ಮೈಸೂರು: ಜಾತಿಗಣತಿ ವರದಿಯನ್ನು ಸಿದ್ದರಾಮಯ್ಯ ಓದಿದ್ದಾರೋ ಇಲ್ಲವೋ ಗೊತ್ತಿಲ್ಲ. ಬರೀ ಬುರುಡೆ ಬಿಟ್ಟುಕೊಂಡು ಓಡಾಡುತ್ತಿದ್ದಾರೆ. ತಮ್ಮ ರಕ್ಷಣೆಗಾಗಿ ಅಹಿಂದ ಕಾರ್ಡ್, ಜಾತಿಗಣತಿ ಕಾರ್ಡ್ ಇಟ್ಟುಕೊಂಡಿದ್ದಾರೆ. ಸಿದ್ದರಾಮಯ್ಯ ಅವರದ್ದು ಬರೀ ಉತ್ತರನ ಪೌರುಷ ಅಷ್ಟೇ ಎಂದು ಎಂಎಲ್‌ಸಿ ವಿಶ್ವನಾಥ್ ಹೇಳಿದ್ದಾರೆ.
ನಗರದ ಜಲದರ್ಶಿನಿಯಲ್ಲಿ ಪ್ರತಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಜಾತಿಗಣತಿ ವರದಿಯನ್ನು ಬಿಡುಗಡೆ ಮಾಡದೇ, ಇಟ್ಟುಕೊಂಡಿದ್ದೀರಾ, ಉತ್ತರನ ಪೌರುಷ ಒಲೆ ಮುಂದೆ ಅನ್ನೋ ಥರ. ಕ್ಯಾಬಿನೆಟ್ ಅಲ್ಲಿ ತೀರ್ಮಾನ ಅಂದ್ರು ಏನಾಯ್ತು? ಸಿದ್ದರಾಮಯ್ಯ ಅವರೇ ಮೊದಲು ಜಾತಿಗಣತಿ ವರದಿ ಬಿಡುಗಡೆ ಮಾಡಿ. ಕರ್ನಾಟಕಕ್ಕೆ ನೀವೇ ಹೈಕಮಾಂಡ್, ನಿಮಗೆ ಹೈಕಮಾಂಡ್ ಹೆದರುತ್ತೆ. ಅಹಿಂದ, ಅಹಿಂದ ಅಂತೀರಾ ಜಾತಿಗಣತಿ ವರದಿ ಬಿಡುಗಡೆ ಮಾಡಿ. ನೀವು ಜಾತಿಗಣತಿ ವರದಿಯನ್ನು ನಿಮ್ಮ ರಕ್ಷಣೆಗೆ ಇಟ್ಟುಕೊಂಡಿದ್ದೀರಾ. 10 ವರ್ಷದಿಂದ ಏಕೆ ಇಟ್ಟುಕೊಂಡಿದ್ದೀರಾ? ಅದನ್ನು ಸಾರ್ವಜನಿಕ ಚರ್ಚೆಗೆ ಬಿಡಿ. ಅದನ್ನು ಬಿಟ್ಟು ಸುಮ್ಮನೇ ಏಕೆ ಮಾತನಾಡುತ್ತೀರಾ? ವರದಿಯನ್ನು ಬಹಿರಂಗ ಮಾಡಿ ಅಧಿಕಾರದ ಕೊನೆಯಲ್ಲಿ ಇದ್ದೀರಿ, ಬಿಡುಗಡೆ ಮಾಡಿ ಎಂದು ಹೇಳಿದರು.
ಹಸುವಿನ ಕೆಚ್ಚಲಿಗೆ ಕೈ ಹಾಕುವ ಸ್ಥಿತಿಗೆ ತಂದಿದ್ದೀರಾ: ಈ ಸರ್ಕಾರದಲ್ಲಿ ಹಸುವಿನ ಕೆಚ್ಚಲು ಕೊಯ್ಯುವ ಸ್ಥಿತಿಗೆ ಬಂದಿದೆ. ಗೋಮಾತೆಯನ್ನು ಈ ಮಟ್ಟಿಗೆ ತಂದ್ರಲ್ಲ ಸಿದ್ದರಾಮಯ್ಯನವರೇ? ಮೈಸೂರಲ್ಲೇ ಲೂಟಿ ಮಾಡಿದ ಅಧಿಕಾರಿಗಳನ್ನು ಏನು ಮಾಡಿದ್ರಿ. 5 ಸಾವಿರ ಕೋಟಿ ನುಂಗಿದವರನ್ನು, ಸೈಟುಗಳನ್ನು ಕದ್ದವರನ್ನು, ನಿಮ್ಮ ಕೈಯಲ್ಲಿ ಏನು ಮಾಡೋದಕ್ಕೆ ಆಗ್ಲಿಲ್ಲ ಎಂದು ಗರಂ ಆದರು.
ಕೆಟ್ಟ ಅಧಿಕಾರಿಗಳು ಹಣ ನುಂಗಿದ್ದಾರೆ. 1 ಸಾವಿರಕ್ಕೆ ಸೈಟ್ ಪಡೆದಿದ್ದಾರೆ. ಸಿಎಂಗೆ ಇದರ ಬಗ್ಗೆ ಮಾತನಾಡುವ ದಮ್ಮಿಲ್ಲ. ಏಕೆಂದರೆ ನೀವು ಕೂಡ ಅಕ್ರಮದಲ್ಲಿ ಭಾಗಿಯಾಗಿದ್ದೀರಿ ಅಲ್ಲವೇ? ನಿಮ್ಮ ಸರ್ಕಾರ ವಿಜಯನಗರದ ಕಾಲದ ವೈಭವದ ಕಾಲ ಅನ್ಕೋಬೇಕು ಅಷ್ಟೇ ಎಂದು ಸಿಎಂ ವಿರುದ್ದ ವಾಗ್ದಾಳಿ ನಡೆಸಿದರು.