ಬೆಂಗಳೂರು/ಮೈಸೂರು/ಕಲಬುರಗಿ: ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬೆಂಗಳೂರು ವ್ಯಾಪ್ತಿಯ ಒಂದು ಪದವೀಧರ ಮತ್ತು ಒಂದು ಶಿಕ್ಷಕರ ಕ್ಷೇತ್ರ ಸೇರಿ ಎರಡೂ ಕ್ಷೇತ್ರಗಳನ್ನು ಬಿಜೆಪಿ ಕಳೆದುಕೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿಗಳಿಗೆ ಗೆಲುವು ಲಭಿಸಿದೆ. ಗುರುವಾರ ತಡರಾತ್ರಿವರೆಗೂ ನಗರದ ಆರ್ಟ್ಸ್ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಸಲಾಯಿತು.
ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅ.ದೇವೇಗೌಡ 24,888 ಮತ ಪಡೆದರೆ ಕಾಂಗ್ರೆಸ್ ಅಭ್ಯರ್ಥಿ ರಾಮೋಜಿಗೌಡ 36,729 ಮತ ಪಡೆದು ಹಾಲಿ ಸದಸ್ಯ ದೇವೇಗೌಡರ ವಿರುದ್ಧ ಗೆಲುವಿನ ನಗೆ ಬೀರಿದರು. ಇಲ್ಲಿ ಚಲಾವಣೆಯಾದ 80,080 ಮತಗಳ ಎಣಿಕೆ ಆರು ಸುತ್ತುಗಳಲ್ಲಿ ನಡೆದಿದ್ದು, ಪ್ರಥಮ ಪ್ರಾಶಸ್ತ್ಯದ ಮತಗಳಲ್ಲಿಯೇ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. 8,482 ಮತಗಳು ಅಸಿಂಧುಗೊಂಡಿವೆ.
ತ್ರಿಕೋನ ಸ್ಪರ್ಧೆ ಏರ್ಪಟ್ಟ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ 8,909 ಮತಗಳಿಂದ ಗೆದ್ದಿದ್ದು ಹಾಲಿ ಸದಸ್ಯ ನಾರಾಯಣಸ್ವಾಮಿಗೆ ಸೋಲಾಗಿದೆ. ಇಲ್ಲಿ ಚಲಾವಣೆಯಾದ 24,106 ಮತಗಳ ಎಣಿಕೆ ಏಳು ಸುತ್ತುಗಳಲ್ಲಿ ನಡೆದಿದ್ದು, ಪ್ರಥಮ ಪ್ರಾಶಸ್ತ್ಯದ ಮತಗಳಲ್ಲಿಯೇ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಗೆಲುವು ಸಾಧಿಸಿದ್ದಾರೆ. 704 ಮತಗಳು ತಿರಸ್ಕೃತಗೊಂಡಿವೆ. ಈ ಎರಡೂ ಕ್ಷೇತ್ರಗಳು ಬಿಜೆಪಿಯ ತೆಕ್ಕೆಯಲ್ಲಿದ್ದವು. ಇದೀಗ ಈ ಎರಡೂ ಕ್ಷೇತ್ರಗಳನ್ನು ಬಿಜೆಪಿ ಕಳೆದುಕೊಂಡಿದ್ದು ಕಾಂಗ್ರೆಸ್ ಪಾಲಾಗಿವೆ. ಬಿಜೆಪಿ ಅಭ್ಯರ್ಥಿ ವೈ.ಎ ನಾರಾಯಣಸ್ವಾಮಿ 7,142 ಮತ ಪಡೆದರೆ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ. ಶ್ರೀನಿವಾಸ, ಪಕ್ಷೇತರ ಅಭ್ಯರ್ಥಿ ವಿನೋದ್ ಶಿವರಾಜ್ 6,894 ಮತ ಪಡೆದಿದ್ದಾರೆ.
ಈಶಾನ್ಯದಲ್ಲೂ ಕಾಂಗ್ರೆಸ್: ಲೋಕಸಭಾ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕದ ಐದಕ್ಕೆ ಐದು ಸ್ಥಾನಗಳನ್ನು ಗೆದ್ದು ಬೀಗಿದ ಕೈಪಾಳಯ ಇದೀಗ ಈಶಾನ್ಯ ಪದವೀಧರ ಕ್ಷೇತ್ರದಲ್ಲೂ ಭರ್ಜರಿ ಜಯಬೇರಿ ಬಾರಿಸುವಲ್ಲಿ ಯಶಸ್ವಿಯಾಗಿದೆ. ಕೈ ಪಕ್ಷದ ಅಭ್ಯರ್ಥಿ ಚಂದ್ರಶೇಖರ ಪಾಟೀಲ್ ಸತತ ಎರಡನೇ ಭಾರಿಗೆ ಗೆಲುವಿನ ನಗೆ ಬಿರಿದ್ದಾರೆ. ಇದರೊಂದಿಗೆ ಮತ್ತೊಮ್ಮೆ ಕಲ್ಯಾಣದಲ್ಲಿ ಬಿಜೆಪಿಗೆ ಭಾರಿ ಮುಖಭಂಗವಾಗಿದೆ.
ಗುರುವಾರ ಬೆಳಗ್ಗೆ 8 ಗಂಟೆಯಿಂದ ಮತ ಏಣಿಕೆ ಕಾರ್ಯ ಕಲಬುರಗಿ ನಗರದ ವಿಶ್ವ ವಿದ್ಯಾಲಯ ಆವರಣದಲ್ಲಿ ನಡೆದಿದ್ದು, ಸಂಜೆ 4 ಗಂಟೆವರೆಗೆ ಬ್ಯಾಲೇಟ್ ಪೇಪರ್ ಜೋಡಿಕೆ ಮಾಡಿ ನಂತರ ಮತಗಳ ಎಣಿಕೆ ಕೈಗೊಳ್ಳಲಾಗಿದೆ. ಇಡಿ ರಾತ್ರಿ ಮತಗಳ ಎಣಿಕೆ ನಡೆದು ಶುಕ್ರವಾರ ಬೆಳಗ್ಗೆ 11 ಗಂಟೆಗೆ ಪ್ರಥಮ ಪ್ರಾಶಸ್ತ್ಯದ ಅಂತಿಮ ಎಂಟನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದೆ.
ಪ್ರಥಮ ಪ್ರಾಶಸ್ತ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ್ ಪಾಟೀಲ್ 39,496 ಮತಗಳು ಪಡೆದು 4,446 ಮತಗಳಿಂದ ಪ್ರತಿಸ್ಪರ್ಧಿ ಬಿ.ಜೆ.ಪಿಯ ಅಮರನಾಥ ಪಾಟೀಲ್ ಗಿಂತ ಮುನ್ನಡೆ ಸಾಧಿಸಿದ್ದರು. ಆದರೆ ವಿನ್ನಿಂಗ್ ಕೋಟಾ 48,260 ಫಿಕ್ಸ್ ಮಾಡಿದ್ದರಿಂದ ಎರಡನೇ ಪ್ರಾಶಸ್ತ್ಯ ಮತ ಎಣಿಕೆ ಮಾಡಲಾಯಿತು. ಅದರಲ್ಲೂ ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ್ ಪಾಟೀಲ್ ಭರ್ಜರಿ ಜಯಗಳಿಸಿದ್ದಾರೆ.
ಮೈಸೂರಿನಲ್ಲಿ 3 ಕ್ಷೇತ್ರಗಳ ಮತ ಎಣಿಕೆ: ವಿಧಾನಷರಿಷತ್ನ ಮೂರು ಕ್ಷೇತ್ರಗಳ ಮತ ಎಣಿಕೆ ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಗುರುವಾರ ಬೆಳಗ್ಗೆ 8 ಗಂಟೆಯಿಂದ ಆರಂಭವಾಗಿ ಮಧ್ಯರಾತ್ರಿಯವರೆಗೆ ಮತ ಎಣಿಕೆ ನಡೆಯಿತು. ಮೂರೂ ಕ್ಷೇತ್ರಗಳಲ್ಲೂ ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿವೇಕಾನಂದ ಗೆಲುವು ಸಾಧಿಸಿದರೇ, ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್ ಮೈತ್ರಿ ಅಭ್ಯರ್ಥಿ ಬೋಜೇಗೌಡ ಗೆಲುವು ಸಾಧಿಸಿದ್ದಾರೆ. ನಂತರ ಮಧ್ಯರಾತ್ರಿಯವರೆಗೆ ನಡೆದ ನೈರುತ್ಯ ಪದವೀಧರ ಕ್ಷೇತ್ರದ ಮತ ಎಣಿಕೆಯಲ್ಲಿ ಬಿಜೆಪಿ ಮೈತ್ರಿ ಅಭ್ಯರ್ಥಿ ಧನಂಜಯ್ ಸರ್ಜಿ ಜಯಗಳಿದರು.