ಹೆಚ್.ವಿಶ್ವನಾಥ್ (ETV Bharat) ಮೈಸೂರು: ಮುಖ್ಯಮಂತ್ರಿಗಳು ಸದನ ಕರೆಯಬೇಕು. ಯಾಕೆಂದರೆ ಸಾಮಾನ್ಯ ಜನರಿಗೆ ಹೊರೆಯಾಗುವಂತೆ ಅಗತ್ಯ ವಸ್ತುಗಳ ಬೆಲೆ ಏರಿಸುವುದಿಲ್ಲ ಎಂದು ಅವರು ವಚನ ಕೊಟ್ಟಿದ್ದರು. ಈಗ ದಿಢೀರ್ ಎಂದು ಹಾಲಿನ ದರ ಏರಿಸಿದ್ದಾರೆ. ಕನ್ನಡಿಗರು ದಡ್ಡರು ಎಂದುಕೊಂಡರಾ ಸಿದ್ದರಾಮಯ್ಯನವರೇ?. ಜನರು ನಿಮಗಿಂತ ಬುದ್ಧಿವಂತರಿದ್ದಾರೆ. ವಚನ ಕೊಟ್ಟು ದರ ಏರಿಸಿದ ನೀವು ವಚನ ಭ್ರಷ್ಟರಾಗಿದ್ದೀರಿ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು.
ನಗರದ ಪತ್ರಿಕಾ ಭವನದಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಗೆ ಮುನ್ನ ಜನರಿಗೆ ಯಾವುದೇ ಬೆಲೆ ಹೆಚ್ಚಿಸುವುದಿಲ್ಲ ಎಂದು ವಚನ ನೀಡಿದ್ದರು. ಆದರೆ ಈಗ ಮಾಡುತ್ತಿರುವುದೇನು?. ಜನರಿಗೆ ಟೋಪಿ ಹಾಕುವ ಕೆಲಸ ಮಾಡುತ್ತಿದ್ದೀರಿ. ಮನೆಯಲ್ಲಿ ಕಾಫಿ, ಟೀ ಕುಡಿಯಲು ಜಿಎಸ್ಟಿ ಕಟ್ಟಬೇಕಾದ ಪರಿಸ್ಥಿತಿ ಇದೆ ಎಂದರು.
ತುರ್ತು ಪರಿಸ್ಥಿತಿಯಿಂದ ಬಡವರಿಗೆ ಲಾಭ: ತುರ್ತು ಪರಿಸ್ಥಿತಿಯಿಂದ ಬಡವರಿಗೆ ಒಳ್ಳೆಯದಾಗಿದೆ. ಕಳೆದ 50 ವರ್ಷಗಳಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಅಂದು ಊಟ ಮಾಡಲೂ ಕಷ್ಟ ಇತ್ತು. ಈಗ ಪರಿಸ್ಥಿತಿ ಬದಲಾಗಿದೆ. ತುರ್ತು ಪರಿಸ್ಥಿತಿಯನ್ನು ದೇವರಾಜ್ ಅರಸು ಚೆನ್ನಾಗಿ ಬಳಸಿಕೊಂಡರು. ತುರ್ತು ಪರಿಸ್ಥಿತಿಯಿಂದ ಬಡವರಿಗೆ ಲಾಭವಾಗಿದೆ. ಈಗ ಈ ವಿಚಾರವನ್ನು ಇಟ್ಟುಕೊಂಡು ಬಿಜೆಪಿಯವರು ಪ್ರತಿಭಟನೆ ಮಾಡುವುದು ಸರಿಯಲ್ಲ ಎಂದು ಹೇಳಿದರು.
ದರ್ಶನ ಕೇಸ್- 'ಅಂಧಾಭಿಮಾನ ಹೆಚ್ಚು ದಿನ ಇರಲ್ಲ':ನಟ ದರ್ಶನ್ ಅಭಿಮಾನಿಗಳ ಅಂಧಾಭಿಮಾನದ ಬಗ್ಗೆ ಮಾತನಾಡುತ್ತಾ, ಅಂಧಾಭಿಮಾನ ಹೆಚ್ಚು ದಿನ ಇರುವುದಿಲ್ಲ. ಭೂಮಿ, ನೀರು ಕೊಟ್ಟ ದೇವರಾಜ ಅರಸುರನ್ನೇ ಮರೆತುಬಿಟ್ಟರು ಜನ. ಇನ್ನು ಇದೆಲ್ಲಾ ಎಷ್ಟು ದಿನ ಇರುತ್ತದೆ?. ದರ್ಶನ್ ನಮ್ಮೂರಿನವನು. ಜನ ಎಲ್ಲಾ ರೀತಿಯ ಪ್ರೋತ್ಸಾಹ, ಅಭಿಮಾನ ಕೊಟ್ಟರು. ರಾಮಾಯಣವೂ ಹೆಣ್ಣಿಗಾಗಿ ನಡೆಯಿತು. ದರ್ಶನ್ ಸಹ ಹೆಣ್ಣಿಗಾಗಿಯೇ ಜೈಲಿಗೆ ಹೋಗುವಂತಾಯಿತು ಎಂದರು.
ಇದನ್ನೂ ಓದಿ:ಹಾಲಿನ ದರ ಹೆಚ್ಚಳವಾಗಿಲ್ಲ, ಹೋಟೆಲ್ಗಳು ಕಾಫಿ, ಟೀ ದರ ಹೆಚ್ಚಿಸಲು ಹೇಗೆ ಸಾಧ್ಯ?: ಸಿಎಂ ಸಿದ್ದರಾಮಯ್ಯ - CM Siddaramaiah clarification