ಬೆಂಗಳೂರು: ಬಡವರ 14 ಲಕ್ಷ ಬಿಪಿಎಲ್ ಕಾರ್ಡ್ ಕಿತ್ತುಕೊಳ್ಳುವ ಘೋರ ಅಪರಾಧವನ್ನು ರಾಜ್ಯ ಸರ್ಕಾರ ಮಾಡಿದೆ. ಅದರಲ್ಲೂ ನಮಗೆ ಮತ ಹಾಕಿದ್ದಾರಾ ಎಂದು ಜಾತಿ, ಕೋಮು ಹುಡುಕಿ ಬಿಪಿಎಲ್ ಕಾರ್ಡ್ ರದ್ದು ಮಾಡುತ್ತಿರುವ ದೂರುಗಳಿವೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಆಕ್ಷೇಪಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಬಡವರ ಅನ್ನಕ್ಕೂ ಕನ್ನ ಹಾಕುವ ಪರಮ ಅನ್ಯಾಯ ಇದಾಗಿದೆ ಎಂದು ಟೀಕಿಸಿದರು.
ಜಾತಿ ಹುಡುಕಿ ಕಾರ್ಡ್ ರದ್ದು ಮಾಡಿದ್ದನ್ನು ಸೋಷಿಯಲ್ ಮೀಡಿಯದಲ್ಲಿ ನೋಡಿದ್ದೇನೆ. ಬಡವರ ಅನ್ನಕ್ಕೂ ಕನ್ನ ಹಾಕುವ ಸರ್ಕಾರ ಇದೆಂದು ಆರೋಪಿಸಿದ ಅವರು, ಎಐಸಿಸಿ ಅಧ್ಯಕ್ಷ ಖರ್ಗೆಯವರು ನಿನ್ನೆ ಆರ್ಎಸ್ಎಸ್, ಬಿಜೆಪಿಯನ್ನು ವಿಷ ಸರ್ಪಕ್ಕೆ ಹೋಲಿಸಿದ್ದಾರೆ. ಅನುಭವ ಪಕ್ವತೆ ಪಡೆದುಕೊಳ್ಳಬೇಕು. ಹಿರಿತನಕ್ಕೆ ತಕ್ಕ ಮಾತು ಅದಲ್ಲ; ಅವರ ಮಾತುಗಳು ಹುಚ್ಚುನಾಯಿ ಕಡಿತಕ್ಕೆ ಒಳಗಾದವರು ಆಡುವ ಥರ ಮಾತಿನಂತಿತ್ತು. ಮಲ್ಲಿಕಾರ್ಜುನ ಖರ್ಗೆಯವರು ಆ ಮಾತನಾಡಿದ್ದಾರೋ ಅಥವಾ ಕಾಂಗ್ರೆಸ್ಸಿನ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಖರ್ಗೆಯವರ ಮೂಲಕ ಈ ಮಾತನ್ನಾಡಿಸಿದ್ದಾರೋ ಗೊತ್ತಿಲ್ಲ. ಆದರೆ, ನಿಮ್ಮ ಮಾತು ಸಂವಿಧಾನದ ಮೇಲೆ ನಂಬಿಕೆ ಇಟ್ಟವರ ಮಾತಲ್ಲ. ಹೊಡಿ, ಬಡಿ ಕೊಲ್ಲು ಎಂಬ ತಾಲಿಬಾನಿಗಳ ಮಾತಿಗೆ ವಿಷಾದ ವ್ಯಕ್ತಪಡಿಸಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
ಸಂವಿಧಾನದ ಸಮ್ಮಾನ ಅಭಿಯಾನ:ಸಂವಿಧಾನ ಗೌರವ ದಿವಸ ಆಚರಿಸಲು ಪ್ರಧಾನಿ ಮೋದಿಜೀ ಅವರು ಕ್ರಮ ಕೈಗೊಂಡಿದ್ದಾರೆ. ಡಾ.ಅಂಬೇಡ್ಕರ್ ಅವರು ಸತ್ತಾಗಲೂ ಕಾಂಗ್ರೆಸ್ ಸರ್ಕಾರ ಅವಮಾನ ಮಾಡಿದ್ದನ್ನು, ಅವರು ಚುನಾವಣೆಗೆ ನಿಂತಾಗ ಸೋಲಿಸಿದ್ದನ್ನು ಹಾಗೂ ಕಾಂಗ್ರೆಸ್ ಪಕ್ಷವು ಅವರ ಹೆಸರನ್ನು ಭಾರತ ರತ್ನಕ್ಕೆ ಪರಿಗಣಿಸದೇ ಇರುವುದನ್ನು ಜನರಿಗೆ ತಿಳಿಸುತ್ತೇವೆ. ಸಂವಿಧಾನ ಸಂರಕ್ಷಣೆ, ಸಂವಿಧಾನದ ಸಮ್ಮಾನದ ಅಭಿಯಾನ ಕೈಗೆತ್ತಿಕೊಂಡಿದ್ದು, ಈ ಎಲ್ಲ ಸಂಗತಿಗಳನ್ನು ಜನರ ಮುಂದಿಡಲಿದ್ದೇವೆ ಎಂದು ವಿವರಿಸಿದರು.