ಬೆಂಗಳೂರು/ಮಂಡ್ಯ:ಕಾವೇರಿ ಮತ್ತು ಹೇಮಾವತಿ ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣರಾಜ ಸಾಗರ (ಕೆ.ಆರ್.ಎಸ್) ಜಲಾಶಯದಿಂದ ಸುಮಾರು 1,50,000 ಕ್ಯೂಸೆಕ್ ನೀರನ್ನು ಕಾವೇರಿ ನದಿಗೆ ಹರಿಸಲಾಗುವುದು. ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿ, ಯಾವುದೇ ಜನ, ಜನುವಾರುಗಳ ಪ್ರಾಣ ಹಾನಿಯಾಗದಂತೆ ನೋಡಿಕೊಳ್ಳಿ ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಸೂಚಿಸಿದ್ದಾರೆ.
ನದಿ ಪಾತ್ರದ ತಗ್ಗು ಪ್ರದೇಶದಲ್ಲಿರುವ ಮತ್ತು ಎರಡೂ ದಂಡೆಗಳಲ್ಲಿರುವ ಸಾರ್ವಜನಿಕರು ಹಾಗೂ ರೈತರು ತಮ್ಮ ಆಸ್ತಿ ಪಾಸ್ತಿ ಜಾನುವಾರುಗಳ ರಕ್ಷಣೆಗೆ ಎಚ್ಚರಿಕೆ ವಹಿಸಿ, ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು. ಯಾವುದೇ ತೊಂದರೆಯಿದ್ದರೆ, ತಕ್ಷಣ ತಮ್ಮ ತಾಲೂಕು ಅಥವಾ ಜಿಲ್ಲಾ ಕಂಟ್ರೋಲ್ ರೂಂಗೆ ಕರೆ ಮಾಡಿ ರಕ್ಷಣೆ ಪಡೆದುಕೊಳ್ಳಬೇಕು. ಇದಕ್ಕಾಗಿ ಜಿಲ್ಲಾಡಳಿತವು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ ಎಂದಿದ್ದಾರೆ.
ನದಿ ಪಾತ್ರದಲ್ಲಿ ಹಾಗೂ ಹೆಚ್ಚು ನೀರು ಹರಿಯುವ ಪ್ರದೇಶದಲ್ಲಿ ನೀರಿನ ರಭಸದ ಬಗ್ಗೆ ಹೇಳಲು ಸಾಧ್ಯವಿಲ್ಲ. ಸೆಲ್ಫಿ ತೆಗೆದುಕೊಳ್ಳುವ ಅಥವಾ ನೀರಿನಲ್ಲಿ ಆಟವಾಡುವ ಉತ್ಸಾಹದಲ್ಲಿ ಪ್ರಾಣಕ್ಕೆ ತೊಂದರೆ ಮಾಡಿಕೊಳ್ಳಬೇಡಿ. ನದಿ ಪಾತ್ರದ ಪ್ರದೇಶದಲ್ಲಿ ಎಚ್ಚರಿಕೆ ವಹಿಸಿ ಎಂದು ಸಚಿವರು ಸೂಚಿಸಿದ್ದಾರೆ.
ಮಂಡ್ಯದ ಮಳವಳ್ಳಿ ತಾಲೂಕಿನ ಕೊನೆಯ ಭಾಗದವರೆಗೆ ನೀರು ಹರಿಸಲು ಸಹ ಕ್ರಮ ವಹಿಸಲಾಗುತ್ತಿದೆ. ರೈತರು, ಸಾರ್ವಜನಿಕರು ಅದರಲ್ಲೂ ಸಹ ಮಕ್ಕಳು ಎಚ್ಚರಿಕೆಯಿಂದ ಇರುವಂತೆ ಸಚಿವ ಚಲುವರಾಯಸ್ವಾಮಿ ಕೋರಿದ್ದಾರೆ.
ಇದನ್ನೂ ಓದಿ:2 ವರ್ಷದ ನಂತರ ಭರ್ತಿಯಾದ ಕನ್ನಂಬಾಡಿ ಅಣೆಕಟ್ಟು: ಕೆಆರ್ಎಸ್ ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದಾರೆ ಸಿಎಂ - KRS dam water filled
ಕೆಆರ್ಎಸ್ ಭರ್ತಿ:ವ್ಯಾಪಕವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆ.ಆರ್.ಎಸ್.ಡ್ಯಾಂಗೆ ಒಳ ಹರಿವಿನ ಪ್ರಮಾಣವು ಹೆಚ್ಚಾಗಿದ್ದರಿಂದ ಹೊರ ಹರಿವಿನ ಪ್ರಮಾಣವು ಏರಿಸಲಾಗಿದೆ. ಹೀಗಾಗಿ ಕಾವೇರಿ ನದಿ ಪಾತ್ರದಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದೆ. ಸದ್ಯ ಕೆ.ಆರ್.ಎಸ್.ಡ್ಯಾಂ ಸಂಪೂರ್ಣವಾಗಿ 124.80 ಅಡಿ ಭರ್ತಿಯಾಗಿದೆ. ಹೊರ ಹರಿವಿನ ಪ್ರಮಾಣವು ಹೆಚ್ಚಾಗಿರುತ್ತದೆ. ಕೆಆರ್ಎಸ್ನಿಂದ ಭಾರೀ ಪ್ರಮಾಣದಲ್ಲಿ ನೀರು ಬಿಟ್ಟಿದ್ದರಿಂದ ರಂಗನತಿಟ್ಟು ಪಕ್ಷಿಧಾಮದಲ್ಲಿನ ನಡುಗಡ್ಡೆಗಳು ಮುಳುಗಡೆಯಾಗಿದೆ. ಪ್ರವಾಹದ ನೀರಿನಲ್ಲಿ ಮರದ ಕೆಳಗಿದ್ದ ಪಕ್ಷಿಗೂಡುಗಳು ಕೊಚ್ಚಿಹೋಗಿವೆ. ಗೂಡು ಕಳೆದುಕೊಂಡ ಹಕ್ಕಿಗಳು ಮರದ ತುದಿಯಲ್ಲಿ ಆಶ್ರಯ ಪಡೆದಿವೆ. ಇನ್ನು ಪ್ರವಾಹದ ಮುನ್ನೆಚ್ಚರಿಕೆ ಕ್ರಮವಾಗಿ ಪಕ್ಷಿಧಾಮಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ. ಜೊತೆಗೆ ನದಿ ನೀರು ಹೆಚ್ಚಳವಾಗಿರುವುದರಿಂದ ಪಕ್ಷಿಧಾಮದಲ್ಲಿ ಬೋಟಿಂಗ್ ಸ್ಥಗಿತಗೊಂಡಿದೆ.
ಇದನ್ನೂ ಓದಿ: ಕಟ್ಟಿಗೆ ಸ್ಟ್ರೇಚರ್ ಮೇಲೆ ಆಸ್ಪತ್ರೆಗೆ ಸಾಗಿಸಿದ್ದ ಮಹಿಳೆ ಸಾವು: ಫಲಿಸಲಿಲ್ಲ ಖಾನಾಪುರ ಕಾಡಂಚಿನ ಗ್ರಾಮಸ್ಥರ ಹೋರಾಟ - Belagavi Village woman died