ಖಾಯಂ ಮನೆ ನಿರ್ಮಿಸುವ ಉದ್ದೇಶದಿಂದ ಸೈಟ್ ನೋಡುತ್ತಿದ್ದೇನೆ: ಬೆಳಗಾವಿ ಬಾಡಿಗೆ ಮನೆ ಖಾಲಿ ಮಾಡಿದ ಶೆಟ್ಟರ್ ಹೇಳಿಕೆ (ETV Bharat) ಬೆಳಗಾವಿ:ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಬಾಡಿಗೆ ಮನೆ ಮಾಡಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗೆದ್ದ ಬಳಿಕ ಮನೆಯನ್ನು ಖಾಲಿ ಮಾಡಿದ್ದಾರೆ. ಶೆಟ್ಟರ್ ಈ ನಡೆಯು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಬೆಳಗಾವಿ ನಗರದ ಕುಮಾರಸ್ಚಾಮಿ ಲೇಔಟ್ನಲ್ಲಿದ್ದ ಬಾಡಿಗೆ ಮನೆಯನ್ನು ಸಂಸದ ಜಗದೀಶ್ ಶೆಟ್ಟರ್ ಖಾಲಿ ಮಾಡಿದ್ದಾರೆ. ಶೆಟ್ಟರ್ ವಾಸವಿದ್ದ ಮನೆಯನ್ನು ಮಾಲೀಕ ಬೇರೆಯವರಿಗೆ ಬಾಡಿಗೆ ನೀಡಿದ್ದಾರೆ. ಚುನಾವಣೆ ಪೂರ್ವದಲ್ಲಿ ಬಾಡಿಗೆ ಪಡೆದು, ಪತ್ನಿ, ಪುತ್ರ ಸೇರಿ ಕುಟುಂಬ ಸಮೇತ ಬೆಳಗಾವಿಗೆ ಜಗದೀಶ್ ಶೆಟ್ಟರ್ ಶಿಫ್ಟ್ ಆಗಿದ್ದರು. ಯುಗಾದಿ ನಂತರದಲ್ಲಿ ಪೂಜೆಯೊಂದಿಗೆ ಮನೆಯನ್ನು ಪ್ರವೇಶಿಸಿದ್ದರು.
ಶೆಟ್ಟರ್ ಹೊರಗಿನವರು, ಅವರಿಗೆ ಬೆಳಗಾವಿಯಲ್ಲಿ ಎಲ್ಲಿದೆ ಅಡ್ರೆಸ್ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶ್ನಿಸಿದ್ದರು. ಲೋಕಸಭಾ ಚುನಾವಣೆಯಲ್ಲಿ ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ನಾನು ಬೆಳಗಾವಿಯಲ್ಲಿ ಮನೆ ಮಾಡಿದ್ದು, ಖಾಯಂ ವಿಳಾಸ ಇರುವುದಾಗಿ ಜಗದೀಶ್ ಶೆಟ್ಟರ್ ತಿರುಗೇಟು ಕೊಟ್ಟಿದ್ದರು. ಆದರೆ, ಈಗ ಬಾಡಿಗೆ ಮನೆ ಖಾಲಿ ಮಾಡಿದ್ದು, ಈ ಸಂಬಂಧ ಆ ಮನೆಯಲ್ಲಿ ಸದ್ಯ ಬಾಡಿಗೆ ಇರುವ ವ್ಯಕ್ತಿ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಂಸದ ಜಗದೀಶ್ ಶೆಟ್ಟರ್, ''ಒಂದು ಖಾಯಂ ಮನೆ ನಿರ್ಮಾಣ ಮಾಡುವ ಉದ್ದೇಶದಿಂದ ಸೈಟ್ ನೋಡುತ್ತಿದ್ದೇನೆ. ಆದಷ್ಟು ಬೇಗನೆ ಸೈಟ್ ಖರೀದಿಸಿ, ಮನೆ ಕಟ್ಟುವ ಕೆಲಸ ಆರಂಭಿಸುತ್ತೇನೆ. ಜನರಿಗೆ ಲಭ್ಯವಾಗುವ ನಿಟ್ಟಿನಲ್ಲಿ ವಾರದಲ್ಲಿ ಮೂರ್ನಾಲ್ಕು ದಿನ ಬೆಳಗಾವಿಯಲ್ಲೇ ಇರುವ ಜೊತೆಗೆ ಪ್ರತಿ ತಾಲ್ಲೂಕಿಗೂ ಭೇಟಿ ನೀಡುವ ಕೆಲಸ ಮಾಡುತ್ತೇನೆ'' ಎಂದ ಅವರು, ವಾಸ್ತು ಸರಿ ಇರಲಿಲ್ಲವಾ ಎಂಬ ಪ್ರಶ್ನೆಗೆ ಎಲ್ಲವೂ ಸರಿ ಇದೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಇದನ್ನೂ ಓದಿ:ಪೂರ್ವಾನುಮತಿ ಬಗ್ಗೆ ರಾಜ್ಯಪಾಲರ ಹಾಗೆ ನಾವೂ ಕಾದು ನೋಡುತ್ತೇವೆ: ಗೃಹ ಸಚಿವ ಪರಮೇಶ್ವರ್ - Dr G Parameshwar