ಕರ್ನಾಟಕ

karnataka

ETV Bharat / state

ನಮ್ಮ ತಾಯಿಯದು ಸಹಜ ಸಾವು, ಸಚಿವ ಭೈರತಿ ಸುರೇಶರದ್ದು ಆಚಾರವಿಲ್ಲದ ನಾಲಿಗೆ: ಬಿ.ವೈ. ರಾಘವೇಂದ್ರ ಕಿಡಿ

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪತ್ನಿ ಮೈತ್ರಾದೇವಿ ಸಾವಿನಲ್ಲಿ ಶೋಭಾ ಕರಂದ್ಲಾಜೆ ಪಾತ್ರ ಇದೆ ಎಂದು ಹೇಳಿಕೆ ನೀಡಿದ ಸಚಿವ ಭೈರತಿ ಸುರೇಶ್ ವಿರುದ್ಧ ಸಂಸದ ಬಿ.ವೈ. ರಾಘವೇಂದ್ರ ಪತ್ರಿಕಾ ಹೇಳಿಕೆ ನೀಡಿದ್ದಾರೆ.

By ETV Bharat Karnataka Team

Published : 4 hours ago

ಬಿ.ವೈ. ರಾಘವೇಂದ್ರ ಸಚಿವ ಭೈರತಿ ಸುರೇಶ್ ವಿರುದ್ಧ ಕಿಡಿ
ಬಿ.ವೈ. ರಾಘವೇಂದ್ರ ಸಚಿವ ಭೈರತಿ ಸುರೇಶ್ ವಿರುದ್ಧ ಕಿಡಿ (ETV Bharat)

ಶಿವಮೊಗ್ಗ:ನಮ್ಮ ತಾಯಿ ಮೈತ್ರಾ ದೇವಿ ಅವರದು ಸಹಜ ಸಾವು. ಅವರ ಸಾವಿನ ಕುರಿತು ಮಾತನಾಡಿ ಸಚಿವ ಭೈರತಿ ಸುರೇಶ್ ಅವರು ತಮ್ಮದು ಆಚಾರ ವಿಲ್ಲದ ನಾಲಿಗೆ ಎಂದು ಸಾಬೀತು ಪಡಿಸಿದ್ದಾರೆಂದು ಸಂಸದ ಬಿ.ವೈ. ರಾಘವೇಂದ್ರ ಅವರು ಖಾರವಾಗಿಯೇ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಸಂಸದರ ಪತ್ರಿಕಾ ಹೇಳಿಕೆ ಹೀಗಿದೆ: "ನಗರಾಭಿವೃದ್ಧಿ ಸಚಿವರಾದ ಬೈರತಿ ಸುರೇಶ್ ಅವರೇ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ದಲ್ಲಿ ನಡೆದಿರುವ ಅಕ್ರಮ ನಿವೇಶನ ಹಂಚಿಕೆ ಪ್ರಕರಣದಲ್ಲಿ ನಿಮ್ಮ ಭ್ರಷ್ಟ ನಾಯಕರನ್ನು ಉಳಿಸಿಕೊಳ್ಳಲು, ಪ್ರಕರಣದ ದಿಕ್ಕನ್ನು ಬೇರೆ ಕಡೆ ತಿರುಗಿಸಲು ನನ್ನ ಪೂಜ್ಯ ತಾಯಿಯವರ ಸಹಜ ಸಾವನ್ನು ಆಚಾರವಿಲ್ಲದ, ತಮ್ಮ ಎಲುಬಿಲ್ಲದ ನಾಲಿಗೆಯ ಮೂಲಕ ಕಾಂಗ್ರೆಸ್​ ಪಕ್ಷದ ಮೂಲ ರಾಜಕೀಯ ಸಂಸ್ಕೃತಿಯಾದ ಲಜ್ಜೆಗೆಟ್ಟ ರಾಜಕಾರಣಕ್ಕೆ ಬಳಸಿಕೊಂಡಿರುವುದು ಆಕ್ಷೇಪಾರ್ಹ".

"ಇದು ಅವರ ಸ್ಮರಣೆಗೆ ಮಾತ್ರವಲ್ಲ, ಮಾನವೀಯತೆಯ ಮೂಲ ಮೌಲ್ಯಗಳಿಗೂ ಧಕ್ಕೆ ತರುವಂತಹ ಕೃತ್ಯ. ನಾನು ಇದನ್ನು ತೀವ್ರವಾಗಿ ಖಂಡಿಸುತ್ತೇನೆ. ವೈಯಕ್ತಿಕ ನೋವನ್ನು ರಾಜಕೀಯ ಪ್ರಯೋಜನಕ್ಕಾಗಿ ಬಳಸುವುದು ಜನತೆಗೂ, ನಮ್ಮ ಪ್ರಜಾಪ್ರಭುತ್ವದ ಮೌಲ್ಯಗಳಿಗೂ ಕಪ್ಪುಚುಕ್ಕೆ ಇಟ್ಟಂತೆಯೇ ಸರಿ. ಈ ರೀತಿಯ ನೀಚ ರಾಜಕಾರಣವನ್ನು ಯಾರು ಕೂಡ ಮಾಡಬಾರದು, ಇದನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು, ಅಳವಡಿಸಿಕೊಳ್ಳಬಾರದು. ಇದು ನಿಮಗೆ ಖಂಡಿತಾ ಶೋಭೆ ತರುವುದಿಲ್ಲ. ಇಂತಹ ಲಜ್ಜಾಸ್ಪದ ರಾಜಕೀಯದ ಮುಖವಾಡಗಳನ್ನು ನಾನು ಧಿಕ್ಕರಿಸುತ್ತೇನೆ. ಈ ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆಯುವಂತೆ ಆಗ್ರಹಿಸುತ್ತೇನೆ. ಇಲ್ಲವಾದಲ್ಲಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸುವ ಎಚ್ಚರಿಕೆ ಈ ಮೂಲಕ ತಮಗೆ ನೀಡುತ್ತಿದ್ದೇನೆ" ಎಂದಿದ್ದಾರೆ.

ಬಿ.ವೈ.ವಿಜಯೇಂದ್ರ ಕಿಡಿ:ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೂಡ X ಪೋಸ್ಟ್​ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ''ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಎನ್ನುವುದು ಗಾದೆ ಮಾತು, ಆದರೆ ನೀವು ಹಾಗೂ ನಿಮ್ಮ ಮುಖ್ಯಮಂತ್ರಿಗಳ ಮೈಯೆಲ್ಲಾ ಭ್ರಷ್ಟತೆಯ ಹುಣ್ಣು ತುಂಬಿಕೊಂಡು ನಾರುತ್ತಿದೆ. ಒಂದರ ಮೇಲೊಂದು ತನಿಖೆಗಳು ನಡೆಯುತ್ತಲೇ ಇವೆ, ಕರ್ನಾಟಕದ ಇತಿಹಾಸದಲ್ಲಿ ಅನೈತಿಕತೆಯನ್ನು ಕತ್ತಿಗೆ ಕಟ್ಟಿಕೊಂಡು ಸರ್ಕಾರ ನಡೆಸುತ್ತಿರುವ ಇತಿಹಾಸ ನಿರ್ಮಿಸಿದ ದಾಖಲೆ ನಿಮಗೆ ಹಾಗೂ ನಿಮ್ಮ ಮುಖ್ಯಮಂತ್ರಿಗೇ ಸಲ್ಲುತ್ತದೆ'' ಕಿಡಿಕಾರಿದ್ದಾರೆ.

''ನೀವು ನಡೆಸಿದ ಕಡು ಭ್ರಷ್ಟ ಹಗರಣಗಳಿಗೆ ಕನಸು ಮನಸ್ಸಿನಲ್ಲೂ ಎಣಿಸದ ರೀತಿಯಲ್ಲಿ ತನಿಖೆಗಳು ನಿಮ್ಮ ಕೊರಳು ಸುತ್ತಿ ಕೊಳ್ಳುತ್ತಿವೆ ಇದರಿಂದ ತೀವ್ರ ಹತಾಶಗೊಂಡಿರುವ ನೀವು ನಮ್ಮ ತಾಯಿಯವರ ಆಕಸ್ಮಿಕ ಸಾವಿನ ವಿಚಾರಗಳನ್ನು ಮುಂದೆ ತಂದು ಮಾತನಾಡುತ್ತಿರುವುದು ನಿಮ್ಮ ಅಸಭ್ಯ ಹಾಗೂ ಸಂಸ್ಕೃತಿ ಹೀನ ನಡವಳಿಕೆಯನ್ನು ಪ್ರತಿಬಿಂಬಿಸುತ್ತಿದೆ'' ಟೀಕಿಸಿದ್ದಾರೆ.

''ಮಾನ್ಯ ಶೋಭಾ ಕರಂದ್ಲಾಜೆ ಅವರು ಮಾಡಿರುವ ಆರೋಪಗಳಿಗೆ ಉತ್ತರಿಸಲಾಗದ ನೀವು ಹೇಡಿಯಂತೆ ಕಪೋಲ ಕಲ್ಪಿತ ಆರೋಪಗಳನ್ನು ಮಾಡಿ ವಿಷಯಾಂತರ ಮಾಡಲು ಹೊರಟಿರುವ ನಿಮ್ಮ ನಡೆ "ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಗುಣವ ಬಿಡು ನಾಲಿಗೆ" ಎಂಬ ದಾಸರ ಪದವನ್ನು ನಿಮಗೆ ನೆನಪಿಸಿ ಹೇಳಬೇಕಾಗಿದೆ. ಮಾಡಿದ್ದುಣ್ಣೋ ಮಹರಾಯ ಎಂಬ ಮಾತಿನಂತೆ ಅತೀ ಶೀಘ್ರದಲ್ಲೇ ನಿಮ್ಮ ಹಾದಿ ಕೃಷ್ಣನ ಜನ್ಮಸ್ಥಾನದತ್ತ ಸಾಗಲಿದೆ'' ಎಂದಿದ್ದಾರೆ.

ಛಲವಾದಿ ನಾರಾಯಣಸ್ವಾಮಿ ಖಂಡನೆ (ETV Bharat)

ಛಲವಾದಿ ನಾರಾಯಣಸ್ವಾಮಿ ಖಂಡನೆ: ಸಚಿವ ಭೈರತಿ ಸುರೇಶ್ ಮೈತ್ರಾ ದೇವಿ ಅವರ ಸಾವಿನ ಬಗ್ಗೆ ಹೇಳಿರುವ ಹೇಳಿಕೆಗೆ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. "ಕೇವಲ ಮುಡಾ ಹಗರಣದ ಕಡತಗಳು ಸಚಿವ ಬೈರತಿ ಸುರೇಶ್ ಅವರು ಹೆಲಿಕಾಪ್ಟರ್​ನಲ್ಲಿ ಹೊತ್ತು ತಂದಿದ್ದಾರೆಂಬ ಸರ್ವರೂ ಮಾತನಾಡುವ ವಿಷಯವನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ ಮಾತ್ರಕ್ಕೆ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಶ್ರೀಮತಿ ದಿ. ಮೈತ್ರಾದೇವಿ ಯವರ ನಿಧನದಲ್ಲಿ ಶೋಭಾ ಕರಂದ್ಲಾಜೆ ಅವರ ಕೈವಾಡ ಇದೆ ಎಂಬ ಅವಹೇಳನ ಮತ್ತು ಮಾನಹಾನಿ ಹೇಳಿಕೆ ನೀಡಿರುವ ಬೈರತಿ ಸುರೇಶ್​ ಅವರು ಸ್ತ್ರೀ ನಿಂದಕ ಹಾಗೂ ಹೊಲಸು ಅಭಿವೃಚಿಯ ನೀಚ ರಾಜಕಾರಣಿಯಾಗಿದ್ದಾರೆ. ಒಂದು ಹೇಳಿಕೆ ನೀಡಿದ ಕಾರಣ ಮಹಿಳೆಯರ ಮಾನಹಾನಿ ಮಾಡುವಂಥ ಇಂತಹ ಹೇಳಿಕೆ ನೀಡಿದ್ದು ಖಂಡನೀಯ".

"ಸುರೇಶ್ ಅವರ ಹೇಳಿಕೆ ಮಾನಹಾನಿಕರವಾಗಿದ್ದು, ಇಂತಹ ವ್ಯಕ್ತಿಗಳು ಸಚಿವ ಸ್ಥಾನದಲ್ಲಿ ಮುಂದುವರಿಯಲು ಯೋಗ್ಯರಲ್ಲ ಎಂಬುದನ್ನು ಬೈರತಿ ಸುರೇಶ್ ಅವರು ಸಾಬೀತು ಪಡಿಸಿದ್ದಾರೆ. ಇಂತಹ ಬೇಜವಾಬ್ದಾರಿ ಹೇಳಿಕೆ ಕಾಂಗ್ರೆಸ್ ಪಕ್ಷದ ಸಂಸ್ಕೃತಿಯನ್ನು ಸಹ ಎತ್ತಿಹಿಡಿದಿದೆ. ಈ ರೀತಿ ಬೇಜವಾಬ್ದಾರಿ ಹೇಳಿಕೆ ಇಡೀ ಹೆಣ್ಣು ಕುಲಕ್ಕೆ ಅಪಮಾನ ಮಾಡಿದಂತಾಗಿದೆ. ಇಂತಹ ಹೇಳಿಕೆಗಳನ್ನು ಎಲ್ಲ ಜನರೂ ಖಂಡಿಸಬೇಕು. ಒಬ್ಬ ಸಚಿವನಾಗಿ ಸಾಮಾಜಿಕ ಮತ್ತು ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದನ್ನು ಬಿಟ್ಟು ಬೇರೆಯವರ ವೈಯಕ್ತಿಕ ಬದುಕಿನ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಸರಿಯಲ್ಲ. ಮಹಿಳೆಯರ ತೇಜೋವಧೆ ಮಾಡುವುದನ್ನು ನಿಲ್ಲಿಸಿ ತಕ್ಷಣ ಶೋಭಾ ಕರಂದ್ಲಾಜೆ ಅವರ ಬಳಿ ಕ್ಷಮೆ ಕೇಳಬೇಕು" ಎಂದು ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.

ಮುಂದುವರೆದು "ಮೈತ್ರಾದೇವಿ ನಮ್ಮನ್ನು ಅಗಲಿದಾಗ ರಾಜಕೀಯದಲ್ಲೇ ಇಲ್ಲದ ವ್ಯಕ್ತಿ, ರಾಜಕೀಯ ಹೇಳಿಕೆ ನೀಡಿದ್ದಕ್ಕೆ ಮಹಿಳೆಯರ ಗುಣನಡತೆ ಕುರಿತು ಆರೋಪ ಮಾಡುವುದು ಇವರಿಗೆ ಅಧಿಕಾರದ ಮದ ತಲೆಗೆ ಹತ್ತಿ ಇಂತಹ ಅಟ್ಟಹಾಸ ಮೆರೆದಿದ್ದಾರೆ ಎನಿಸುತ್ತಿದೆ. ಇಂಥ ಬೇಜವಾಬ್ದಾರಿ ಹೇಳಿಕೆಗಳನ್ನು ನಿಲ್ಲಿಸದಿದ್ದಲ್ಲಿ ಮಾನನಷ್ಟ ಮೊಕದ್ದಮೆ ಹೂಡುವುದು ಅನಿವಾರ್ಯವಾಗಲಿದೆ" ಎಂದು ಎಚ್ಚರಿಕೆ ನೀಡಿರುವ ನಾರಾಯಣಸ್ವಾಮಿ ಅವರು "ಉನ್ನತ ಸ್ಥಾನದಲ್ಲಿರುವ ಮಹಿಳೆಯರು ನಿಮ್ಮ ತಪ್ಪುಗಳನ್ನು ತೋರಿಸುವುದು ಅಪರಾಧವೇ? ಹಾಗೆ ಹೇಳಿಕೆ ಕೊಟ್ಟು ಆಗ್ರಹಿಸಿದರೆ ಅವರ ಗುಣನಡತೆಯ ಕುರಿತು ಮಾತನಾಡುವುದು ಎಷ್ಟು ಸರಿ" ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:ಬಿಎಸ್​ವೈ ಪತ್ನಿ ವಿಚಾರ ಪ್ರಸ್ತಾಪ ; ಸಚಿವ ಬೈರತಿ ಸುರೇಶ್ ವಿರುದ್ಧ ಮಾನನಷ್ಟ ಮೊಕದ್ದಮೆ - ಭಾರತಿ ಶೆಟ್ಟಿ

ಇದನ್ನೂ ಓದಿ:ಮೈತ್ರಾದೇವಿ ಸಾವಿನಲ್ಲಿ ಶೋಭಾ ಕರಂದ್ಲಾಜೆ ಪಾತ್ರ ಇದೆ ಅಂತ ನಾನು ಆರೋಪಿಸುತ್ತೇನೆ; ಸಚಿವ ಬೈರತಿ ಸುರೇಶ್

ABOUT THE AUTHOR

...view details