ಬೆಂಗಳೂರು: ಲೋಕಸಭೆಯಲ್ಲಿ ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರದ ಮಧ್ಯಂತರ ಬಜೆಟ್ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಆತ್ಮವಿಶ್ವಾಸವನ್ನು ಎತ್ತಿ ತೋರಿಸಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದೇಶದ ಮತದಾರರ ಮುಂದೆ ಹೋಗಲು ಮೋದಿ ಸರ್ಕಾರ, ಹಲವು ಜನಪ್ರಿಯ ಯೋಜನೆಗಳನ್ನು ಪ್ರಕಟಿಸಲಿದೆ ಎಂಬ ನಿರೀಕ್ಷೆ ಸಾರ್ವತ್ರಿಕವಾಗಿತ್ತು. ಆದರೆ, ಇಂದು ಸಂಸತ್ತಿನಲ್ಲಿ ಮಂಡನೆಯಾದ ಕೇಂದ್ರದ ಬಜೆಟ್ ದೇಶದ ಮತದಾರರಿಗೆ ಬಂಪರ್ ಕೊಡುಗೆಗಳನ್ನೇನೂ ಘೋಷಿಸಲಿಲ್ಲ. ಬದಲಿಗೆ ಕೆಲ ತಿಂಗಳ ಲೇಖಾನುದಾನ ಪಡೆಯುವ ಉದ್ದೇಶ ಮಾತ್ರ ತನ್ನದು ಎಂಬ ಸಂದೇಶ ರವಾನಿಸಿದೆ.
ಆ ಮೂಲಕ ಲೋಕಸಭಾ ಚುನಾವಣೆಯಲ್ಲಿ ಸ್ವಯಂಬಲದಿಂದ ಗೆದ್ದು ಅಧಿಕಾರ ಹಿಡಿಯಲು ಮತದಾರರನ್ನು ಓಲೈಸುವ ಅಗತ್ಯ ತನಗಿಲ್ಲ ಎಂಬ ಅಂಶವನ್ನೂ ಮೋದಿ ಸರ್ಕಾರ ದೇಶದ ಮುಂದೆ ಪ್ರಚುರಪಡಿಸಿರುವುದು ತೋರುತ್ತದೆ. ಲೋಕಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯುವ ವಿಷಯದಲ್ಲಿ ಆತಂಕವಿದ್ದರೆ ಸರ್ಕಾರ ಮತದಾರರಿಗೆ ಭರಪೂರ ಕೊಡುಗೆಗಳನ್ನು ಕೊಡುವುದು. ಆ ಮೂಲಕ ಅವರನ್ನು ಓಲೈಸುವ ಪ್ರಯತ್ನ ಮಾಡಲಾಗುತ್ತದೆ. ಆದರೆ, ಅಂತಹ ಓಲೈಕೆಯ ಉದ್ದೇಶವೇ ಇಲ್ಲವೆಂದರೆ, ಅದು ಸಂಪೂರ್ಣ ಆತ್ಮವಿಶ್ವಾಸದ ಪ್ರತೀಕ ಎಂದೇ ಹೇಳಲಾಗುತ್ತದೆ.
ಹಾಗೆಂದು ಮೋದಿ ಸರ್ಕಾರ ತನ್ನ ಬಜೆಟ್ನಲ್ಲಿ ದೇಶದ ಮತದಾರರ ಗಮನ ಸೆಳೆಯುವ ಯತ್ನವನ್ನು ಮಾಡಿಯೇ ಇಲ್ಲವೆಂತಲ್ಲ. ಮೂರು ಲಕ್ಷ ಮಹಿಳೆಯರನ್ನು ಲಕ್ಷಾಧಿಪತಿಗಳನ್ನಾಗಿ ಮಾಡುವ ಕಾರ್ಯಕ್ರಮ, ದೇಶದ ಒಂದು ಕೋಟಿ ಜನರಿಗೆ ಸೂರ್ಯೋದಯ ಯೋಜನೆಯಡಿ ಸೋಲಾರ್ ವಿದ್ಯುತ್ ಒದಗಿಸುವ ಘೋಷಣೆಯು ಗಮನಾರ್ಹವಾಗಿದೆ.
ಇದನ್ನೂ ಓದಿ:ಈ ಬಾರಿಯ ಬಜೆಟ್ನಿಂದ ಯುವಕರು, ಬಡವರು, ಮಹಿಳೆಯರು, ರೈತರ ಸಬಲೀಕರಣ: ಪ್ರಧಾನಿ ಮೋದಿ