ಬೆಂಗಳೂರು : ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಿಚಾರದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಕೋಲಾರ ಜಿಲ್ಲೆಯ ಶಾಸಕರು ರಾಜೀನಾಮೆಗೆ ಮುಂದಾದ ಹೈಡ್ರಾಮ ವಿಧಾನಸೌಧದಲ್ಲಿ ನಡೆಯಿತು.
ಒಂದು ಕಡೆ ಸಚಿವ ಕೆ. ಹೆಚ್ ಮುನಿಯಪ್ಪ ಅವರು ತಮ್ಮ ಅಳಿಯ ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್ ನೀಡುವಂತೆ ಪಟ್ಟುಹಿಡಿದಿದ್ದರೆ, ಇನ್ನೊಂದೆಡೆ ಮಾಜಿ ಸ್ಪೀಕರ್ ಕೆ. ಆರ್ ರಮೇಶ್ ಕುಮಾರ್ ಬಣ ತಾವು ಬೆಂಬಲಿಸುವ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದಾರೆ.
ಒಂದು ವೇಳೆ ಮುನಿಯಪ್ಪ ಕುಟುಂಬಕ್ಕೆ ಟಿಕೆಟ್ ನೀಡಿದರೆ ರಾಜೀನಾಮೆ ನೀಡುವುದಾಗಿ ಸಚಿವ ಡಾ. ಎಂ. ಸಿ ಸುಧಾಕರ್, ಶಾಸಕರಾದ ಕೊತ್ತನೂರು ಮಂಜುನಾಥ್, ಮಾಲೂರು ಶಾಸಕ ನಂಜೇಗೌಡ ಹಾಗೂ ವಿಧಾನಪರಿಷತ್ ಸದಸ್ಯರಾದ ನಜೀರ್ ಅಹ್ಮದ್ ಮತ್ತು ಅನಿಲ್ ಕುಮಾರ್ ಬೆದರಿಕೆ ಹಾಕಿದ್ದಾರೆ.
ರಾಜೀನಾಮೆ ಹೈಡ್ರಾಮ : ಸಚಿವ ಕೆ. ಹೆಚ್ ಮುನಿಯಪ್ಪ ಅವರ ಅಳಿಯನಿಗೆ ಟಿಕೆಟ್ ನೀಡುತ್ತಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಐವರು ಶಾಸಕರು ಇಂದು ವಿಧಾನಸೌಧಕ್ಕೆ ಆಗಮಿಸಿ, ರಾಜೀನಾಮೆ ನೀಡಲು ಮುಂದಾದರು. ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಮಂಗಳೂರಿನಲ್ಲಿ ಇರುವ ಕಾರಣ, ವಿಧಾನಸೌಧದ ವಿಧಾನಸಭೆ ಕಾರ್ಯದರ್ಶಿ ಕೊಠಡಿಗೆ ಆಗಮಿಸಿ ಚರ್ಚೆ ನಡೆಸಿದರು.
ಇನ್ನು ವಿಧಾನ ಪರಿಷತ್ ಸದಸ್ಯರಾದ ನಜೀರ್ ಅಹ್ಮದ್ ಹಾಗೂ ಅನಿಲ್ ಕುಮಾರ್ ಅವರು ರಾಜೀನಾಮೆ ಪತ್ರವನ್ನು ಬರೆದುಕೊಂಡು, ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಸಲ್ಲಿಸಲು ಮುಂದಾದರು. ಅಷ್ಟರಲ್ಲೇ ಕೋಲಾರ ಜಿಲ್ಲೆ ಉಸ್ತುವಾರಿ ಸಚಿವರಾದ ಬೈರತಿ ಸುರೇಶ್ ಅವರು ಹೈಕಮಾಂಡ್ ಸೂಚನೆ ಮೇರೆಗೆ ವಿಧಾನಸೌಧಕ್ಕೆ ಆಗಮಿಸಿ, ಶಾಸಕರ ಮನವೊಲಿಕೆಗೆ ಮುಂದಾದರು.
ಲೋಕಸಭೆ ಟಿಕೆಟ್ ಬಗ್ಗೆ ಇಂದು ರಾತ್ರಿ 8 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ. ಕೆ ಶಿವಕುಮಾರ್ ಸಭೆ ಕರೆದಿದ್ದಾರೆ. ಆ ಸಭೆಯಲ್ಲಿ ಕುಳಿತು ಚರ್ಚೆ ಮಾಡೋಣ. ಈಗ ರಾಜೀನಾಮೆ ಕೊಡುವುದು ಬೇಡ ಎಂದು ವಿಧಾನಪರಿಷತ್ ಸದಸ್ಯರಿಗೆ ಮನವೊಲಿಸಿದರು. ನಂತರ ಅದಕ್ಕೆ ಶಾಸಕರು ಒಪ್ಪಿ ರಾಜೀನಾಮೆ ನೀಡುವುದನ್ನು ಕೈಬಿಟ್ಟರು. ಈ ವೇಳೆ ಸಭಾಪತಿಗಳ ಕೊಠಡಿಯಲ್ಲಿ ಹೈಡ್ರಾಮವೇ ನಡೆಯಿತು.
ಮಂಗಳೂರಿನಲ್ಲಿರುವ ವಿಧಾನಸಭೆ ಸ್ಪೀಕರ್ ಯು. ಟಿ ಖಾದರ್ ಭೇಟಿಗೆ ಕೋಲಾರ ಶಾಸಕರು ಸಮಾಯವಕಾಶ ಕೇಳಿದ್ದರು. ಅಲ್ಲಿಗೆ ತೆರಳಲು ವಿಮಾನ ಟಿಕೆಟ್ ಸಹ ಬುಕ್ ಮಾಡಿದ್ದರು. ಇಂದು ಪರಿಷತ್ ಕಾಂಗ್ರೆಸ್ ಸದಸ್ಯರು ರಾಜೀನಾಮೆ ನೀಡಿಲ್ಲ. ಅವರು ಲೆಟರ್ ಹೆಡ್ ಅಲ್ಲಿ ಬರೆದುಕೊಂಡು ಬಂದಿಲ್ಲ. ಹಾಗಾಗಿ ಬರೆದುಕೊಂಡು ಬನ್ನಿ ಎಂದು ಹೇಳಿದೆ. ಅವರು ನನಗೆ ರಾಜೀನಾಮೆ ಪತ್ರ ಸಲ್ಲಿಸಿಲ್ಲ. ರಾಜೀನಾಮೆ ನೀಡದಂತೆ ಸಚಿವ ಬೈರತಿ ಸುರೇಶ್ ತಡೆದರು. ರಾತ್ರಿ ಎಂಟರವರೆಗೂ ಸಮಯ ತೆಗೆದುಕೊಂಡಿದ್ದಾರೆ. ಅವರು ಯಾವಾಗ ಬೇಕಾದರೂ ಬಂದು ರಾಜೀನಾಮೆ ನೀಡಬಹುದು. ಅದನ್ನು ಅಂಗೀಕರಿಸುತ್ತೇನೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಮಾಧ್ಯಮಗಳಿಗೆ ತಿಳಿಸಿದರು.
ಈ ವೇಳೆ ಸಚಿವ ಎಂ. ಸಿ ಸುಧಾಕರ್ ಮಾತನಾಡಿ, ಮುನಿಯಪ್ಪ ನನ್ನನ್ನು ಎರಡು ಬಾರಿ ಸೋಲಿಸಿದ್ರು. ಆಮೇಲೆ ನಾನು ಪಕ್ಷದಿಂದ ಟಿಕೆಟ್ ಸಿಗದೆ ಪಕ್ಷೇತರವಾಗಿ ಸ್ಪರ್ಧೆ ಮಾಡುವಂತೆ ಮಾಡಿದರು. ಆ ನೋವು ಇದೆ. ಜೊತೆಗೆ ನಮ್ಮ ಕ್ಷೇತ್ರದ ಕಾರ್ಯಕರ್ತರಿಗೂ ಮುನಿಯಪ್ಪ ನೋವು ಕೊಟ್ಟಿದ್ದಾರೆ. ಹೀಗಾಗಿ ಅವರ ಕುಟುಂಬಕ್ಕೆ ಟಿಕೆಟ್ ಕೊಡಬಾರದು. ಸಂಜೆ ಡಿಸಿಎಂ ಬಂದು ಮಾತನಾಡುವೆ ದುಡುಕಬೇಡಿ ಅಂದಿದ್ದಾರೆ ಎಂದು ಹೇಳಿದರು.
ಶಾಸಕ ನಂಜೇಗೌಡ ಮಾತನಾಡಿ, ದಲಿತ ಬಲಗೈ ಸಮುದಾಯದಲ್ಲಿ ಯಾರಿಗೇ ಕೊಟ್ಟರೂ ನಮ್ಮ ಅಭ್ಯಂತರ ಇಲ್ಲ. ಮುನಿಯಪ್ಪ ಅವರು ವಿಧಾನಸಭೆ ಚುನಾವಣೆಯಲ್ಲಿ ನಮ್ಮೆಲ್ಲರನ್ನು ಸೋಲಿಸುವುದಕ್ಕೆ ಪ್ರಯತ್ನ ಪಟ್ಟಿದ್ದರು. ಈಗ ಅವರ ಪರ ಅಭ್ಯರ್ಥಿಗೆ ಟಿಕೆಟ್ ಕೊಡಬಾರದು. ಕೋಲಾರದಲ್ಲಿ ಪಕ್ಷ ಕಟ್ಟುವುದಕ್ಕೆ ತುಂಬಾ ಕಷ್ಟಪಟ್ಟಿದ್ದೇವೆ ಎಂದು ಮುನಿಯಪ್ಪ ವಿರುದ್ಧ ಕಿಡಿಕಾರಿದರು.
ಇದನ್ನೂ ಓದಿ :ಕೋಲಾರ ಕಾಂಗ್ರೆಸ್ ಟಿಕೆಟ್ ಬಿಕ್ಕಟ್ಟು: ಶಾಸಕರ ರಾಜೀನಾಮೆ ವಿಚಾರವನ್ನು ಅವರಿಗೇ ಕೇಳಿ ಎಂದ ಮುನಿಯಪ್ಪ - Kolar Congress Ticket Issue