ಕರ್ನಾಟಕ

karnataka

ETV Bharat / state

ಮಹಾ ಕುಂಭಮೇಳದಲ್ಲಿ ಕಾಲ್ತುಳಿತ: ತಾಯಿ - ಮಗಳು ಸೇರಿ ಬೆಳಗಾವಿಯ ನಾಲ್ವರು ಸಾವು - FOUR FROM BELAGAVI DIED IN STAMPEDE

ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತ‌ದ ಪ್ರಕರಣದಲ್ಲಿ ಬೆಳಗಾವಿ ಮೂಲದ ತಾಯಿ - ಮಗಳು ಸೇರಿದಂತೆ ನಾಲ್ವರು ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ.

MOTHER AND DAUGHTER DIE IN STAMPEDE
ಮೃತ ತಾಯಿ-ಮಗಳು (ETV Bharat)

By ETV Bharat Karnataka Team

Published : Jan 29, 2025, 4:27 PM IST

Updated : Jan 29, 2025, 4:40 PM IST

ಬೆಳಗಾವಿ:ಪ್ರಯಾಗ್​ರಾಜ್ ‌ಮಹಾಕುಂಭಮೇಳದದಲ್ಲಿ ಪಾಲ್ಗೊಂಡಿದ್ದ ಬೆಳಗಾವಿ ನಾಲ್ವರು ಕಾಲ್ತುಳಿತದಲ್ಲಿ ಮೃತಪಟ್ಟಿದ್ದು ದೃಢವಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಧಿಕೃತ ಮಾಹಿತಿ ನೀಡಿದ್ದಾರೆ.

ಆರಂಭದಲ್ಲಿ ಬೆಳಗಾವಿಯ ವಡಗಾವಿ ನಿವಾಸಿ ಜ್ಯೋತಿ ಹತ್ತರವಾಟ (50) ಮತ್ತು ಮೇಘಾ ಹತ್ತರವಾಟ ಮೃತರಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿತ್ತು. ಇದಾದ ಬಳಿಕ ಬೆಳಗಾವಿಯ ಶೆಟ್ಟಿಗಲ್ಲಿಯ ಅರುಣ ಕೋಪರ್ಡೆ ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ.

ಅರುಣ ಅವರು ಪತ್ನಿ ಜೊತೆಗೆ ಪ್ರಯಾಗ್​ರಾಜ್‌ಗೆ ತೆರಳಿದ್ದರು. ಬುಧವಾರ ಬೆಳಿಗ್ಗೆ ಕಾಲ್ತುಳಿತದಲ್ಲಿ ಗಂಭೀರ ಗಾಯಗೊಂಡಿದ್ದ ಅರುಣ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದು, ಅರುಣ್ ಮನೆಗೆ ಬೆಳಗಾವಿ ತಹಶೀಲ್ದಾರ್ ಸಿಬ್ಬಂದಿ ಭೇಟಿ ನೀಡಿ ಮಾಹಿತಿ ಖಚಿತ ಪಡಿಸಿದ್ದಾರೆ.

ದೀಪಕ್ ಹತ್ತರವಾಟ ಮತ್ತು ಶಾಸಕ ಅಭಯ್​ ಪಾಟೀಲ್​ ಪ್ರತಿಕ್ರಿಯೆ (ETV Bharat)

ಅದೇ ರೀತಿ ಶಿವಾಜಿ ನಗರದ ನಿವಾಸಿ ಮಹಾದೇವಿ ಬಾವನೂರ (51) ಕೂಡ ಸಾವನ್ನಪ್ಪಿದ್ದಾರೆ. ಇವರ ಮನೆಗೆ ಶಾಸಕ ರಾಜು ಸೇಠ್ ಕುಟುಂಬಸ್ಥರನ್ನು ಭೇಟಿಯಾಗಿ ವಿಷಯ ಮುಟ್ಟಿಸಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

ನಾಲ್ವರ ಸಾವಿನಿಂದ ಬೆಳಗಾವಿಯಲ್ಲಿ ಆತಂಕದ ಮನೆ ಮಾಡಿದ್ದು, ಮೃತರ ಕುಟುಂಬಸ್ಥರು ದಿಗ್ಭ್ರಾಂತರಾಗಿದ್ದಾರೆ. ದಿಕ್ಕೆ ತೋಚದಂತಾಗಿ ಕಣ್ಣೀರು ಸುರಿಸುತ್ತಿದ್ದಾರೆ.

ಈಟಿವಿ ಭಾರತಕ್ಕೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಮಹಾಕುಂಭಮೇಳದ ಕಾಲ್ತುಳಿತದಲ್ಲಿ ಬೆಳಗಾವಿಯ ನಾಲ್ವರು ಭಕ್ತರು ಸಾವನ್ನಪ್ಪಿದ್ದಾರೆ. ವಿಶೇಷ ಜಿಲ್ಲಾಧಿಕಾರಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಿದ್ದು, ಆ ತಂಡ ಪ್ರಯಾಗ್ ರಾಜ್ ಗೆ ತೆರಳಿ ಮೃತದೇಹಗಳನ್ನು ವಾಪಸ್​​ ತರಲು ಪ್ರಯತ್ನಿಸಲಾಗುತ್ತದೆ ಎಂದಿದ್ದಾರೆ ಎಂದರು.

ಇನ್ನು ಕಾಲ್ತುಳಿತದಲ್ಲಿ ಗಾಯಗೊಂಡಿದ್ದ ಜ್ಯೋತಿ ಮತ್ತು ಮೇಘಾ ಅವರನ್ನು ಇಂದು‌‌ ಬೆಳಗ್ಗೆ ಪ್ರಯಾಗ್​ರಾಜ್‌ದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿ ಆಗದೇ ಇಬ್ಬರೂ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.

ಮೃತ ಜ್ಯೋತಿ ಅವರ ಪತಿ ದೀಪಕ್ ಹತ್ತರವಾಟ ಅವರಿಗೆ ಬೆಳಗ್ಗೆಯಿಂದ ಇಬ್ಬರೂ ಸಂಪರ್ಕಕ್ಕೆ ಸಿಕ್ಕಿಲ್ಲ. ಫೋನ್‌ ರಿಂಗ್ ಆಗುತಿದ್ದರೂ ರಿಸೀವ್ ಮಾಡದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತಂಕದಲ್ಲಿದ್ದರು. ಮೂರು ದಿನಗಳ ‌ಹಿಂದೆ ಸಾಯಿರಥ ಟ್ರಾವೆಲ್ ಏಜೆನ್ಸಿ ಮೂಲಕ ಪ್ರಯಾಗ್​ರಾಜ್​ಗೆ ಪ್ರಯಾಣ ಬೆಳೆಸಿದ್ದ 13 ಜನರ ತಂಡದಲ್ಲಿ ಜ್ಯೋತಿ ಹತ್ತರವಾಟ ಮತ್ತು ಮೇಘಾ ಹತ್ತರವಾಟ ಸೇರಿದ್ದರು. ಆದರೆ, ಘೋರ ದುರಂತದಲ್ಲಿ ತಾಯಿ - ಮಗಳು ಪ್ರಾಣ ಕಳೆದುಕೊಂಡಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ವಡಗಾವಿಯ ಅವರ ಮನೆಯಲ್ಲಿ ಸೂತಕದ ಛಾಯೆ ಆವರಿಸಿದ್ದು, ದುಃಖ ಮಡುಗಟ್ಟಿದೆ. ಸಂಬಂಧಿಕರು ಮತ್ತು ಸ್ನೇಹಿತರು ಅವರ ಮನೆಯತ್ತ ಧಾವಿಸುತ್ತಿದ್ದಾರೆ.

ಈ ಕುರಿತು ದೀಪಕ್​ ಹತ್ತರವಾಟ ಮಾಧ್ಯಮದವರೊಂದಿಗೆ ಮಾತನಾಡಿ, "ಜ‌.26ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಪತ್ನಿ, ಮಗಳು ಮತ್ತು ಅವರ ಇಬ್ಬರು ಸ್ನೇಹಿತರು ಪ್ರಯಾಗ್​ರಾಜ್​ ಹೋಗಿದ್ದರು. ನಿನ್ನೆ ರಾತ್ರಿ ಇಬ್ಬರೂ ವಿಡಿಯೋ ಕಾಲ್ ನಲ್ಲಿ ಮಾತನಾಡಿದ್ದರು. ಆದರೆ, ಇಂದು ಬೆಳಗ್ಗೆ ನಮ್ಮ ಸಂಪರ್ಕಕ್ಕೆ ಅವರು ಸಿಗಲೇ ಇಲ್ಲ. ನಮ್ಮವರ ಜೊತೆ ಹೋಗಿದ್ದ ಅವರ ಸ್ನೇಹಿತರು ಕಾಲ್ತುಳಿತ ಉಂಟಾಗಿದೆ ಎಂದು ತಿಳಿಸಿದರು. ಇದರಲ್ಲಿ ಪತ್ನಿ ಮತ್ತು ಮಗಳಿಗೆ ಗಂಭೀರವಾಗಿ ಗಾಯವಾಗಿದೆ ಎಂಬ ಮಾಹಿತಿ ಸಿಕ್ಕಿತ್ತು. ಮಧ್ಯಾಹ್ನ 3ರವರೆಗೆ ಏನೂ ಗೊತ್ತಾಗಲಿಲ್ಲ. ಕೊನೆಗೆ ಪ್ರಯಾಗ್​ರಾಜ್​ಗೆ ಕರೆದುಕೊಂಡು ಹೋಗಿದ್ದ ಚಿದಂಬರ ಪಾಟೀಲ ಅವರು ನಿಮ್ಮ ಪತ್ನಿ ಮತ್ತು ಮಗಳು ತೀರಿಕೊಂಡಿದ್ದಾರೆ‌ ಎಂದು ವಿಷಯ ತಿಳಿಸಿದರು" ಎಂದು ವಿವರಿಸಿದರು.‌

"ಮಗಳು ಮೇಘಾ ಪದವಿ ಮುಗಿಸಿ, ಸ್ಟೇಷನರಿ ಅಂಗಡಿ ನಡೆಸುತ್ತಿದ್ದರು. ಪತ್ನಿ ಮನೆಯಲ್ಲೆ ಇರುತ್ತಿದ್ದರು. ದೊಡ್ಡ ಮಗಳಿಗೆ ಮದುವೆ ಮಾಡಿಕೊಟ್ಟಿದ್ದೆ. ಮೇಘಾಗೂ ಮದುವೆ ಮಾಡುವ ಚಿಂತನೆ ನಡೆಸಿದ್ದೆವು. 144 ವರ್ಷಗಳಿಗೆ ಒಮ್ಮೆ ಮಹಾ ಕುಂಭಮೇಳ ಬರುತ್ತದೆ. ಹಾಗಾಗಿ, ನಾನು ಹೋಗಿಯೇ ಬರುತ್ತೇನೆ ಎಂದು ಹೋಗಿದ್ದರು. ಈಗ ನೋಡಿದರೆ ಸಾವಿನ ಸುದ್ದಿ ಕೇಳುವುದಾಯಿತು" ಎಂದು ಪತ್ನಿ ಮತ್ತು ಮಗಳನ್ನು ನೆನೆದು ದೀಪಕ್ ಹತ್ತರವಾಟ ಕಣ್ಣೀರು ಹಾಕಿದರು.

ನಮ್ಮ ಗುಂಪಿನಲ್ಲಿದ್ದ ಕೆಲವರು ಕಾಣುತ್ತಿಲ್ಲ: ಮಹಾಕುಂಭ ಮೇಳದಲ್ಲಿ ತಮ್ಮವರು ತಪ್ಪಿಸಿಕೊಂಡಿರುವ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ್ದ ಬೆಳಗಾವಿ ಮೂಲದ ಸರೋಜಿನಿ, "ನಾವು ಎರಡು ಬಸ್​ಗಳಲ್ಲಿ 60 ಜನ ಮಹಾಕುಂಭಮೇಳಕ್ಕೆ ಬಂದಿದ್ದೇವೆ. ಇದ್ದಕ್ಕಿದ್ದಂತೆ ಕಾಲ್ತುಳಿತ ಉಂಟಾಯಿತು. ನಮ್ಮ ಜೊತೆ ಬಂದವರಲ್ಲಿ ನಾಲ್ಕೈದು ಜನ ಕಾಣುತ್ತಿಲ್ಲ. ನಮ್ಮದು ಒಂಭತ್ತು ಜನರ ಗುಂಪು ಇತ್ತು.‌ ಇದರಲ್ಲಿ ಮೂರ್ನಾಲ್ಕು ಜನರು ಇಲ್ಲೇ ಇದ್ದಾರೆ. ಉಳಿದವರು ಕಾಣುತ್ತಿಲ್ಲ" ಎಂದು ಆತಂಕ ವ್ಯಕ್ತಪಡಿಸಿದ್ದರು.

ಪ್ರಯಾಗ್‌ರಾಜ್ ಮಹಾಕುಂಭ ಮೇಳದಲ್ಲಿ ಜರುಗಿದ ಕಾಲ್ತುಳಿತ ಪ್ರಕರಣದ ಬಗ್ಗೆ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್​ ಸ್ಪಷ್ಟನೆ ನೀಡಿದ್ದು, ''ಗಾಯಾಳುಗಳ ಕುರಿತು ಮಾಹಿತಿ ಸಿಕ್ಕಿಲ್ಲ. ಆದರೆ, ತೊಂದರೆಯಲ್ಲಿ ಸಿಲುಕಿದವರ ರಕ್ಷಣೆಗೆ ನಾವು ಸಿದ್ಧರಿದ್ದೇವೆ'' ಎಂದಿದ್ದಾರೆ.

ದೀಪಕ ಹತ್ತರವಾಟ ಅವರ ಮನೆಗೆ ಭೇಟಿ ಸಾಂತ್ವನ ಹೇಳಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಶಾಸಕ ಅಭಯ್ ಪಾಟೀಲ ಅವರು, ಹತ್ತರವಾಟ ಕುಟುಂಬದ ಇಬ್ಬರು ಮಿಸ್ಸಿಂಗ್ ಆಗಿದ್ದಾರೆ ಎಂದು ಬೆಳಗ್ಗೆಯಿಂದ ಮಾಹಿತಿ ಇತ್ತು. ಈವರೆಗೆ ಎಷ್ಟು ಜನರು ತೀರಿಕೊಂಡಿದ್ದಾರೆ ಅಂತಾ ಅಧಿಕೃತವಾಗಿ ಗೊತ್ತಾಗಿಲ್ಲ. ಅವರ ಜೊತೆಗೆ ಹೋದವರು ಹತ್ತರವಾಟ ಕುಟುಂಬದ ಇಬ್ಬರು ಮೃತಪಟ್ಟಿರುವುದಾಗಿ ನಮ್ಮ ಕಾರ್ಯಕರ್ತರಿಗೆ ಕರೆ ಮಾಡಿ ಹೇಳಿದ್ದಾರೆ. ಈಗಾಗಲೇ ಉತ್ತರಪ್ರದೇಶದ ಸಾರಿಗೆ ಸಚಿವ ದಯಾಶಂಕರ ಅವರ ಜೊತೆಗೆ ಮಾತಾಡಿದ್ದೇನೆ. ಈ ವೇಳೆ ಅವರು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸುವ ಬಗ್ಗೆ ಹಾಗೂ ಮಿಸ್ಸಿಂಗ್ ಆದವರನ್ನು ಪತ್ತೆ ಹಚ್ಚುವ ಬಗ್ಗೆ ಭರವಸೆ ನೀಡಿದ್ದಾರೆ. ಅಲ್ಲದೇ ಮೃತರ ಮೃತದೇಹಗಳನ್ನು ಬೆಳಗಾವಿಗೆ ಕಳಿಸುವುದಾಗಿಯೂ ತಿಳಿಸಿದ್ದಾರೆ. ನನಗಿರುವ ಮಾಹಿತಿ ಪ್ರಕಾರ ಬೆಳಗಾವಿ ಜಿಲ್ಲೆಯಿಂದ 5 ಸಾವಿರ ಜನರು ಪ್ರಯಾಗಾರಕ್ಕೆ ಹೋಗಿದ್ದಾರೆ ಎಂದು ವಿವರಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಂಪರ್ಕಿಸಿ: ''ಬೆಳಗಾವಿಯವರು ಕಾಲ್ತುಳಿತದಲ್ಲಿ ಗಾಯಗೊಂಡಿರುವ ಬಗ್ಗೆ ಮಾಹಿತಿ ಇಲ್ಲ. ಆದರೆ, ಅಲ್ಲಿ ತೊಂದರೆಯಲ್ಲಿ‌ ಸಿಲುಕಿದವರು ನಮ್ಮ ಜಿಲ್ಲಾಧಿಕಾರಿ ಕಚೇರಿಯನ್ನು ಸಂಪರ್ಕಿಸಬಹುದು. ಸಹಾಯವಾಣಿ ತೆರೆಯಲಾಗಿದೆ. ಅಗತ್ಯತೆ ಇದ್ದವರು ಜಿಲ್ಲಾಧಿಕಾರಿ ವೆಬ್‌ಸೈಟ್‌ನಲ್ಲಿರುವ ಸಂಖ್ಯೆಗೆ ಸಂಪರ್ಕಿಸಬಹುದು'' ಎಂದು ಡಿಸಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ.

ಇಬ್ಬರು ಅಧಿಕಾರಿಗಳ ನೇಮಕ: ನಾಲ್ವರ ಸಾವು ಹಿನ್ನೆಲೆಯಲ್ಲಿ ಅವರ ಮೃತದೇಹಗಳನ್ನು ತರಲು ವಿಶೇಷ ಜಿಲ್ಲಾಧಿಕಾರಿ ಹರ್ಷಾ ಶೆಟ್ಟಿ ಹಾಗೂ ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿ ಶೃತಿ ಎನ್.ಎಸ್‌‌ ಅವರನ್ನು ನೋಡಲ್ ಅಧಿಕಾರಿಗಳಾಗಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ನೇಮಿಸಿ ಆದೇಶ ಹೊರಡಿಸಿದ್ದಾರೆ. ಈಗಾಗಲೇ ಈ ಅಧಿಕಾರಿಗಳು ಪ್ರಯಾಗ್​ರಾಜ್​ನತ್ತ ಪ್ರಯಾಣ ಬೆಳೆಸಿದ್ದಾರೆ. ಅದೇ ರೀತಿ ಕರ್ನಾಟಕ ಸರ್ಕಾರ ಸಹಾಯವಾಣಿಯನ್ನು ಆರಂಭಿಸಿದ್ದು, ಸಂಕಷ್ಟದಲ್ಲಿ ಸಿಲುಕಿದವರು ಸಹಾಯಕ್ಕಾಗಿ 080-22340676 ನಂಬರ್ ಸಂಪರ್ಕಿಸುವಂತೆ ಕೋರಲಾಗಿದೆ.

ಇದನ್ನೂ ಓದಿ:ಮಹಾಕುಂಭದಲ್ಲಿ ಕಾಲ್ತುಳಿತ : ದುರ್ಘಟನೆಯ ಸ್ಥಳದಲ್ಲಿದ್ದ ಗಡಿಜಿಲ್ಲೆಯ ಇಬ್ಬರು ಯಾತ್ರಿಗಳು ಹೇಳಿದ್ದು ಹೀಗೆ

ಇದನ್ನೂ ಓದಿ:ಮಹಾಕುಂಭದಲ್ಲಿ ಕಾಲ್ತುಳಿತ ಪ್ರಕರಣ: ಸ್ಪೀಕರ್‌ ಯು.ಟಿ.ಖಾದರ್‌ ಹೇಳಿದ್ದೇನು?

Last Updated : Jan 29, 2025, 4:40 PM IST

ABOUT THE AUTHOR

...view details