ಮೈಸೂರು ಪೇಯಿಂಟ್ಸ್ ಮತ್ತು ಲಿಮಿಟೆಡ್ ಕಂಪನಿ ಎಂಡಿ ಮೊಹಮ್ಮದ್ ಇರ್ಫಾನ್ ಮೈಸೂರು :ಭವಿಷ್ಯದ ಚುನಾವಣೆಗಳಲ್ಲಿ ಮತದಾನದ ದಿನ ಕೈಗೆ ಶಾಯಿ ಬಳಸುವ ಬದಲು, ಮಾರ್ಕರ್ ಪೆನ್ಗಳಿಂದ ಗುರುತು ಹಾಕುವ ಪದ್ಧತಿ ಜಾರಿಗೆ ಬರುವ ಸಾಧ್ಯತೆ ಇದೆ ಎಂದು ಮೈಸೂರಿನ ಪೇಯಿಂಟ್ಸ್ ಮತ್ತು ವಾರ್ನಿಶ್ ಲಿಮಿಟೆಡ್ ಎಂ ಡಿ ಮೊಹಮ್ಮದ್ ಇರ್ಫಾನ್ ಈಟಿವಿ ಭಾರತ್ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೆ ನೀಡಿದ್ದಾರೆ.
ಈ ಬಾರಿ ಲೋಕಸಭೆಗೆ ಎಷ್ಟು ಪ್ರಮಾಣದ ಅಳಿಸಲಾಗದ ಶಾಯಿಯನ್ನ ಪೂರೈಸಲಾಗಿದೆ. ಈ ಶಾಯಿಯನ್ನ ಹೇಗೆ ತಯಾರು ಮಾಡಲಾಗುತ್ತದೆ. ಇದರ ಬೆಲೆ ಎಷ್ಟು ಹಾಗೂ ದೇಶ ಅಲ್ಲದೇ ವಿದೇಶಗಳಿಗೂ ರಪ್ತು ಮಾಡಲಾಗುವ ಶಾಯಿಯ ಪ್ರಮಾಣ ಎಷ್ಟು ಹಾಗೂ ಮೈಲಾಕ್ನಿಂದ ಬೇರೆ ಯಾವ ರೀತಿ ಉತ್ಪನ್ನವನ್ನು ತಯಾರು ಮಾಡಲಾಗುತ್ತದೆ. ಇನ್ನು ಭವಿಷ್ಯದ ಚುನಾವಣೆಗಳಲ್ಲಿ ತೋರು ಬೆರಳಿಗೆ ಇಂಕ್ ಹಾಕುವ ಬದಲಾಗಿ, ಮಾರ್ಕರ್ ಪೆನ್ ಬಳಸುವ ಬಗ್ಗೆ ಚಿಂತನೆ ಸೇರಿ ಇನ್ನೂ ಹಲವು ವಿಚಾರಗಳ ಬಗ್ಗೆ ಕಾರ್ಖಾನೆಯ ಎಂ ಡಿ ಮೊಹಮ್ಮದ್ ಇರ್ಫಾನ್ ಮಾಹಿತಿ ಹಂಚಿಕೊಂಡಿದ್ದಾರೆ.
ಮೈಸೂರು ಪೇಯಿಂಟ್ಸ್ ಮತ್ತು ಲಿಮಿಟೆಡ್ ಕಂಪನಿ ಎಂಡಿ ಮೊಹಮ್ಮದ್ ಇರ್ಫಾನ್ ದೇಶದಲ್ಲಿ ಗ್ರಾಮ ಪಂಚಾಯಿತಿಯಿಂದ ಹಿಡಿದು ಲೋಕಸಭೆ ಚುನಾವಣೆವರೆಗೆ ವೋಟಿಂಗ್ ದಿನ, ಮತದಾನ ಮಾಡಿದ ಗುರುತಿಗಾಗಿ ಕೈ ಬೆರಳಿಗೆ ಇಂಕ್ ಅಥವಾ ಶಾಯಿಯನ್ನು ಹಾಕಲಾಗುತ್ತದೆ. ಅಂದ ಹಾಗೆ ಈ ಶಾಯಿಯನ್ನು ತಯಾರು ಮಾಡುವ ಕಾರ್ಖಾನೆ ಇರುವುದು ನಮ್ಮ ಕರ್ನಾಟಕದ ಮೈಸೂರಿನಲ್ಲಿ. ಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಶ್ ಲಿಮಿಟೆಡ್ ಚುನಾವಣೆಯಲ್ಲಿ ಕೈಗೆ ಹಚ್ಚುವ ಶಾಯಿ ತಯಾರಿಸುವ ದೇಶದ ಏಕೈಕ ಕಾರ್ಖಾನೆಯಾಗಿದೆ. ಇದನ್ನ ಮೈಲಾಕ್ ಎಂದೂ ಸಹ ಕರೆಯಲಾಗುತ್ತಿದೆ.
ಮೈಸೂರಿನ ಪೇಯಿಂಟ್ಸ್ ಮತ್ತು ವಾರ್ನಿಶ್ ಲಿಮಿಟೆಡ್ ಈ ಕಾರ್ಖಾನೆಯನ್ನು 1937ರಲ್ಲಿ ಮೈಸೂರು ಒಡೆಯರ್ರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಆರಂಭಿಸಿದ್ದಾರೆ. ಅಲ್ಲಿಂದ ಇಲ್ಲಿಯವರೆಗೂ ಲಾಭದಿಂದ ನಡೆದಿರುವ ಏಕೈಕ ಸರ್ಕಾರಿ ಉದ್ಯಮ ಇದಾಗಿದೆ.
ಲೋಕಸಭಾ ಚುನಾವಣೆಯಲ್ಲಿ 55 ಕೋಟಿ ರೂಪಾಯಿ ವ್ಯವಹಾರ: ಕೇಂದ್ರ ಚುನಾವಣಾ ಆಯೋಗವು ನೀಡಿದ್ದ ನಿರ್ದೇಶನದ ಮೇರೆಗೆ ರಾಜ್ಯದ ಚುನಾವಣಾ ಆಯೋಗವು, ಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಶ್ ಕಂಪನಿಗೆ ಇಂಕ್ ಬಾಟಲ್ನ ಆರ್ಡರ್ಗಳನ್ನ ಕೊಡುತ್ತಾರೆ. ಈ ಬಾರಿಯ ಲೋಕಸಭಾ ಚುನಾವಣೆಗೆ 26,55,000ದ 10 ML ಇಂಕ್ ಬಾಟಲ್ಗಳನ್ನ ಆರ್ಡರ್ ನೀಡಲಾಗಿದೆ. ಈಗಾಗಲೇ ಕಳೆದ ಡಿಸೆಂಬರ್ನಿಂದ ಎಲ್ಲಾ ರಾಜ್ಯಗಳಿಗೂ ಅಳಿಸಲಾಗದ ಶಾಹಿಯನ್ನ ಅವರು ನೀಡಿದ್ದ ಆರ್ಡರ್ಗೆ ಅನುಗುಣವಾಗಿ ಪೂರೈಕೆ ಮಾಡಲಾಗಿದೆ. ತೆಲಂಗಾಣಕ್ಕೆ ಮಾತ್ರ ನಾಳೆ ಇಂಕ್ ಬಾಟಲ್ನ ಕಳಿಸಲಾಗುವುದು. ಈ ವರ್ಷ 26,55,000 10ML ನ ಇಂಕ್ ಬಾಟಲ್ಗಳ ಸರಬರಾಜು ಮಾಡಿದ್ದರಿಂದ 55 ಕೋಟಿ ವ್ಯವಹಾರ ನಡೆದಿದೆ. ಕಂಪನಿಯ ಇತಿಹಾಸದಲ್ಲಿಯೇ ಅತಿ ದೊಡ್ಡ ವಹಿವಾಟು ಈ ಲೋಕಸಭಾ ಚುನಾವಣೆಗೆ ಸರಬರಾಜು ಮಾಡಿರುವ ಇಂಕ್ನಿಂದ ಬಂದಿದೆ ಎಂದು ಕಾರ್ಖಾನೆಯ ಎಂ.ಡಿ ಹೇಳಿದ್ದಾರೆ
ಮೈಸೂರಿನ ಪೇಯಿಂಟ್ಸ್ ಮತ್ತು ವಾರ್ನಿಶ್ ಲಿಮಿಟೆಡ್ ಕಂಪನಿ 15 ದಿನ ಅಳಿಸಲು ಸಾಧ್ಯವಿಲ್ಲ : ಮತದಾನದ ದಿನ ಮತದಾನದ ಗುರುತಿಗೆ ಹಾಕಲಾಗಿರುವ ಇಂಕ್ನ ಸಿಲ್ವರ್ ನೈಟ್ರೇಟ್ ಹಾಗೂ ಇತರ ಕಚ್ಚಾ ವಸ್ತುಗಳಿಂದ ತಯಾರು ಮಾಡಲಾಗುತ್ತದೆ. ಈ ಇಂಕ್ಗೆ ಕಳೆದ ವರ್ಷ 10ML ಬಾಟಲ್ಗೆ 160 ರೂಪಾಯಿ ಇತ್ತು. ಇಂದು ಅದೇ ಬಾಟಲ್ಗೆ ಚುನಾವಣೆ ಆಯೋಗ 174 ರೂಪಾಯಿ ನಿಗದಿ ಮಾಡಿದೆ. ಒಂದು 10ML ಬಾಟಲ್ನಿಂದ 700 ಜನರಿಗೆ ಗುರುತು ಹಾಕಬಹುದು. ಈ ಗುರುತನ್ನ ಬೆರಳಿಗೆ ಹಾಕಿದ ತಕ್ಷಣ ತನ್ನ ಬಣ್ಣವನ್ನ ಬದಲಾಯಿಸಿಕೊಂಡು 10 ರಿಂದ 15 ದಿನದವರೆಗೆ ಅಳಿಸಲು ಸಾಧ್ಯವಾಗುವುದಿಲ್ಲ ಎಂದು ಎಂ ಡಿ ಮೊಹಮ್ಮದ್ ಇರ್ಫಾನ್ ಮಾಹಿತಿ ನೀಡಿದ್ದಾರೆ.
ಮೈಸೂರಿನ ಪೇಯಿಂಟ್ಸ್ ಮತ್ತು ವಾರ್ನಿಶ್ ಲಿಮಿಟೆಡ್ ಕಂಪನಿ ಉದ್ಘಾಟನಾ ಸಮಾರಂಭ 35 ದೇಶಗಳಿಗೆ ಸರಬರಾಜು :ಭಾರತದ ಎಲ್ಲ ಚುನಾವಣೆಗಳಿಗೂ 1962 ರಿಂದ ಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಶ್ ಕಂಪನಿ ಇಂಕ್ನ್ನು ಸರಬರಾಜು ಮಾಡುತ್ತಾ ಬಂದಿದೆ. ಇದಲ್ಲದೇ 35 ಹೊರ ದೇಶಗಳಾದ ಮಲೇಷಿಯಾ, ಮಂಗೋಲಿಯಾ, ಆಫ್ರಿಕನ್ ದೇಶಗಳು, ಪಾಕಿಸ್ತಾನ, ಅಫ್ಘಾನಿಸ್ತಾನ, ಸೇರಿದಂತೆ 35ಕ್ಕೂ ಹೆಚ್ಚಿನ ದೇಶಗಳಿಗೆ ಇಂಕ್ನ ಸರಬರಾಜು ಮಾಡಲಾಗುತ್ತದೆ. ಇದರ ಜೊತೆಗೆ ಕಂಪನಿಯಿಂದ ಇತರ ವಸ್ತುಗಳಾದ ಇಂಡಸ್ಟ್ರಿಯಲ್ ಪೇಯಿಂಟ್ ಹಾಗೂ ಇಂಡಸ್ಟ್ರಿಯಲ್ ಕೋಟಿಂಗ್ ಬಣ್ಣಗಳನ್ನ ಸೇರಿದಂತೆ ಹಲವು ರೀತಿಯ ಉತ್ಪನ್ನಗಳನ್ನೇ ತಯಾರು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮನೆಗೆ ಬಳಸುವ ಪೇಯಿಂಟ್ಸ್ಗಳನ್ನೂ ತಯಾರು ಮಾಡಲು ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಮೈಸೂರಿನ ಪೇಯಿಂಟ್ಸ್ ಮತ್ತು ವಾರ್ನಿಶ್ ಲಿಮಿಟೆಡ್ ಕಂಪನಿ ಉದ್ಘಾಟನಾ ಸಮಾರಂಭದಲ್ಲಿ ಸಿಹಿಹಂಚುತ್ತಿರುವುದು ಇಂಕ್ ಬದಲಾಗಿ ಮಾರ್ಕರ್ ಪೆನ್ ಬಳಕೆಗೆ ಸಿದ್ಧತೆ : ಅಳಿಸಲಾಗದ ಶಾಯಿಗೆ ಆಧುನಿಕ ಸ್ಪರ್ಶ ನೀಡಲು ಮೈಸೂರು ಲೈನ್ ವಾರ್ನಿಶ್ ಕಂಪನಿ ನಿರ್ಧರಿಸಿದೆ. ಇದಕ್ಕಾಗಿ ಇಂಕ್ ಮಾರ್ಕರ್ ಪೆನ್ಗಳನ್ನು ಭವಿಷ್ಯದ ಚುನಾವಣೆಗಳಲ್ಲಿ ಬಳಸಲು ಈಗಾಗಲೇ ಚುನಾವಣಾ ಆಯೋಗಕ್ಕೆ ಮಾರ್ಕರ್ ಪೆನ್ನ ಟೆಸ್ಟಿಂಗ್ ಸ್ಯಾಂಪಲ್ಗಳನ್ನ ಕಳುಹಿಸಲಾಗಿದೆ. ಮುಂಬರುವ ಚುನಾವಣೆಯಲ್ಲಿ ಇಂಕ್ ಬದಲಾಗಿ ಮಾರ್ಕರ್ ಪೆನ್ ಬಳಸುವ ಸಾಧ್ಯತೆ ಇದೆ ಎಂದು ಕಂಪನಿಯ ವ್ಯವಸ್ಥಾಪಕರಾದ ಕೆ. ಮೊಹಮ್ಮದ್ ಇರ್ಫಾನ್ ಈಟಿವಿ ಭಾರತ್ಗೆ ವಿವರಿಸಿದ್ದಾರೆ.
ಇದನ್ನೂ ಓದಿ :ಮೈಸೂರು: ಲೋಕಸಭಾ ಚುನಾವಣೆಗೆ 'ಮೈಲ್ಯಾಕ್' ನಿಂದ 26.55 ಲಕ್ಷ ಇಂಕ್ ಬಾಟಲ್ ಸರಬಾರಾಜು