ಮೈಸೂರು: ''ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಮತ್ತು ತಂಡದ ಸಹಕಾರದಿಂದ ಮುಡಾ ಅಧಿಕಾರಿಗಳು ಸುಮಾರು 5 ಸಾವಿರ ಕೋಟಿ ರೂ. ಗಳ ಅವ್ಯವಹಾರ ನಡೆಸಿದ್ದಾರೆ'' ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಆರೋಪಿಸಿದರು.
ನಗರದ ಜಲದರ್ಶಿನಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ಜನಪ್ರತಿನಿಧಿಗಳು - ಅಧಿಕಾರಿಗಳು ಸಿಂಡಿಕೇಟ್‌ವೊಂದನ್ನು ರಚಿಸಿಕೊಂಡಿದ್ದಾರೆ. ಇದರ ಮೂಲಕ ಅವ್ಯವಹಾರ ನಡೆಸಿದ್ದಾರೆ. ಇದರಲ್ಲಿ ಮುಡಾ ಆಯುಕ್ತ ದಿನೇಶ್ ಕುಮಾರ್, ಶಾಸಕ ಕೆ. ಹರೀಶ್‌ಗೌಡ, ರಾಕೇಶ್ ಪಾಪಣ್ಣ, ಮುಡಾ ಅಧ್ಯಕ್ಷ ಕೆ. ಮರೀಗೌಡ, ಹಿಂದಿನ ಅಧ್ಯಕ್ಷ ರಾಜೀವ್, ಆಯುಕ್ತ ನಟೇಶ್, ಮರಿತಿಬ್ಬೇಗೌಡರ ಸಂಬಂಧಿ ಸುದೀಪ್, ದಲ್ಲಾಳಿಗಳಾದ ಉತ್ತಮಗೌಡ, ಮೋಹನ್, ಮುಡಾ ಕಮೀಷನರ್ ಬಾಮೈದ ತೇಜಸ್‌ಗೌಡ, ರೆಕಾರ್ಡ್ ರೂಂ ಅಧಿಕಾರಿ ತ್ರಿಶೂಲ್ ಮತ್ತಿತರರು ಭಾಗಿಯಾಗಿದ್ದಾರೆ'' ದೂರಿದರು.
''ಅವ್ಯವಹಾರದ ವಿಚಾರ ಹೊರಗೆ ಬರುತ್ತಿದ್ದಂತೆ, ಭಾನುವಾರವಾದರೂ ಅಧಿಕಾರಿಗಳು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅಣತಿ ಮೇರೆಗೆ ಮುಡಾದ ಕಡತಗಳನ್ನು ದೊಡ್ಡ- ದೊಡ್ಡ ಸೂಟ್‌ಕೇಸ್‌ಗಳಿಲ್ಲಿ ಬೆಂಗಳೂರಿಗೆ ತೆಗೆದುಕೊಂಡು ಹೋಗಿದ್ದಾರೆ. ಅಲ್ಲಿ ಏನು-ಏನನ್ನೋ ಸರಿಮಾಡುತ್ತಾರೋ ನೋಡಬೇಕು. ರಿಯಲ್ ಎಸ್ಟೆೆಟ್ ನಡೆಸುತ್ತಿದ್ದದ್ದವನಿಗೆ ತಮ್ಮ ಶಿಷ್ಯ ಎನ್ನುವ ಕಾರಣಕ್ಕಾಗಿ ಸಿದ್ದರಾಮಯ್ಯ ನಗರಾಭಿವೃದ್ದಿ ಖಾತೆ ಕೊಟ್ಟರೆ, ಆತ ಎಲ್ಲವನ್ನೂ ಕುಲಗೆಡಿಸಿ ಬಿಟ್ಟಿದ್ದಾನೆ'' ಎಂದು ಆರೋಪಿಸಿದರು.
''ಮುಡಾದ ಸಭೆಯಲ್ಲಿ ಏನಾಗುತ್ತದೆ ಎಂದು ಯಾರಿಗೂ ತಿಳಿಯುವುದಿಲ್ಲ. ಯಾವ ಅಜೆಂಡಾವೂ ಇರುವುದಿಲ್ಲ. ಯಾವ ವಿಷಯವನ್ನು ತರುತ್ತಾರೆ. ಯಾವ ವಿಷಯ ಚರ್ಚೆಯಾಗುತ್ತದೆ ಎನ್ನುವುದು ಕೂಡಾ ತಿಳಿಯುವುದಿಲ್ಲ. ವಿಷಯಗಳು ಹೊರಗೆ ಬರುವುದೇ ಇಲ್ಲ. ಆದರೆ ರೆಕಾರ್ಡ್ ಆಗಿರುತ್ತದೆ. ಇದಕ್ಕಾಗಿಯೇ ಕೆಲವು ಎಂಎಲ್ಎ, ಎಂಎಲ್ಸಿಗಳು ಇದ್ದಾರೆ. ನಾನು ಈಗಿನ ಅವ್ಯವಹಾರ ಕುರಿತು ಮುಡಾ ಆಯುಕ್ತರಿಗೆ ಪತ್ರ ಬರೆದು ಬಹಳ ದಿನವಾಗಿದೆ. ಇಲ್ಲಿವರೆಗೂ ವಾಪಸ್ ಪ್ರತಿ ಉತ್ತರ ಬಂದಿಲ್ಲ ಎಂದು ಅಸಮಾಧಾನ'' ಹೊರಹಾಕಿದರು.