡಿರುವವರಲ್ಲಿ ದಕ್ಷಿಣ ಭಾರತದಲ್ಲಿ ನಾನು ಮಾತ್ರ. ಹಾಗಾದರೆ ಇದು ನನಗೆ ದೌರ್ಬಲ್ಯವೇ?. 10 ವರ್ಷದಲ್ಲಿ ನಾನು ಮಾಡಿರುವಷ್ಟು ಅಭಿವೃದ್ಧಿ ಕೆಲಸ ಯಾವ ಸಂಸದರೂ ಮಾಡಿಲ್ಲ. ಜನರಿಗೆ ಇನ್ನೇನು ಬೇಕು?. ಎಲ್ಲಾ ಕೆಲಸ ಮಾಡಿದ್ದೇನೆ', ಎಂದರು.
ಈಗಲೂ ಹೇಳುತ್ತೇನೆ ಮತ್ತೊಮ್ಮೆ ನನಗೆ ಬಿಜೆಪಿ ಟಿಕೆಟ್ ಕೊಟ್ಟರೆ 3 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ಹೇಳುವ ಮೂಲಕ ಸಂಸದ ಪ್ರತಾಪ್ ಸಿಂಹ ಭಾವುಕರಾದರು.
ಇದನ್ನೂ ಓದಿ:ಇಂದು ಸಂಜೆ ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ ಸೇರ್ಪಡೆ: ಉಡುಪಿ-ಚಿಕ್ಕಮಗಳೂರು ಕೈ ಟಿಕೆಟ್ ಬಹುತೇಕ ಫಿಕ್ಸ್