ಕರ್ನಾಟಕ

karnataka

ಸಿಎಂ ಸ್ಥಾನದ ಆಕಾಂಕ್ಷಿಗಳ ಬಗ್ಗೆ ಸಚಿವರ ಬಹಿರಂಗ ಹೇಳಿಕೆಗೆ ತಡೆ ಹಾಕಿ: ಖರ್ಗೆಗೆ ಕೈ ಎಂಎಲ್​ಸಿ ಪತ್ರ - MLC Letter To Mallikarjun Kharge

By ETV Bharat Karnataka Team

Published : Sep 9, 2024, 8:45 PM IST

- ಸಿಎಂ ಸ್ಥಾನದ ಬಗ್ಗೆ ಸಚಿವರ ಬಹಿರಂಗ ಹೇಳಿಕೆ ತಡೆಗೆ ಮನವಿ - ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಪರಿಷತ್ ಸದಸ್ಯರ ಪತ್ರ

mallikarjun kharge
ದಿನೇಶ್ ಗೂಳಿಗೌಡ, ಮಲ್ಲಿಕಾರ್ಜುನ ಖರ್ಗೆ (ETV Bharat)

ಬೆಂಗಳೂರು:ಸಚಿವರು ಪಕ್ಷದ ನಿಯಮ ಉಲ್ಲಂಘಿಸಿ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿತನದ ಬಗ್ಗೆ ಬಹಿರಂಗ ಹೇಳಿಕೆ ನೀಡುತ್ತಿದ್ದು, ಇಂಥ ಚರ್ಚೆಗೆ ತಡೆ ಹಾಕಬೇಕು ಎಂದು ಕೋರಿ ಕಾಂಗ್ರೆಸ್ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಹಾಗೂ ಮಂಜುನಾಥ ಭಂಡಾರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಪತ್ರ ಬರೆದಿದ್ದಾರೆ.

'ಕಾಂಗ್ರೆಸ್ ಪಕ್ಷ ರಾಜ್ಯದ ಕಳೆದ 34 ವರ್ಷಗಳ ಇತಿಹಾಸದಲ್ಲಿಯೇ ಅತಿ ಹೆಚ್ಚು ಮತಗಳನ್ನು ಪಡೆದು, 2023ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ದಾಖಲೆ ಬರೆದಿತ್ತು. ಶೇ.42.88ರಷ್ಟು ಮತ ಗಳಿಸಿ, 135 ಸ್ಥಾನಗಳನ್ನು ಗಳಿಸಿ, ಸರ್ಕಾರ ರಚಿಸಿದೆ. 1989ರ ನಂತರ ಕರ್ನಾಟಕದಲ್ಲಿ ಯಾವುದೇ ಪಕ್ಷಕ್ಕೆ ಲಭಿಸದ ಅತಿ ದೊಡ್ಡ ಗೆಲುವು ಕಾಂಗ್ರೆಸ್‌ಗೆ ಲಭಿಸಿತ್ತು. ಮಾತ್ರವಲ್ಲ, ಸರ್ಕಾರ ಚುಕ್ಕಾಣಿ ಹಿಡಿದ ಆರೇ ತಿಂಗಳಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ಮಾಡುವ ಮೂಲಕ ದೇಶದಲ್ಲೇ ವಿಶಿಷ್ಟ ಹಾಗೂ ಗಮನ ಸೆಳೆಯುವ ಸಾಧನೆ ಮಾಡಿದೆ' ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಜನಪರ ಕಾಳಜಿಯ ಸರ್ಕಾರ:'ಪಕ್ಷದ ವರಿಷ್ಠ ಮಂಡಳಿಯ ಅನುಮೋದನೆಯಿಂದ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತಹ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ ಮುಂತಾದ ಗ್ಯಾರಂಟಿ ಯೋಜನೆಗಳು ಬಡ ಜನರಿಗೆ ಆಶ್ರಯವಾಗಿವೆ. ಮಹಿಳಾ ಸಬಲೀಕರಣಕ್ಕೆ ವಿಶಿಷ್ಟ ಅರ್ಥ ನೀಡಿವೆ ಎಂಬುದಕ್ಕೆ ಸಾಕಷ್ಟು ಸಾಕ್ಷ್ಯಗಳಿವೆ. ಗ್ಯಾರಂಟಿ ಯೋಜನೆಗಳು ಜನಜನಿತವಾಗಿವೆ. ಇವಕ್ಕೆಲ್ಲ ಕಾರಣ ಕಾಂಗ್ರೆಸ್ ಪಕ್ಷದ ನೇತೃತ್ವದ ಸರ್ಕಾರ ಹಾಗೂ ಜನಪರ ಕಾಳಜಿ ಎಂಬುದರಲ್ಲಿ ಎರಡು ಮಾತಿಲ್ಲ' ಎಂದು ತಿಳಿಸಿದ್ದಾರೆ.

ಸಚಿವರ ಹೇಳಿಕೆಗಳಿಂದ ಮುಜುಗರ: 'ಗ್ಯಾರಂಟಿ ಯೋಜನೆಗಳ ಯಶಸ್ಸಿನಿಂತ ಆತಂಕಿತವಾಗಿರುವ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪಕ್ಷಗಳು ಮುಡಾ ಹಗರಣ ಎಂಬ ಹುರುಳಿಲ್ಲದ ಸುಳ್ಳು ಆರೋಪ ಮಾಡಿ, ಸರ್ಕಾರವನ್ನು ಅಭದ್ರ ಮಾಡಲು ಹೊರಟಿವೆ. ಆದರೆ, ಕಾಂಗ್ರೆಸ್ ಸರ್ಕಾರದ ಭಾಗವಾಗಿರುವ ಸಚಿವರು ತಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡುವ ಮೂಲಕ ಸರ್ಕಾರಕ್ಕೆ ಹಾಗೂ ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿದ್ದಾರೆ' ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಚರ್ಚೆಗಳಿಗೆ ತಕ್ಷಣ ತಡೆ ಹಾಕಿ:'ಕಾಂಗ್ರೆಸ್ ದೇಶದ ಸ್ವಾತಂತ್ರ‍್ಯಕ್ಕಾಗಿ ಹೋರಾಡಿದ ಶಿಸ್ತಿನ ಪಕ್ಷ. ಮುಖ್ಯಮಂತ್ರಿ ಮುಂತಾದ ಮಹತ್ವದ ಸ್ಥಾನಗಳು ಹೈಕಮಾಂಡ್ ಹಂತದಲ್ಲಿ ನಿರ್ಧಾರವಾಗುತ್ತವೆ, ಆಗಬೇಕು ಎಂಬುದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಹಾಗಿರುವಾಗ ಸಚಿವರ ಹಾಗೂ ಪಕ್ಷದ ಕೆಲ ಹಿರಿಯರ ಹೇಳಿಕೆಗಳಿಂದ ಮಾಧ್ಯಮಗಳಲ್ಲಿ ಈಗ ಮುಖ್ಯಮಂತ್ರಿ ಬದಲಾವಣೆ ವಿಷಯ ಚರ್ಚೆಯಾಗುತ್ತಿದೆ. ಸರ್ಕಾರದ ಭಾಗವಾಗಿರುವ ಸಚಿವರ ಲಗಾಮಿಲ್ಲದ ಹೇಳಿಕೆಗಳಿಂದ ಮುಂದೆ ಪಕ್ಷದ ವರ್ಚಸಿಗೆ ದಕ್ಕೆ ತರುವ ಹಾಗೂ ಸರ್ಕಾರದ ಅಭದ್ರತೆಯ ಬಗ್ಗೆ ಚರ್ಚೆಗಳಿಗೆ ಎಡೆಮಾಡಿ ಕೊಟ್ಟಂತಾಗುತ್ತದೆ.. ಹಾಗಾಗಿ ಇಂಥ ಚರ್ಚೆಗಳಿಗೆ ತಕ್ಷಣ ತಡೆ ಹಾಕುವ ಅವಶ್ಯಕತೆ ಇದೆ' ಎಂದು ಮನವಿ ಮಾಡಿದ್ದಾರೆ.

ಜನರ ಸಮಸ್ಯೆ ಆಲಿಸಲಿ: 'ಸಚಿವರಾಗಿ ಅಧಿಕಾರ ವಹಿಸಿಕೊಂಡವರು ತಮ್ಮ ಇಲಾಖೆಗೆ ಕಳೆದ ಆಯವ್ಯಯದಲ್ಲಿ ನೀಡಿದ ಕೊಡುಗೆಗಳ ಜಾರಿಗೆ ಕ್ರಮ ವಹಿಸಲಿ. ಸಾರ್ವಜನಿಕರಿಗೆ, ರಾಜ್ಯದ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಮುಖ್ಯಮಂತ್ರಿಗಳು ಘೋಷಣೆ ಮಾಡಿದ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ಜನರ ಸಮಸ್ಯೆಗಳನ್ನು ಆಲಿಸಬೇಕು. ರಾಜ್ಯದ ಜನರ ಆಶೋತ್ತರಗಳಿಗೆ ಸ್ಪಂದಿಸಬೇಕು. ಅದನ್ನು ಬಿಟ್ಟು ಮುಖ್ಯಮಂತ್ರಿ ಆಕಾಂಕ್ಷಿ ಎಂದು ಹೇಳಿಕೊಂಡು ಹೋಗುವುದು ತಪ್ಪು. ಅಂಥವರ ಮೇಲೆ ಶಿಸ್ತುಕ್ರಮದ ಎಚ್ಚರಿಕೆ ನೀಡಬೇಕು' ಎಂದು ಪತ್ರದಲ್ಲಿ ವಿನಂತಿಸಿದ್ದಾರೆ.

ಇದನ್ನೂ ಓದಿ:ಸಿಎಂ ಬದಲಾವಣೆ ಚರ್ಚೆ ನಡೆದಿಲ್ಲ, ಬಿಜೆಪಿಯಿಂದ ಅಧಿಕಾರ ದುರ್ಬಳಕೆ: ಸಚಿವ ಖರ್ಗೆ - Priyank kharge on cm change

ABOUT THE AUTHOR

...view details