ಚಿಕ್ಕಬಳ್ಳಾಪುರ:ಇಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ ಅವರು ನಾಮಪತ್ರ ಸಲ್ಲಿಸಿದರು. ಈ ವೇಳೆ ಸುಧಾಕರ್ ಅವರಿಗೆ ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್ ಸಾಥ್ ನೀಡಿದ್ದು, ಮತಯಾಚನೆ ನಡೆಸಲು ಸಕಲ ಸಿದ್ಧತೆಯನ್ನು ನಡೆಸಿಕೊಂಡು ಬಂದಿದ್ದರು. ಅಲ್ಲದೆ, ಸ್ಟಾರ್ ಪ್ರಚಾರಕಿ ನಟಿ ತಾರಾ ಕೂಡ ಜೊತೆಗಿದ್ದರು.
ಇದಕ್ಕೂ ಮುನ್ನ ಎಸ್.ಆರ್ ವಿಶ್ವನಾಥ್ ತನ್ನ ಮಗನಿಗೆ ಟಿಕೆಟ್ ಸಿಗಲಿಲ್ಲವೆಂದು ಸಾಕಷ್ಟು ಬೇಸರವನ್ನು ವ್ಯಕ್ತಪಡಿಸಿ ಸುಧಾಕರ್ ಪರ ಮತಯಾಚನೆ ನಡೆಸುವುದಿಲ್ಲ ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದರು. ಆದರೆ ಕಳೆದ ಎರಡು ದಿನಗಳ ಹಿಂದೆ ಕೇಂದ್ರ ಸಚಿವ ಅಮಿತ್ ಶಾ ಮತ್ತು ರಾಜ್ಯ ಬಿಜೆಪಿ ನಾಯಕರು ನಡೆಸಿದ ಸಂಧಾನ ಯಶಸ್ವಿಯಾಗಿದ್ದು, ಇದರ ಫಲವಾಗಿ ಇಂದು ತಮ್ಮ ಬೆಂಬಲವನ್ನು ಸುಧಾಕರ್ ಅವರಿಗೆ ವಿಶ್ವನಾಥ್ ಸೂಚಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಎಸ್.ಆರ್ ವಿಶ್ವನಾಥ್, ಲೋಕಸಭೆ ಚುನಾವಣೆ ವೇಳೆ ನರೇಂದ್ರ ಮೋದಿ ಪರವಾಗಿ ನಡೆಯುತ್ತಿದೆ. ಮೋದಿ ಹೆಸರು ಇಲ್ಲ ಎಂದರೆ ಯಾರು ಮತವನ್ನು ಕೊಡುವುದಿಲ್ಲ. ನಮ್ಮ ಹೆಸರು ಹೇಳಿದರೆ ಯಾವುದೋ ಒಂದು ಲೋಪವಿರುತ್ತದೆ. ಆದ್ದರಿಂದ ಮೋದಿ ಹೆಸರಿನಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ನಮ್ಮ ಕ್ಷೇತ್ರದಲ್ಲಿ ಬಿಜೆಪಿಗೆ ಲೀಡ್ ಕೊಡಿಸುವುದಾಗಿ ಮಾಹಿತಿ ನೀಡಿದ್ದೇನೆ. ಅದರಂತೆ ಕ್ಷೇತ್ರದಲ್ಲಿ ಲೀಡ್ ಕೊಡಿಸಲಿದ್ದೇನೆ. ಅಭ್ಯರ್ಥಿಯ ಗೆಲುವಿಗೆ ಶ್ರಮವಹಿಸಲಿದ್ದೇನೆ ಎಂದರು.