ಸಂಸದ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಪ್ರತಿಕ್ರಿಯೆ (ETV Bharat) ಉಡುಪಿ:ಜಿಲ್ಲೆಯಾದ್ಯಂತ ಕಳೆದೆರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಸಂಸದ, ಜಿಲ್ಲಾಧಿಕಾರಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಹಾಗು ಸಹಾಯಕ ಇಂಜಿನಿಯರ್ ಮಂಗಳವಾರ ಪ್ರವಾಹಪೀಡಿತ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಿಲ್, ಕುಂದಾಪುರ ಸಹಾಯಕ ನಿರ್ದೇಶಕ ರಶ್ಮಿ, ಹೆಚ್ಚುವರಿ ಪೊಲೀಸ್ ಅಧಿಕ್ಷಕ ಎಸ್.ಸಿದ್ದಲಿಂಗಪ್ಪ ಅವರು ಜಿಲ್ಲೆಯಲ್ಲಿ ಕಡಿತಗೊಂಡಿರುವ ಮಾರ್ಗಗಳನ್ನು ಪರಿಶೀಲಿಸಿದರು.
ಬಳಿಕ ಮಾತನಾಡಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ, "ಬನ್ನಾಡಿ, ಉಪ್ಲಾಡಿ ಪ್ರದೇಶ ಜಲಾವೃತವಾಗಿದೆ. ನಾನು ಮತ್ತು ಜಿಲ್ಲಾಧಿಕಾರಿ ನಿರಂತರ ಸಂಪರ್ಕದಲ್ಲಿರುತ್ತೇವೆ. ರಸ್ತೆಯ ಎರಡು ಬದಿಗಳು ಜಲಾವೃತವಾಗಿರುವುದರಿಂದ ಸಂಪರ್ಕ ಕಡಿತಗೊಳಿಸಲಾಗಿದೆ. ಆರರಿಂದ ಎಂಟು ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ತಲುಪಿಸಲಾಗಿದೆ. ಜಲಾವೃತವಾಗಿರುವ ಪ್ರದೇಶದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಪ್ರಸ್ತಾವನೆ ಸಲ್ಲಿಸಿ ಹೂಳೆತ್ತುವ ಕಾರ್ಯ ಮಾಡುತ್ತೇವೆ. ಇಲ್ಲಿರುವ ಜನರು ಜಾಗರೂಕತೆಯಿಂದ ಓಡಾಟ ಮಾಡಬೇಕು. ನೆರೆ ಹಾವಳಿಯಲ್ಲಿರುವ ಜನರನ್ನು ರಕ್ಷಿಸುವ ಕಾರ್ಯವನ್ನು ಜಿಲ್ಲಾಡಳಿತ ಮಾಡುತ್ತಿದೆ. ಆದಷ್ಟು ಜನರು ಕೂಡಾ ಸುರಕ್ಷಿತವಾಗಿರಿ" ಎಂದರು.
"ರಾತ್ರಿ ವೇಳೆ 200 ಮಿ.ಮೀಟರ್ ಮಳೆಯಾಗಿ ಕೃತಕ ನೆರೆ ಉಂಟಾಗಿದೆ. ನೆರೆಯಲ್ಲಿರುವ ಜನರನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾವಣೆ ಮಾಡಲು ಕಂದಾಯ ಇಲಾಖೆಗೆ ಸೂಚನೆ ನೀಡಿದ್ದೇವೆ. ಅಗತ್ಯ ಸೌಲಭ್ಯ ನೀಡಲಾಗುತ್ತದೆ. ಕೆಟ್ಟು ಹೋಗಿರುವ ರಸ್ತೆಗಳಲ್ಲಿ ಸಾರ್ವಜನಿಕರು ಓಡಾಟ ಮಾಡಬೇಡಿ. ಕಂಟ್ರೋಲ್ ರೂಮ್ 24 ಗಂಟೆಗಳ ಕಾಲ ಕೆಲಸ ಮಾಡುತ್ತಿದೆ. ಸಾರ್ವಜನಿಕರು ತೊಂದರೆಯಲ್ಲಿದ್ದಾಗ 1077 ನಂಬರ್ಗೆ ಕರೆ ಮಾಡಿ. ಹಾನಿಯಾಗುವ ಸ್ಥಿತಿಯಲ್ಲಿರುವ ಮನೆಯಲ್ಲಿ ಯಾರೂ ಉಳಿದುಕೊಳ್ಳಬೇಡಿ" ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದರು.
ನೆರೆ ಹಾವಳಿ ಪ್ರಮಾಣದ ಏರಿಕೆಯಿಂದಾಗಿ ಹಾಲಾಡಿ, ಶಿರಿಯಾರ, ಸಾಬ್ರೈಕಟ್ಟೆ, ತೆಕ್ಕಟ್ಟೆ, ಕೋಟ, ಗಿಳಿಯಾರು, ಸಾಲಿಗ್ರಾಮ ಭಾಗದಲ್ಲಿನ ಮನೆಗಳು ಜಲಾವೃತವಾಗಿವೆ. ಕೃಷಿಭೂಮಿಗಳು ಮುಳುಗಿವೆ. ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಹಾಲಾಡಿ ಮುದೂರಿ ಎಂಬಲ್ಲಿಗೆ ಸಂಪರ್ಕಿಸುವ ಚೋರಾಡಿ ಬರಣಕೊಳಕಿ ಸೇತುವೆ ಕುಸಿದು ಬಿದ್ದು ಗ್ರಾಮಗಳ ನಡುವಿನ ಸಂಪರ್ಕ ಸ್ಥಗಿತಗೊಂಡಿದೆ.
ಮೆಸ್ಕಾಂಗೆ ನಷ್ಟ:ಬಿರುಗಾಳಿಯ ಆರ್ಭಟಕ್ಕೆ ಜಿಲ್ಲೆಯಲ್ಲಿ ಒಟ್ಟು 155 ವಿದ್ಯುತ್ ಕಂಬಗಳು ಧರೆಗುರುಳಿದ್ದು 2.15 ಕಿ.ಮೀ. ಉದ್ದದ ವಿದ್ಯುತ್ ತಂತಿ ಮತ್ತು ಆರು ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿಯಾಗಿದೆ. ಮೆಸ್ಕಾಂಗೆ ಅಂದಾಜು 25.42 ಲಕ್ಷ ರೂ. ನಷ್ಟವಾಗಿದೆ ಎಂದು ಇಲಾಖೆ ತಿಳಿಸಿದೆ.
ಇದನ್ನೂ ಓದಿ:ಉತ್ತರ ಕನ್ನಡದಲ್ಲಿ ಭಾರೀ ಮಳೆ: 22 ಮನೆಗಳಿಗೆ ಹಾನಿ, ಕಾಳಜಿ ಕೇಂದ್ರಗಳಲ್ಲಿ ಜನರಿಗೆ ಆಶ್ರಯ - Uttara Kannada Rain