ಕರ್ನಾಟಕ

karnataka

ETV Bharat / state

ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚು ಬಾರಿ‌ ಗೆದ್ದ ಸಂಸದರು ನಾಲ್ವರು: 7 ಸಲ ಗೆದ್ದು ಇತಿಹಾಸ ನಿರ್ಮಿಸಿದ್ದ ಬಿ.ಶಂಕರಾನಂದ - Belagavi constituency - BELAGAVI CONSTITUENCY

ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಅತೀ ಹೆಚ್ಚು ಬಾರಿ‌ ಗೆದ್ದ ಸಂಸದರು ನಾಲ್ವರಿದ್ದು, 7 ಸಲ ಬಿ. ಶಂಕರಾನಂದ ಅವರು ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಬಾರಿ‌ ಗೆದ್ದ ಸಂಸದರು
ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಬಾರಿ‌ ಗೆದ್ದ ಸಂಸದರು

By ETV Bharat Karnataka Team

Published : Apr 14, 2024, 1:48 PM IST

ಹಿರಿಯ ಪತ್ರಕರ್ತ ಅಶೋಕ್ ಚಂದರಗಿ ಹೇಳಿಕೆ

ಬೆಳಗಾವಿ:ಲೋಕಸಭೆ ಚುನಾವಣೆ ಕಣ ರಂಗೇರಿದೆ. ಅಭ್ಯರ್ಥಿಗಳು ಕಾಲಿಗೆ ಚಕ್ರ ಕಟ್ಟಿಕೊಂಡು ಪ್ರಚಾರಕ್ಕಿಳಿದಿದ್ದಾರೆ.ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿಯೂ ಕೂಡ ಚುನಾವಣಾ ಪ್ರಚಾರ ಜೋರಾಗಿದೆ. ಆದರೆ ಈ ಎರಡು ಕ್ಷೇತ್ರಗಳಲ್ಲಿ ಈವರೆಗೆ ಯಾರೆಲ್ಲಾ ಅತಿ ಹೆಚ್ಚು ಬಾರಿ ಗೆದ್ದಿದ್ದಾರೆ ಎಂಬ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಚಿಕ್ಕೋಡಿ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಸೋಲಿಲ್ಲದ ಸರ್ದಾರ ಅಂತಾನೆ ಪ್ರಖ್ಯಾತಿ ಪಡೆದಿದ್ದ ಬಿ.ಶಂಕರಾನಂದ ಅವರು, ಸತತ ಏಳು ಬಾರಿ ಗೆದ್ದು ಬೀಗಿದ್ದರು. ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿಯವರ ಪರಮಾಪ್ತರಾಗಿ ಗುರುತಿಸಿಕೊಂಡಿದ್ದರು. ಅದೇ ರೀತಿ ಬೆಳಗಾವಿ ಲೋಕಸಭೆ ಕ್ಷೇತ್ರದಿಂದ ಎಸ್.ಬಿ ಸಿದ್ನಾಳ ಮತ್ತು ಸುರೇಶ್ ಅಂಗಡಿ ಇಬ್ಬರೂ ಕೂಡ ಸತತ ನಾಲ್ಕು ಬಾರಿ ಗೆದ್ದಿದ್ದರು. ಹಾಲಿ ವಿಜಯಪುರ ಸಂಸದ ರಮೇಶ ಜಿಗಜಿಣಗಿ ಚಿಕ್ಕೋಡಿ‌ ಕ್ಷೇತ್ರದಿಂದ ಹ್ಯಾಟ್ರಿಲ್ ಗೆಲುವು ಸಾಧಿಸಿದ್ದರು.

3 ಪ್ರಧಾನ ಮಂತ್ರಿಗಳ ಸಂಪುಟದಲ್ಲಿ ಬಿ.ಶಂಕರಾನಂದ ಸಚಿವ: 1967ರಲ್ಲಿ ಚಿಕ್ಕೋಡಿ ಮೀಸಲು ಕ್ಷೇತ್ರವಾದ ಬಳಿಕ ಮೊದಲ ಬಾರಿಗೆ ಸ್ಪರ್ಧಿಸಿದ ಬಿ‌.ಶಂಕರಾನಂದ ನಂತರ 1991ರವರೆಗೂ ಸತತವಾಗಿ 7 ಬಾರಿ ಗೆದ್ದು ಇತಿಹಾಸ ನಿರ್ಮಿಸಿದ್ದರು. ಇಂದಿರಾಗಾಂಧಿ, ರಾಜೀವಗಾಂಧಿ ಹಾಗೂ ಪಿ.ವಿ.ನರಸಿಂಹರಾವ್ ಅವರ ಸಂಪುಟದಲ್ಲಿ ಬಿ.ಶಂಕರಾನಂದ ಅವರು ಸಚಿವರಾಗಿದ್ದರು. 1971 ರಿಂದ 74ರವರೆಗೆ ಸಂಸದೀಯ ವ್ಯವಹಾರಗಳ ಖಾತೆ, 1980 ರಿಂದ 84ರವರೆಗೆ ಆರೋಗ್ಯ ಮತ್ತು ಶಿಕ್ಷಣ, 1984 ರಿಂದ 85 ರವರೆಗೆ ನೀರಾವರಿ ಮತ್ತು ಇಂಧನ, 1985 ರಿಂದ 87 ರವರೆಗೆ ಜಲಸಂಪನ್ಮೂಲ, 1988 ರಿಂದ 89 ರವರೆಗೆ ಕಾನೂನು, 1991 ರಿಂದ 93 ವರೆಗೆ ಪೆಟ್ರೋಲಿಯಂ ಖಾತೆ ಹಾಗೂ 1993 ರಿಂದ 94 ರವರೆಗೆ ಪುನಃ ಆರೋಗ್ಯ ಖಾತೆಯನ್ನು ಯಶಸ್ವಿಯಾಗಿ ನಿಭಾಯಿಸುವ ಮೂಲಕ ದಾಖಲೆ ಬರೆದಿದ್ದರು.

ಸೋಲಿಲ್ಲದ ಸರದಾರನಿಗೆ ಸೋಲುಣಿಸಿದ ದಿಟ್ಟ ಮಹಿಳೆ :ಸತತ 7 ಬಾರಿ ಗೆದ್ದು ಸೋಲಿಲ್ಲದ ಸರದಾರನಾಗಿ ಹೊರ ಹೊಮ್ಮಿದ್ದ ಬಿ.ಶಂಕರನಾಂದ ಅವರಿಗೆ 1996ರಲ್ಲಿ ಜನತಾದಳ ಪಕ್ಷದಿಂದ ಸ್ಪರ್ಧಿಸಿದ್ದ ರತ್ನಮಾಲಾ ಸವಣೂರ ಸೋಲಿಸಿದ್ದರು. ಈ ಸೋಲು ಶಂಕರಾನಂದರ ರಾಜಕೀಯ ಜೀವನ ಅಂತ್ಯವಾಗುವಂತೆ ಮಾಡಿತ್ತು. ಶಂಕರಾನಂದ ಅವರನ್ನು ಸೋಲಿಸಿದ್ದ ರತ್ನಮಾಲಾ ಸವಣೂರ ವಿ.ಪಿ. ಸಿಂಗ್ ಸಂಪುಟದಲ್ಲಿ ರಾಜ್ಯ ಸಚಿವೆಯಾಗಿದ್ದರು‌.

1980ರ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಸ್.ಬಿ ಸಿದ್ನಾಳ 1984, 1989 ಮತ್ತು 1991ರ ಚುನಾವಣೆಗಳಲ್ಲೂ ಸತತ ನಾಲ್ಕು ಬಾರಿ ಗೆದ್ದಿದ್ದರು. ಅದೇ ರೀತಿ 2004ರ ಚುನಾವಣೆಯಲ್ಲಿ ಸುರೇಶ ಅಂಗಡಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಬಳಿಕ 2009, 2014 ಮತ್ತು 2019ರ ಚುನಾವಣೆಗಳಲ್ಲೂ ಸತತ ನಾಲ್ಕು‌ ಬಾರಿ ಗೆದ್ದು ಇತಿಹಾಸ ನಿರ್ಮಿಸಿದ್ದರು. ಅವರ ಅಕಾಲಿಕ ಅಗಲಿಕೆಯಿಂದ ತೆರವಾದ ಸ್ಥಾನಕ್ಕೆ 2021ರಲ್ಲಿ ನಡೆದ ಉಪಚುನಾವಣೆಯಲ್ಲಿ ಅವರ ಪತ್ನಿ ಮಂಗಲ ಅಂಗಡಿ ಗೆದ್ದಿದ್ದರು. ಈ ಬಾರಿ ಮಂಗಲ ಅವರಿಗೆ ಟಿಕೆಟ್ ಕೈ ತಪ್ಪಿದ್ದು, ಅವರ ಬೀಗರಾದ ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರಿಗೆ ಬಿಜೆಪಿ ಮಣೆ ಹಾಕಿದೆ.

ಮೂರು ಚುನಾವಣೆ, ಮೂರು ಪಕ್ಷ, ಹ್ಯಾಟ್ರಿಕ್ ಗೆಲುವು :ವಿಜಯಪುರ ಹಾಲಿ ಸಂಸದ ರಮೇಶ ಜಿಗಜಿಣಗಿ 1998ರಲ್ಲಿ ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಲೋಕಶಕ್ತಿ ಪಕ್ಷದಿಂದ ಸ್ಪರ್ಧಿಸಿ ಮೊದಲ ಗೆಲುವು ಕಂಡಿದ್ದರು. ಆ ಬಳಿಕ 1999ರ ಚುನಾವಣೆಯಲ್ಲಿ ಜನತಾದಳ(ಯು) ಅಭ್ಯರ್ಥಿಯಾಗಿ ಸ್ಪರ್ಧಿಸಿ ಎರಡನೇ ಬಾರಿ ಸಂಸದರಾಗಿದ್ದರು. 2004ರಲ್ಲಿ ಚಿಕ್ಕೋಡಿ ಮೀಸಲು ಕ್ಷೇತ್ರದಿಂದ ಸಾಮಾನ್ಯ ಕ್ಷೇತ್ರವಾಗಿ ಪರಿವರ್ತನೆ ಆದ ನಂತರದಲ್ಲಿ ಬಿಜೆಪಿಯಿಂದ ಗೆದ್ದು, ಹ್ಯಾಟ್ರಿಲ್ ಗೆಲುವು ಸಾಧಿಸಿದ್ದು ಜಿಗಜಿಣಗಿ ಅವರ ಹೆಗ್ಗಳಿಕೆ.

ಹಿರಿಯ ಪತ್ರಕರ್ತ ಅಶೋಕ್ ಚಂದರಗಿ ಈಟಿವಿ ಭಾರತ ಜೊತೆಗೆ ಮಾತನಾಡಿ, ಬಿ.ಶಂಕರಾನಂದ ಅವರು ಗಾಂಧಿ ಕುಟುಂಬದ ಪರಮಾಪ್ತರಾಗಿದ್ದರು.‌ ರಾಷ್ಟ್ರಮಟ್ಟದಲ್ಲೂ ಪ್ರಭಾವ ಹೊಂದಿದ್ದರು. ಶಂಕರಾನಂದ ಮತ್ತು ಎಸ್.ಬಿ.ಸಿದ್ನಾಳ ಹಳೆ ತಲೆಮಾರಿನ‌ ರಾಜಕಾರಣಿ. ಇನ್ನು ಸುರೇಶ ಅಂಗಡಿ ಓರ್ವ ಸಾತ್ವಿಕ ರಾಜಕಾರಣಿ ಮತ್ತು ಅಜಾತಶತ್ರು. ಈ ಹಿಂದೆ ಸಂಸದರಿಗೆ ಅಷ್ಟೊಂದು ಪ್ರಾಮುಖ್ಯತೆ ಮತ್ತು ಅನುದಾನವೂ ಸಿಗುತ್ತಿರಲಿಲ್ಲ. ಸರ್ಕಾರಿಂದ ವಾಹನ ವ್ಯವಸ್ಥೆಯೂ ಇರುತ್ತಿರಲಿಲ್ಲ. 1991ರಲ್ಲಿ ಪಿ.ವಿ.ನರಸಿಂಹರಾವ ಪ್ರಧಾನಮಂತ್ರಿ ಆದ ಬಳಿಕ ಸಂಸದರಿಗೆ 1 ಕೋಟಿ ಅನುದಾನ ಕೊಡಲು ಶುರು ಮಾಡಿದರು. ಅಲ್ಲದೇ ವೀರಪ್ಪ ಮೊಯ್ಲಿ ಮುಖ್ಯಮಂತ್ರಿ ಆದ ಬಳಿಕ ಸಂಸದರಿಗೆ ಅಂಬಾಸಿಡರ್ ಕಾರು ನೀಡಿದರು. ಆಗಿನ ಕಾಲಕ್ಕೂ ಈಗಿನ ಕಾಲಕ್ಕೂ ರಾಜಕಾರಣದಲ್ಲಿ ಅಜಗಜಾಂತರ ವ್ಯತ್ಯಾಸವಾಗಿದೆ ಎಂದು ನೆನಪಿಸಿಕೊಂಡರು.

ಇದನ್ನೂ ಓದಿ :ನಾನು ಸಿಎಂ ಆದರೆ ಪ್ರತಿ ಕುಟುಂಬಕ್ಕೆ ಮಾಸಿಕ 5 ಸಾವಿರ ರೂ. ನೀಡುತ್ತೇನೆ: ಶಾಸಕ ಬಸನಗೌಡ ಯತ್ನಾಳ್ - Basangouda Yatnal

ABOUT THE AUTHOR

...view details