ಮಂಗಳೂರು: ನಗರದ ಬೀದಿಯಲ್ಲಿ ನಿರ್ಗತಿಕಳಾಗಿ ಪತ್ತೆಯಾಗಿದ್ದ ಮಹಿಳೆ 15 ವರ್ಷಗಳ ಬಳಿಕ ತನ್ನ ಕುಟುಂಬ ಸೇರಿದ್ದಾರೆ.
ಫರ್ಜಾನ ಎಂಬವರು ಮಂಗಳೂರಿನ ಹೊಯಿಗೆ ಬಜಾರ್ನಲ್ಲಿ 2009ರಲ್ಲಿ ನಿರ್ಗತಿಕರಾಗಿ, ಮಾನಸಿಕ ಅಸ್ವಸ್ಥೆಯಾಗಿ ಅಲೆದಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಮಂಗಳೂರಿನ ಸೇವಾ ಸಂಸ್ಥೆ ವೈಟ್ ಡೌಸ್‌ನ ಕೊರಿನಾ ರಸ್ಕಿನ್ ಅವರು, ಮಹಿಳೆಗೆ ಚಿಕಿತ್ಸೆ ಕೊಡಿಸಿ ಆಶ್ರಯ ನೀಡಿದ್ದರು. ಈ ವೇಳೆ ಮಹಿಳೆ ಬಳಿ ತನ್ನೂರಿನ ಮತ್ತು ಕುಟುಂಬದ ಬಗ್ಗೆ ಕೇಳಿದಾಗ ನಿಖರ ಮಾಹಿತಿ ನೀಡುತ್ತಿರಲಿಲ್ಲ.
ಕೇವಲ ಮದ್ದೂರು ಮಾಂಸದಂಗಡಿ ಬಳಿ ಮನೆ ಇರುವುದಾಗಿ ಹೇಳುತ್ತಿದ್ದರು. ರಾಜ್ಯದ ಹಲವೆಡೆ ಮದ್ದೂರು ಹೆಸರಿನಲ್ಲಿ ಊರುಗಳಿದ್ದು, ಯಾವ ಮದ್ದೂರು ಎಂಬ ಬಗ್ಗೆ ಮಾಹಿತಿ ಇರಲಿಲ್ಲ. ವೈಟ್ ಡೌಸ್ ಸಂಸ್ಥೆ ಹಲವೆಡೆಗೆ ತಮ್ಮ ಸಿಬ್ಬಂದಿಯನ್ನು ಕಳುಹಿಸಿ ಹುಡುಕಿಸಿದ್ದರೂ ಕುಟುಂಬಸ್ಥರು ಪತ್ತೆಯಾಗಿರಲಿಲ್ಲ.
ಇತ್ತೀಚೆಗೆ ಮಡ್ಯದ ಮದ್ದೂರಿನ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರನ್ನು ಆಕೆಯ ಕುಟುಂಬಸ್ಥರು ಗುರುತಿಸಿ ಕರೆದುಕೊಂಡು ಹೋಗಲು ವೈಟ್ ಡೌಸ್ಗೆ ಬಂದಿದ್ದರು. ಈ ವೇಳೆ ಅವರಿಗೆ ಫರ್ಜಾನ ಬಗ್ಗೆ ಮದ್ದೂರಿನಲ್ಲಿರುವ ಮಾಂಸದಂಗಡಿಯವರಿಗೆ ಮಾಹಿತಿ ನೀಡುವಂತೆ ಚೀಟಿಯೊಂದನ್ನು ಕೊಟ್ಟು ಕಳುಹಿಸಲಾಗಿತ್ತು. ಈ ಚೀಟಿ ಅದೃಷ್ಟವಶಾತ್ ಫರ್ಜಾನ ಪುತ್ರ ಆಸೀಫ್ಗೆ ಸಿಕ್ಕಿದೆ. ನಂತರ ಅವರು ತಮ್ಮ ತಾಯಿಯನ್ನು ಕರೆದುಕೊಂಡು ಹೋಗಲು ತಂಗಿ, ಬಾವ ಮತ್ತು ಹೆಂಡತಿ - ಮಕ್ಕಳೊಂದಿಗೆ ಇಂದು ಮಂಗಳೂರಿನ ವೈಟ್ ಡೌಸ್ಗೆ ಆಗಮಿಸಿದ್ದರು.