ಕರ್ನಾಟಕ

karnataka

ETV Bharat / state

ಮಂಗಳೂರಿನಲ್ಲಿ ಕಳೆಗಟ್ಟಿದ ಮೊಸರು ಕುಡಿಕೆ ಉತ್ಸವ: ಮಡಿಕೆ ಒಡೆದು ಬಣ್ಣದ ಓಕುಳಿಯಲ್ಲಿ ಮಿಂದೆದ್ದ ಯುವಕರು - Mosaru Kudike - MOSARU KUDIKE

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊಸರು ಕುಡಿಕೆ ಉತ್ಸವ ಸಂಭ್ರಮದಿಂದ ಜರುಗಿದೆ.

ಮಂಗಳೂರಿನಲ್ಲಿ ಕಳೆಗಟ್ಟಿದ ಮೊಸರುಕುಡಿಕೆ ಉತ್ಸವ
ಮಂಗಳೂರಿನಲ್ಲಿ ಕಳೆಗಟ್ಟಿದ ಮೊಸರುಕುಡಿಕೆ ಉತ್ಸವ (ETV Bharat)

By ETV Bharat Karnataka Team

Published : Aug 28, 2024, 8:45 AM IST

ಮಂಗಳೂರಿನಲ್ಲಿ ಕಳೆಗಟ್ಟಿದ ಮೊಸರು ಕುಡಿಕೆ ಉತ್ಸವ (ETV Bharat)

ಮಂಗಳೂರು:ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ದಕ್ಷಿಣ‌ ಕನ್ನಡ ಜಿಲ್ಲೆಯ ವಿವಿಧೆಡೆ ಮೊಸರು ಕುಡಿಕೆ ಉತ್ಸವ ಸಂಭ್ರಮದಿಂದ ನಡೆಯಿತು.

ಕರಾವಳಿಯಲ್ಲಿ ಕೃಷ್ಣಾಷ್ಟಮಿ ಸಂಭ್ರಮ ಬಲು ಜೋರು‌. ಅದರಲ್ಲೂ ಅಷ್ಟಮಿಯ ಮರುದಿನ ನಡೆಯುವ ಮೊಸರುಕುಡಿಕೆ ಉತ್ಸವ ಎಲ್ಲೆಡೆ ಸಂಭ್ರಮ ಮೂಡಿಸುತ್ತದೆ. ಉಡುಪಿಯಲ್ಲಿ ವಿಟ್ಲಪಿಂಡಿ ಎಂಬ ಹೆಸರಿನಲ್ಲಿ ಅಷ್ಟಮಿಯ ಕೃಷ್ಣ ಲೀಲೋತ್ಸವ ನಡೆದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊಸರುಕುಡಿಕೆ ಎಂದು ಸಂಭ್ರಮಿಸಲಾಗುತ್ತದೆ. ಶ್ರೀಕೃಷ್ಣ ಬಾಲ್ಯದ ಲೀಲೆಯನ್ನು ತೋರಿಸುವ ಉತ್ಸವವೇ ಮೊಸರುಕುಡಿಕೆ.

ಗೋಕುಲದಲ್ಲಿ ಕೃಷ್ಣ ಬೆಣ್ಣೆ, ಮೊಸರು ಕದಿಯುತ್ತಾನೆ ಎಂದು ಗೋಪಿಕೆಯರು ಮೊಸರು, ಬೆಣ್ಣೆಯನ್ನು ಗಡಿಗೆಯಲ್ಲಿಟ್ಟು ಆತನಿಗೆ ಎಟುಕುದಂತೆ ಮೇಲ್ಗಡೆ ನೇತಾಡಿಸಿ ಇಡುತ್ತಿದ್ದರು. ಆದರೆ, ಕೃಷ್ಣ ಉಪಾಯ ಹೂಡಿ ಗೋಪಾಲಕರ ಬೆನ್ನ ಮೇಲೆ ನಿಂತು ಗಡಿಗೆಯಿಂದ ಬೆಣ್ಣೆ, ಮೊಸರು ಕದ್ದು ತಿನ್ನುತ್ತಿದ್ದ. ಅಲ್ಲದೇ ಕುಡಿಕೆ ಒಡೆದು ಹಾಕುತ್ತಿದ್ದ. ಕೃಷ್ಣನ ಈ ಬಾಲ್ಯಲೀಲೆಯನ್ನು ಕೃಷ್ಣಾಷ್ಟಮಿಯ ಸಂದರ್ಭ ಮೊಸರುಕುಡಿಕೆಯ ನೆಪದಲ್ಲಿ ಯುವಕರು ಮರುಸೃಷ್ಟಿಸಿ ಸಂಭ್ರಮ ಪಡುತ್ತಾರೆ.

ಮೊಸರು ಕುಡಿಕೆ ಉತ್ಸವದಲ್ಲಿ 10-12 ಎತ್ತರಕ್ಕೆ ಹೆಚ್ಚೆಂದರೆ 14ಅಡಿ ಎತ್ತರಕ್ಕೆ ಕಂಬಗಳನ್ನು ಗಟ್ಟಿಯಾಗಿ ಕಟ್ಟಿ ಅವುಗಳಿಗೆ ಸಾಲಾಗಿ ಮಣ್ಣಿನ ಮಡಿಕೆಗಳನ್ನು ಕಟ್ಟಲಾಗುತ್ತದೆ. ಈ ಗಡಿಗೆಗಳಿಗೆ ಸುಂದರವಾಗಿ ಪೇಂಟ್​ ಬಳಿದು ಚಿತ್ತಾರಗಳನ್ನು ಬಿಡಿಸಿ ಮೇಲಕ್ಕೆ ಕಟ್ಟಿರುತ್ತಾರೆ. ಮಣ್ಣಿನ ಮಡಿಕೆಗಳನ್ನು ಯುವಕರು ಪಿರಮಿಡ್ ರಚಿಸಿ ಒಡೆದು ಹಾಕುತ್ತಾರೆ. ಮೂರು ಅಂತರದಲ್ಲಿ ಪಿರಮಿಡ್ ರಚಿಸಿ ಒಬ್ಬ ಅವರೆಲ್ಲರ ಮೇಲೆ ನಿಂತು ಕಟ್ಟಿರುವ ಎಲ್ಲ ಮಡಿಕೆಗಳನ್ನು ಒಡೆದು ಹಾಕುತ್ತಾನೆ.

ಆಗ ಮಡಿಕೆಯೊಳಗೆ ಹಾಕಿಟ್ಟಿರುವ ಬಣ್ಣದ ನೀರು, ಬಣ್ಣದ ಹುಡಿಗಳು ಮೈಮೇಲೆ ಸುರಿಯುತ್ತದೆ. ಮಡಿಕೆ ಯುವಕರ ಮೇಲೆ ಬಿದ್ದು ಅವರು ಬಣ್ಣದ ಓಕುಳಿ ರಂಗಿನಲ್ಲಿ ಮಿಂದೇಳುವುದನ್ನು ನೋಡುವುದೇ ಆಕರ್ಷಕ. ಇದನ್ನು ನೋಡಲೆಂದೇ ಜನರು ತಂಡೋಪತಂಡವಾಗಿ ಬರುತ್ತಾರೆ. ಹೀಗೆ ಬರುವ ಜನರು ಮಡಿಕೆ ಒಡೆಯುದವುನ್ನು ಕಂಡು ಸಂಭ್ರಮಿಸುತ್ತಾರೆ.

ಇದನ್ನೂ ಓದಿ:ಶ್ರೀಕೃಷ್ಣಾಷ್ಟಮಿ ಸಂಭ್ರಮ: ಬಾಲಕೃಷ್ಣನಿಗೆ 116 ಬಗೆಯ ನೈವೇದ್ಯ ಬಡಿಸಿದ ಕೃಷ್ಣ ಭಕ್ತೆ - 116 dishes to god krishna

ABOUT THE AUTHOR

...view details