ಚಿಕ್ಕೋಡಿ:ಪ್ರಧಾನಿ ನರೇಂದ್ರ ಮೋದಿ ಅವರು ಕೋಮುವಾದ ಸಿದ್ಧಾಂತವನ್ನು ಎಲ್ಲೆಡೆ ಪ್ರಸ್ತಾಪ ಮಾಡುತ್ತಿದ್ದಾರೆ. ಮುಸ್ಲಿಂ, ಬಳೆ ತಾಳಿ ವಿಚಾರ ಪ್ರಸ್ತಾಪ ಮಾಡಿ ಪ್ರಧಾನಿ ಹುದ್ದೆಗೆ ಅವಮಾನ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
ಚಿಕ್ಕೋಡಿಯಲ್ಲಿ ನಡೆದ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ಮೋದಿ ಅವರು ಕಿತ್ತೂರು ಚೆನ್ನಮ್ಮರಿಗೆ ಶಿವಾಜಿ ಮಹಾರಾಜರಿಗೆ ಅವರಿಗೆ ಕಾಂಗ್ರೆಸ್ ಅವಮಾನ ಮಾಡಿದೆ ಎಂದಿದ್ದಾರೆ. ಶಿವಾಜಿ ಮಹಾರಾಜರಿಗೆ, ಕಿತ್ತೂರು ರಾಣಿ ಚೆನ್ನಮ್ಮರಿಗೆ ನಾವು ಎಲ್ಲಿ ಅವಮಾನ ಮಾಡಿದ್ದೇವೆ? ಪ್ರಧಾನಿಯಾಗಿ ಇಂಥ ಸುಳ್ಳು ಹೇಳುವುದು ಶೋಭೆ ಇಲ್ಲ, ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಹಾಗೂ ರಾಯಣ್ಣ ಸ್ಮಾರಕ ಮಾಡಿದ್ದು ನಾನು. ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರ ಹಿಂದುಳಿದವರ ಮೀಸಲಾತಿ ಕಿತ್ತು ಮುಸ್ಲಿಂರಿಗೆ ಕೊಡುತ್ತಾರೆಂದು ಮೊದಿ ಸುಳ್ಳು ಹೇಳಿದ್ದಾರೆ. 1993-94 ರಲ್ಲಿ ಚಿನ್ನಪ್ಪರೆಡ್ಡಿ ಶಿಫಾರಸ್ಸಿನ ಮೇಲೆ ಅಂದು ಸಿಎಂ ಆಗಿದ್ದ ಮೊಯ್ಲಿ ಅವರು ಮುಸ್ಲಿಂರಿಗೆ 4 ಪ್ರತಿಶತ ಮೀಸಲಾತಿ ನೀಡಲು ಆದೇಶ ಮಾಡಿದ್ದರು. 30 ವರ್ಷಗಳಿಂದ ಮುಸ್ಲಿಂರಿಗೆ ಮೀಸಲಾತಿ ಇದೆ. ಶೆಟ್ಟರ್, ಸದಾನಂದಗೌಡ ಅವರ ಕಾಲದಲ್ಲಿ ಮೀಸಲಾತಿ ಇತ್ತು, ನಂತರ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ 4 ಶೇಕಡಾ ಮುಸ್ಲಿಂರ ಮೀಸಲಾತಿ ರದ್ದು ಮಾಡಿ ಅದನ್ನು ಲಿಂಗಾಯತರಿಗೆ ಮತ್ತು ಒಕ್ಕಲಿಗರಿಗೆ ನೀಡಿದರು ಎಂದರು.
ಇದನ್ನು ಮುಸ್ಲಿಂ ಸಮುದಾಯ ಮುಖಂಡರು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನೆ ಮಾಡಿದರು. ಇದೇ ಬೊಮ್ಮಾಯಿ ಮುಸ್ಲಿಂರ ಹಿಂದಿನ ಮೀಸಲಾತಿಯನ್ನು ಮೊದಲಿನಂತೆ ಮುಂದುವರೆಸುತ್ತೇವೆಂದು ಸುಪ್ರೀಂ ಕೋರ್ಟ್ ಅಫಿಡವಿಟ್ ನೀಡಿದರು ಎಂದು ತಿಳಿಸಿದರು.
ರೈತರ ಆದಾಯ ದುಪ್ಪಟ್ಟು:ರೈತರ ಆದಾಯ ದುಪ್ಪಟ್ಟು ಎಲ್ಲಿ? ರೈತರ ಆದಾಯ ಡಬಲ್ ಆಗಿಲ್ಲ. ರೈತರು ಕೆಲ ತಿಂಗಳುಗಳಿಂದ ಹೋರಾಟ ಮಾಡುತ್ತಿದ್ದಾರೆ. ಸ್ವಾಮಿನಾಥನ್ ವರದಿ ಜಾರಿ ಎನ್ಎಸ್ಪಿಗೆ ಒತ್ತಾಯ ಮಾಡಿದ್ದಾರೆ. ರೈತರು ಆದರೆ ಮೋದಿ ಅಚ್ಚೇ ದಿನ್ ಆಯೇಗಾ ಎಂದಿದ್ದರು. ಆದ್ರೆ, ಅಚ್ಛೇ ದಿನ್ ಬರಲಿಲ್ಲ. ಎಲ್ಲ ವಸ್ತುಗಳ ಬೆಲೆ ಇಳಿಸುವುದರ ಬಗ್ಗೆ ಮಾತನಾಡಿದ್ದ ಮೋದಿ ಬೆಲೆ ಏರಿಕೆ ಮಾಡಿದರು? ರೂಪಾಯಿ ಮೌಲ್ಯ ಹೆಚ್ಚು ಮಾಡುತ್ತೇನೆಂದು ಮೋದಿ ಹೇಳಿದ್ದರು. ಆದ್ರೆ ಇಂದು ಡಾಲರ್ ಎದುರು ರೂಪಾಯಿ ಮೌಲ್ಯ 83 ರೂ. ಗೆ ಏರಿದೆ ಎಂದು ಟೀಕಿಸಿದರು.
ಐದು ಗ್ಯಾರಂಟಿ:ವಿಧಾನಸಭಾ ಚುನಾವಣೆ ಮುನ್ನವೇ ಐದು ಗ್ಯಾರಂಟಿ ಘೋಷಣೆ ಮಾಡಿದ್ದೆವು. ನಾವು ಅಧಿಕಾರಕ್ಕೆ ಬಂದು 8 ತಿಂಗಳಲ್ಲಿ 5 ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ನಮ್ಮ ಗ್ಯಾರಂಟಿಗಳ ಮಾದರಿಯಲ್ಲೇ ಕಾಂಗ್ರೆಸ್ ಪಕ್ಷವು ಲೋಕಸಭಾ ಚುನಾವಣೆಗೆ 25 ಗ್ಯಾರಂಟಿಗಳನ್ನು ಘೋಷಿಸಿದೆ. ಬಡ ಮಹಿಳೆಗೆ ಒಂದು ವರ್ಷಕ್ಕೆ 1 ಲಕ್ಷ ರೂಪಾಯಿ ನೀಡುತ್ತೇವೆ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಹಣ ಸೇರಿಸಿದರೆ ವರ್ಷಕ್ಕೆ 1,24,000 ರೂ. ಸಿಗುತ್ತದೆ. ಇದು ಬೇಕು ಎಂದಾದರೆ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಬೇಕು ಎಂದು ತಿಳಿಸಿದರು.
ರೈತರ ಸಾಲಮನ್ನಾ:ಪ್ರತಿ ಮಹಿಳೆಯರಿಗೆ 25 ಲಕ್ಷ ರೂಪಾಯಿ ಆರೋಗ್ಯ ವಿಮೆ, ರೈತರ ಸಾಲ ಸಂಪೂರ್ಣವಾಗಿ ಮನ್ನಾ ಮಾಡುತ್ತೇವೆ. ಮೋದಿ ರೈತರ ಸಾಲ ಮನ್ನಾ ಮಾಡಿಲ್ಲ. ರೈತರ 72 ಸಾವಿರ ಕೋಟಿ ಸಾಲಮನ್ನಾ ಮಾಡಿದ್ದು ಕಾಂಗ್ರೆಸ್ ಸರ್ಕಾರ, ಆಗ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರು. 8165 ಕೋಟಿ ಹಣ ಸಹಕಾರಿ ಬ್ಯಾಂಕ್ನಲ್ಲಿದ್ದ ರೈತರ ಸಾಲವನ್ನು ನಾನು ಸಿಎಂ ಆಗಿದ್ದಾಗ ಮನ್ನಾ ಮಾಡಿದ್ದೇನೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ಸಾಲಮನ್ನಾ ಮಾಡುವಂತೆ ಒತ್ತಾಯ ಮಾಡಿದಾಗ ನಮ್ಮಲ್ಲಿ ನೋಟ್ ಪ್ರಿಂಟ್ ಮಾಡುವ ಮಷಿನ್ ಇಲ್ಲ ಎಂದಿದ್ದರು ಎಂದು ಸಿಎಂ ವಾಗ್ದಾಳಿ ನಡೆಸಿದರು.
ಬಸವೇಶ್ವರ ಏತ ನೀರಾವರಿ ಯೋಜನೆ: ಬಸವೇಶ್ವರ ಏತ ನೀರಾವರಿ ಯೋಜನೆ ಪೂರ್ಣಗೊಳಿಸಿ ನೀರು ಹರಿಸುತ್ತೇವೆ. ಪಾಲಿಟೆಕ್ನಿಕ್ ಕಾಲೇಜು ಸ್ಥಾಪನೆ ಮಾಡುತ್ತೇವೆ. ಮಹಾರಾಷ್ಟ್ರ ಸರ್ಕಾರದೊಂದಿಗೆ ಮಾತನಾಡಿ ಕೃಷ್ಣಾ ನದಿಗೆ 1 ಟಿಎಂಸಿ ನೀರು ಬಿಡಿಸಲಾಗುತ್ತದೆ. ಚುನಾವಣೆ ಮುಗಿದ ಬಳಿಕ ರೈತರಿಗೆ 7 ಗಂಟೆ ನಿರಂತರ ವಿದ್ಯುತ್ ನೀಡುತ್ತೇವೆ. ನಾವು ಕೊಟ್ಟ ಮಾತನ್ನು ತಪ್ಪುವವರೆಲ್ಲ, ಮಾತಿನಂತೆ ನಡೆದುಕೊಳ್ಳುವವರು ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
ಲೋಕಸಭೆ ಅಭ್ಯರ್ಥಿಯೇ ಗೈರು: ಚಿಕ್ಕೋಡಿ ಲೋಕಸಭೆ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಗೈರಾಗಿದ್ದರು, ಮದುಮಗಳನ್ನ ಬಿಟ್ಟು ಮದುವೆಗೆ ಹೋದ್ರಾ ಕೈ ಮುಖಂಡರು..? ಎಂದು ಸಾರ್ವಜನಿಕರು ಚರ್ಚೆ ನಡೆಯುತ್ತಿದೆ. ಚಿಕ್ಕೋಡಿ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅನುಪಸ್ಥಿತಿಯಲ್ಲಿ ಮತಯಾಚನೆ ಸಿಎಂ, ಡಿಸಿಎಂ, ಸಚಿವ ಸತೀಶ್ ಜಾರಕಿಹೊಳಿ ನಡೆಸಿದರು. ವೇದಿಕೆಯ ಕಾಂಗ್ರೆಸ್ ಸಮಾವೇಶದಲ್ಲಿ ಅಭ್ಯರ್ಥಿ ಫೋಟೋವೇ ಮಾಯವಾಗಿತ್ತು.
ಇದನ್ನೂ ಓದಿ:ಹಾಸನ ವಿಡಿಯೋ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ, ತನಿಖೆಯಲ್ಲಿ ಸತ್ಯ ಹೊರಬರುತ್ತೆ: ಸಚಿವ ಡಾ. ಜಿ. ಪರಮೇಶ್ವರ್ - Hassan video case