ಕರ್ನಾಟಕ

karnataka

ETV Bharat / state

ದೇವಸ್ಥಾನ ಕೆಡವಲು ಬಂದರೆ ತಕ್ಕ ಪಾಠ ಕಲಿಸುತ್ತೇವೆ : ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ - TEMPLE DEMOLISH

ಶಾಸಕ ಸತೀಶ್​ ರೆಡ್ಡಿ ಅವರು ಹಿಂದೂ ದೇವಸ್ಥಾನ ಒಡೆಯಲು ಬಂದರೆ ನಿಮಗೆ ಸರಿಯಾದ ಪಾಠ ಕಲಿಸುತ್ತೇವೆ ಎಂದು ಕಾಂಗ್ರೆಸ್​ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

Bommanahalli-mla-satish-reddy
ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಮಾತನಾಡಿದರು (ETV Bharat)

By ETV Bharat Karnataka Team

Published : 5 hours ago

ಬೆಂಗಳೂರು :ರಾಜ್ಯದಲ್ಲಿ ಅಭಿವೃದ್ಧಿ ವಿರೋಧಿ ಧೋರಣೆ ಅನುಸರಿಸುತ್ತಿದ್ದು, ಅಧಿಕಾರಕ್ಕೆ ಬಂದ ನಂತರ ಜನರನ್ನು ಕಾಂಗ್ರೆಸ್ ಸರ್ಕಾರ ಮರೆಯುತ್ತಿದೆ. ಹಿಂದೂ ದೇವಸ್ಥಾನವನ್ನು ಒಡೆಯುವ, ತೆರವುಗೊಳಿಸುವ, ದೇವಾಲಯದ ಅಭಿವೃದ್ಧಿಗೆ ಅಡ್ಡಿಪಡಿಸುವ ಕಾರ್ಯವನ್ನು ನಾವೆಂದಿಗೂ ಸಹಿಸುವುದಿಲ್ಲ. ದೇವಸ್ಥಾನ ಒಡೆಯಲು ಬಂದರೆ ನಿಮಗೆ ಸರಿಯಾದ ಪಾಠ ಕಲಿಸುತ್ತೇವೆ ಎಂದು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಎಚ್ಚರಿಸಿದ್ದಾರೆ.

ಜೆಪಿ ನಗರ ಪುಟ್ಟೇನಹಳ್ಳಿ ಕೆರೆ ಆವರಣದಲ್ಲಿ ತಮ್ಮ ಹುಟ್ಟುಹಬ್ಬದ ಹಿನ್ನೆಲೆ ಮಹಿಳೆಯರಿಗೆ ಬಾಗಿನ ಅರ್ಪಿಸಿ, ವಿವಿಧ ಸ್ಪರ್ಧೆಗಳಲ್ಲಿ ಗೆದ್ದವರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು. ಹಿಂದೂಗಳಲ್ಲಿ ಒಡಕಿರಬಾರದು. ನಾವೆಲ್ಲಾ ಒಂದಾಗಿರಬೇಕು. ಹಾಗೆಂದು ನಾವು ಮುಸ್ಲಿಂ ವಿರೋಧಿಗಳಲ್ಲ. ಎಲ್ಲಾ ಜನ ಸಮುದಾಯ ಒಗ್ಗಟ್ಟಾಗಿರೋಣ. ನಮ್ಮ ಅಭಿವೃದ್ಧಿಗೆ ಅಡ್ಡಿಪಡಿಸುವವರಿಗೆ ತಕ್ಕ ಪ್ರತ್ಯುತ್ತರ ನೀಡೋಣ ಎಂದು ಕರೆ ನೀಡಿದರು.

ಮಹಿಳೆಯರಿಗೆ ಬಹುಮಾನ ವಿತರಿಸಿದ ಶಾಸಕ ಸತೀಶ್​ ರೆಡ್ಡಿ (ETV Bharat)

ಇಲ್ಲಿನ ಸಾರಕ್ಕಿ ಕೆರೆ, ಜರಗನಹಳ್ಳಿ, ಪುಟ್ಟೇನಹಳ್ಳಿ ಭಾಗದಲ್ಲಿ ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ಇತ್ತು. ಇದೀಗ ಸುಂದರ ಕೆರೆ, ಉತ್ತಮ ಪರಿಸರದ ವಾತಾವರಣ ನಿರ್ಮಿಸಲಾಗಿದೆ. ಆದರೆ ಕಾಂಗ್ರೆಸ್​ನವರು ಅಭಿವೃದ್ಧಿ ಕೆಲಸಗಳನ್ನು ತಡೆ ಹಿಡಿಯುವ ಕೆಲಸ ಮಾಡುತ್ತಿದ್ದಾರೆ. ಸಚಿವ ಜಮೀರ್ ಅಹಮದ್ ಖಾನ್ ಅವರು ಸಹ ನಮ್ಮ ದೇವಸ್ಥಾನಗಳ ಮೇಲೆ ಕಣ್ಣು ಹಾಕಿದ್ದಾರೆ. ಅವರ ಮೇಲೆ ಕಾನೂನು ಕ್ರಮ ಕೈಗೊಂಡು ಬಂಧಿಸಬೇಕು. ಬಿಬಿಎಂಪಿ ಕಟ್ಟಿರುವ ಆಸ್ತಿಯನ್ನು ಕೆಡವಲು ಹೊರಟಿದ್ದು, ಸಮಾಜ ದ್ರೋಹಿ ವ್ಯಕ್ತಿಗಳನ್ನು ಸೆರೆಮನೆಗೆ ಕಳುಹಿಸುವುದು ನಮ್ಮ ಗುರಿಯಾಗಿದೆ ಎಂದು ಸತೀಶ್​ ರೆಡ್ಡಿ ಹೇಳಿದರು.

ಜನ ಸದಾ ಕಾಲ ಅಭಿವೃದ್ಧಿ ಕೆಲಸ ಮಾಡುವವರ ಪರವಾಗಿರುತ್ತಾರೆ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಜನ ಮೆಚ್ಚುತ್ತಾರೆ. ಅವರು ಬಡವರ ಪರವಾಗಿದ್ದು, ಜನಪರ ಕೆಲಸ ಮಾಡುತ್ತಿದ್ದಾರೆ. ನಮ್ಮ ಕ್ಷೇತ್ರದಲ್ಲಿ ಪಾರ್ಕ್ ಒತ್ತುವರಿ ಮಾಡಿಕೊಂಡಿದ್ದವರು ಕಾಂಗ್ರೆಸ್ ನಾಯಕರಾಗಿದ್ದಾರೆ. ಶಾಸಕರಾದ ನಂತರ ಕ್ಷೇತ್ರದಲ್ಲಿ ಒಂದು ಲಕ್ಷ ಬಿಪಿಎಲ್ ಕಾರ್ಡ್ ನೀಡಿದ್ದೇವೆ. ಈಗ ಕಾಂಗ್ರೆಸ್​ನವರು ಬಿಪಿಎಲ್ ಕಾರ್ಡ್ ರದ್ದು ಮಾಡುತ್ತಿದ್ದಾರೆ. ಶಕ್ತಿ ಯೋಜನೆ ಬೇಡ ಎಂದು ಡಿ. ಕೆ ಶಿವಕುಮಾರ್ ಹೇಳುತ್ತಿದ್ದಾರೆ. ಯಾವ ಹೆಣ್ಣುಮಕ್ಕಳು ಬಸ್ ಬೇಡ ಎಂದು ಹೇಳಿಲ್ಲ. ಇದು ಕಾಂಗ್ರೆಸ್ ಸರ್ಕಾರ ಕೆಲಸ ಮಾಡುವ ಪರಿ ಎಂದು ಅವರು ವ್ಯಂಗ್ಯವಾಡಿದರು.

ವಿವಿಧ ಸ್ಪರ್ಧೆಗಳಲ್ಲಿ ಗೆದ್ದವರಿಗೆ ಬಹುಮಾನ ವಿತರಣೆ (ETV Bharat)

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರತಿ ಯೂನಿಟ್ ವಿದ್ಯುತ್ ದರ 4.25 ರೂ. ನಿಂದ ಕೇವಲ ಒಂದು ವರ್ಷದಲ್ಲಿ 9 ರೂ.ಗೆ ಏರಿಕೆ ಮಾಡಿದ್ದಾರೆ. ಉಪ ಚುನಾವಣೆಯಲ್ಲಿ ಹೇಗೋ ಕಾಂಗ್ರೆಸ್​ನವರು ಗೆದ್ದಿದ್ದಾರೆ. ಆದರೆ ಈಗ ಚುನಾವಣೆ ಬಂದರೆ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಅಭಿವೃದ್ಧಿಗೆ ಅಡ್ಡಿ ಮಾಡುವವರಿಗೆ ಇದು ಕೊನೆ ಎಚ್ಚರಿಕೆಯಾಗಿದೆ. ನಮ್ಮ ತಂಟೆಗೆ ಬಂದರೆ ಸರಿಯಾದ ಪಾಠ ಕಲಿಸುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಉಪ ಮೇಯರ್ ರಾಮ್ ಮೋಹನ್ ರಾಜ್ ಮಾತನಾಡಿ, ಎರಡು ದಶಕಗಳಿಂದ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸತೀಶ್ ರೆಡ್ಡಿ ಇನ್ನೂ ಉನ್ನತ ಸ್ಥಾನಕ್ಕೆ ಏರಲಿ. ರಾಜಕೀಯ ಎಂದರೆ ಅದು ಜನ ಸೇವೆ. ಸೇವೆಯಲ್ಲಿ ಪೈಪೋಟಿ ಇರಬೇಕೆ ಹೊರತು, ಕುತಂತ್ರ ರಾಜಕಾರಣದಲ್ಲಿ ಅಲ್ಲ ಎಂದರು. ಕಾರ್ಯಕ್ರಮದಲ್ಲಿ ಮಾಜಿ ಬಿಬಿಎಂಪಿ ಸದಸ್ಯರಾದ ಜಾಲಿ ರಮೇಶ್ ಉಪಸ್ಥಿತರಿದ್ದರು.

ಇದನ್ನೂ ಓದಿ :ಅಧಿವೇಶನದ ಮೊದಲ ದಿನವೇ ವಕ್ಫ್, ಪಂಚಮಸಾಲಿ ಮೀಸಲಾತಿ ಸದ್ದು; ಸದನದಲ್ಲಿ ಮಾತಿನ ಚಕಮಕಿ, ಗದ್ದಲ - BELAGAVI WINTER SESSION

ABOUT THE AUTHOR

...view details