ಚಿಕ್ಕಮಗಳೂರು :ಮೂಡಿಗೆರೆ ತಾಲೂಕಿನ ಬೆಟ್ಟಗೆರೆ ಗ್ರಾಮದಲ್ಲಿ ಸುರಿದ ಧಾರಾಕಾರ ಮಳೆಗೆ ಸುಂದರ್ ಎಂಬುವವರ ಮನೆ ನಾಶವಾಗಿದೆ. ಮನೆಯಲ್ಲಿದ್ದ ಪೀಠೋಪಕರಣಗಳು, ಆಹಾರ ಪದಾರ್ಥಗಳು ಸಂಪೂರ್ಣ ನಾಶವಾಗಿದ್ದು, ಮಳೆಯ ನಡುವೆ ಕುಟುಂಬ ಸದಸ್ಯರು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.
ಚಿಕ್ಕಮಗಳೂರು ತಾಲೂಕಿನ ಹಿರೇಕೊಳಲೆ, ಒಡೆಯರಪುರ ಗ್ರಾಮದಲ್ಲಿ ಮನೆ ಗೋಡೆ ಕುಸಿದು ಬಿದ್ದಿರುವ ಘಟನೆ ಜರುಗಿದೆ. ಗ್ರಾಮದ ದ್ಯಾವಯ್ಯ, ಲಕ್ಷ್ಮಮ್ಮ ಎಂಬುವರಿಗೆ ಸೇರಿದ ಮನೆ ಸಂಪೂರ್ಣ ಹಾನಿಯಾಗಿದ್ದು, ಜಿಲ್ಲಾದ್ಯಂತ ಮಳೆಗೆ ಈವರೆಗೂ 190ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.
ಕೊಪ್ಪ ತಾಲೂಕಿನ ಮೇಗೂರು ಗ್ರಾಮದ ಪ್ರೇಮ ಬಾಬು ಗೌಡ ಎಂಬುವವರ ಮನೆ ಮುಂದೆ ದೊಡ್ಡ ಪ್ರಮಾಣದಲ್ಲಿ ಕಂದಕ ನಿರ್ಮಾಣವಾಗಿದೆ. ಮಳೆಯಿಂದಾಗಿ ಸೃಷ್ಠಿಯಾಗಿರುವ ವಿಚಿತ್ರ ಕಂದಕ ನೋಡಿ ಸ್ಥಳೀಯರು ಬೆಚ್ಚಿ ಬಿದ್ದಿದ್ದು, ಕಂದಕದ ಒಳಗಿಂದ ಭೂಮಿ ಒಳಗೆ ಹರಿಯುತ್ತಿರುವ ನೀರಿನ ಬುಗ್ಗೆ ನೋಡಿ ಕುಟುಂಬ ಸದಸ್ಯರು ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು ಸ್ಥಳಕ್ಕೆ ಭೇಟಿ ನೀಡಿ, ಆಶ್ಚರ್ಯವನ್ನು ವ್ಯಕ್ತಪಡಿಸುತ್ತಿದ್ದಾರೆ.
ಮುಳ್ಳಯ್ಯನಗಿರಿ ರಸ್ತೆಯ ಮೂರನೇ ತಿರುವಿನಲ್ಲಿ ಮರವೊಂದು ಬಿದ್ದಿದೆ. ರಸ್ತೆಯಲ್ಲಿ ವಾಹನಗಳು ಇಲ್ಲದಿದ್ದರಿಂದ ಅನಾಹುತ ತಪ್ಪಿದಂತಾಗಿದೆ. ಈ ದುರಂತ ಘಟನೆಯಿಂದ ರಸ್ತೆಯಲ್ಲಿ ಸ್ಥಳೀಯ ಗ್ರಾಮಸ್ಥರು ಓಡಾಡಲು ಪರದಾಟ ನಡೆಸಿದ್ದಾರೆ.