ಕರ್ನಾಟಕ

karnataka

ETV Bharat / state

ಮೈಸೂರು: ಚರಂಡಿಯಲ್ಲಿ ಸಿಕ್ಕ ಜೀವಂತ ನವಜಾತ ಶಿಶುವಿನ ತಾಯಿ ಪತ್ತೆ - NEWBORN BABY MOTHER FOUND

ಕಳೆದ ಸೋಮವಾರ ಎಚ್.ಡಿ.ಕೋಟೆ ತಾಲೂಕಿನ ರಾಜೇಗೌಡನ ಹುಂಡಿ ಗ್ರಾಮದ ಚರಂಡಿಯಲ್ಲಿ ನವಜಾತ ಶಿಶುವೊಂದು ಜೀವಂತವಾಗಿ ಪತ್ತೆಯಾಗಿತ್ತು.

ತಾಯಿ ಮತ್ತು ಮಕ್ಕಳ ಆಸ್ಪತ್ರೆ
ತಾಯಿ ಮತ್ತು ಮಕ್ಕಳ ಆಸ್ಪತ್ರೆ (ETV Bharat)

By ETV Bharat Karnataka Team

Published : Jan 11, 2025, 2:16 PM IST

ಮೈಸೂರು:ನಾಲ್ಕು ದಿನಗಳ ಹಿಂದೆ ಚರಂಡಿಯಲ್ಲಿ ಪತ್ತೆಯಾಗಿದ್ದ ಜೀವಂತ ಶಿಶುವಿನ ತಾಯಿ, ಅವಿವಾಹಿತ ಅಪ್ರಾಪ್ತೆಯನ್ನುಆರೋಗ್ಯ ಇಲಾಖೆಯವರು ಪತ್ತೆ ಮಾಡಿದ್ದಾರೆ. ಸದ್ಯ ಆಕೆಗೆ ಎಚ್​.ಡಿ.ಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ಹಿನ್ನೆಲೆ: ಸೋಮವಾರ ಎಚ್.ಡಿ.ಕೋಟೆ ತಾಲೂಕಿನ ರಾಜೇಗೌಡನ ಹುಂಡಿ ಗ್ರಾಮದ ಚರಂಡಿಯಲ್ಲಿ ನವಜಾತ ಶಿಶುವೊಂದು ಜೀವಂತವಾಗಿ ಪತ್ತೆಯಾಗಿತ್ತು. ಆ ಮಗುವನ್ನು ರಕ್ಷಿಸಿ ಮೈಸೂರಿನ ಸರ್ಕಾರಿ ಮಕ್ಕಳ ಆಸ್ಪತ್ರೆ ಚಲುವಾಂಬದಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಇದೀಗ ಈ ನವಜಾತ ಶಿಶುವಿನ ತಾಯಿಯನ್ನು ಹುಡುಕುವಲ್ಲಿ ಆರೋಗ್ಯ ಇಲಾಖೆ ಯಶಸ್ವಿಯಾಗಿದೆ. ಅವಿವಾಹಿತ ಬಾಲಕಿಯೊಬ್ಬಳು ಮಗುವಿನ ತಾಯಿ ಆಗಿದ್ದು, ಹುಟ್ಟಿದ ತಕ್ಷಣ ಗಂಡು ಮಗುವನ್ನು ಚರಂಡಿಗೆ ಎಸೆದು ಹೋಗಿದ್ದು, ಮಗುವನ್ನು ಜೀವಂತವಾಗಿ ರಕ್ಷಿಸಲಾಗಿದೆ.

ಈ ಬಾಲಕಿಗೆ 16 ವರ್ಷ ವಯಸ್ಸಾಗಿದೆ. ಕಳೆದ ವರ್ಷ ಇವರ ಕುಟುಂಬದವರು ಮದುವೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿಗಳು ಮದುವೆ ನಿಲ್ಲಿಸಿದ್ದರು. ಬಾಲಕಿ ಹಾಗೂ ಆಕೆಯ ತಾಯಿಗೆ, 18 ವರ್ಷ ತುಂಬುವ ಮೊದಲು ಮದುವೆ ಮಾಡುವಂತಿಲ್ಲ ಎಂದು ತಿಳಿಹೇಳಿ ಮದುವೆ ರದ್ದುಪಡಿಸಿ ಮುಚ್ಚಳಿಕೆ ಬರೆಸಿಕೊಂಡು ಮನೆಗೆ ಕಳುಹಿಸಿದ್ದರು. ಈ ಮಧ್ಯೆ ಬಾಲಕಿ ಈಗ ಒಂದು ಗಂಡು ಮಗುವಿನ ತಾಯಿ ಆಗಿದ್ದು , ಸಮಾಜಕ್ಕೆ ಹೆದರಿ ಹೆರಿಗೆ ಆದ ತಕ್ಷಣ ಗಂಡು ಮಗುವನ್ನು ಚರಂಡಿಗೆ ಎಸೆದು ಹೋಗಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಸಂಬಂಧ ಎಚ್.ಡಿ.ಕೋಟೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಎಚ್.ಡಿ.ಕೋಟೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ದೀಪಾ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದಾಗ, "ಚರಂಡಿಯಲ್ಲಿ ಸಿಕ್ಕ ಹಸುಗೂಸಿನ ತಾಯಿಯನ್ನು ಪತ್ತೆ ಮಾಡಲಾಗಿದೆ. ಆಕೆಯ ಆರೋಗ್ಯ ದೃಷ್ಟಿಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮುಂದಿನ ಕಾನೂನು ಪ್ರಕ್ರಿಯೆ ಕೈಗೊಳ್ಳಲಾಗುವುದು. ಈ ಪ್ರಕರಣದಲ್ಲಿ ತಾಯಿ ಅಪ್ರಾಪ್ತೆ ಆಗಿರುವುದರಿಂದ ಮಾಹಿತಿಗಳನ್ನು ಗೌಪ್ಯವಾಗಿ ಇಡಬೇಕಾಗಿದೆ" ಎಂದರು.

ಇದನ್ನೂ ಓದಿ:ಚರಂಡಿಯಲ್ಲಿ ನವಜಾತ ಶಿಶು ಪತ್ತೆ, ಸರ್ಕಾರಿ ಆಸ್ಪತ್ರೆಗೆ ರವಾನೆ; ಹೆಚ್​ಡಿ ಕೋಟೆ ತಾಲೂಕಿನಲ್ಲಿ ಘಟನೆ

ABOUT THE AUTHOR

...view details